ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ ಆಂದು ಆನೆಗಳ ಸಂಖ್ಯೆ ಎರಡು ಸಾವಿರ ಸಂಖ್ಯೆ ಗಡಿದಾಟಿದ ಸಂದರ್ಭದಲ್ಲಿಯೇ ಎಚ್ಚೆತ್ತು ಕೊಂಡು ಕಾರ್ಯ ಯೋಜನೆ ರೂಪಿಸಿತ್ತು ಅರಣ್ಯ ಇಲಾಖೆ. ಈಗ ಆನೆಗಳ ಸಂಖ್ಯೆ ಆರು ಸಾವಿರ ಗಡಿ ದಾಟಿದ್ರೂ ಅರಣ್ಯ ಇಲಾಖೆ ಏಕೆ ಎಚ್ಚೆತ್ತುಕೊಂಡಿಲ್ಲ. ಅಂದಿನ ಖೆಡ್ಡಾ ಗಳ ವ್ಯವಸ್ಥೆ ಹೇಗಿತ್ತು…ಈಗ ಮತ್ತೊಮ್ಮೆ ಕಾಡಾನೆಗಳ ಸೆರೆ ಕಾರ್ಯಾಚರಣೆ ಅನಿವಾರ್ಯವೆ? ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಸಹ ಬಿಡಾರದಲ್ಲಿ ಕುಮ್ಕಿ ಸಾಕಾನೆಗಳ ಸಂಖ್ಯೆ ಕೂಡ ಕಡಿಮೆಯಾಗಿರುವುದೇಕೆ?
ಹಿಂದೆಲ್ಲಾ ಈ ಖೆಡ್ಡಾ ಕಾರ್ಯಕ್ರಮ ಏಕೆ ನಡೆಯುತ್ತಿತ್ತು ಎಂದರೆ ಸೆರೆಹಿಡಿದ ಆನೆಗಳನ್ನು ಪಳಗಿಸಿ, ವಿಶ್ವಪ್ರಸಿದ್ಧ ಮೈಸೂರು ದಸರಾ ಜಂಬೂಸವಾರಿ ಸೇರಿದಂತೆ ಅರಮನೆಯ ವಿವಿಧ ಧಾರ್ಮಿಕ ಮತ್ತು ರಾಜಮನೆತನದ ಮೆರವಣಿಗೆಗಳಿಗೆ ಬಳಸಿಕೊಳ್ಳಲಾಗುತ್ತಿತ್ತು. ಕಾಡಾನೆಗಳ ಹಿಂಡು ಅರಣ್ಯದ ಅಂಚಿನ ಗ್ರಾಮಗಳಿಗೆ ನುಗ್ಗಿ ರೈತರು ಬೆಳೆದ ಬೆಳೆಗಳನ್ನು ನಾಶಪಡಿಸುವುದನ್ನು ಮತ್ತು ಮಾನವ-ಆನೆ ಸಂಘರ್ಷವನ್ನು ತಪ್ಪಿಸಲು ಆನೆಗಳ ಸಂಖ್ಯೆಯನ್ನು ನಿಯಂತ್ರಿಸಲಾಗುತ್ತಿತ್ತು. ಹಿಂದಿನ ಕಾಲದಲ್ಲಿ ಸೈನ್ಯದ ಬಲವರ್ಧನೆಗಾಗಿ ಮತ್ತು ಯುದ್ಧಗಳಲ್ಲಿ ಬಳಸಲು ಆನೆಗಳನ್ನು ಸೆರೆಹಿಡಿದು ತರಬೇತಿ ನೀಡಲಾಗುತ್ತಿತ್ತು. ಕಾಡಿನಲ್ಲಿ ಮರದ ದಿಮ್ಮಿಗಳನ್ನು ಸಾಗಿಸಲು ಹಾಗೂ ಇತರ ಕಠಿಣ ಕೆಲಸಗಳಿಗೆ ಪಳಗಿಸಿದ ಆನೆಗಳ ಅಗತ್ಯವಿತ್ತು. ಮೈಸೂರು ಸಂಸ್ಥಾನಕ್ಕೆ ಭೇಟಿ ನೀಡುತ್ತಿದ್ದ ಬ್ರಿಟಿಷ್ ಅಧಿಕಾರಿಗಳು, ವೈಸರಾಯ್ಗಳು ಮತ್ತು ವಿದೇಶಿ ಗಣ್ಯರ ಗೌರವಾರ್ಥವಾಗಿ ಈ ರೋಚಕ ಕಾರ್ಯಾಚರಣೆಯನ್ನು ಒಂದು ರಾಜಕೀಯ ಕ್ರೀಡೆ ಅಥವಾ ಪ್ರದರ್ಶನದಂತೆಯೂ ಆಯೋಜಿಸಲಾಗುತ್ತಿತ್ತು. ಇದೆಲ್ಲದಕ್ಕೂ ಮುಖ್ಯವಾಗಿ ಆನೆಗಳ ಸಂಖ್ಯೆಯನ್ನು ನಿಯಂತ್ರಿಸುವುದೇ ಆಗಿತ್ತು.
ರಾಜ್ಯದಲ್ಲಿ 60-70 ರ ದಶಕದಲ್ಲಿ ಕಾಡಾನೆಗಳ ಸಂಖ್ಯೆ ಎರಡು ಸಾವಿರ ಇರುವ ಸಂದರ್ಭದಲ್ಲಿಯೇ ಅವುಗಳ ಸಂತತಿಯನ್ನು ಕಡಿಮೆ ಮಾಡಲು ಆಪರೇಷನ್ ಖೆಡ್ಡಾ ಮಾಡಲಾಗಿತ್ತು. ಆದರೆ ಈಗ 6300 ಕ್ಕೂ ಅಧಿಕ ಸಂಖ್ಯೆಯಲ್ಲಿರುವ ಕಾಡಾನೆಗಳನ್ನು ಸಾಮೂಹಿಕವಾಗಿ ಸೆರೆ ಹಿಡಿಯುವ ಅನಿವಾರ್ಯತೆ ಎದುರಾಗಿದ್ದರೂ. ಅರಣ್ಯ ಇಲಾಖೆ ಕೇವಲ ಹಿಮ್ಮೆಟ್ಟಿಸುವ ಕಾರ್ಯತಂತ್ರಕ್ಕೆ ಜೋತು ಬಿದ್ದಿರುವುದು ನಿಜಕ್ಕೂ ವಿಪರ್ಯಾಸ.ಆನೆ ಸೆರೆ ಹಿಡಿದ್ರೆ ರೇಡಿಯೋ ಕಾಲರ್ ಹಾಕಿ ಪುನಃ ಕಾಡಿಗೆ ಬಿಡವ ..ಯೋಜನೆ ಸರ್ಕಾರದ ಬೊಕ್ಕಸ ಕರಿಗಿಸುತ್ತೇ ಹೊರತು ಆನೆಯ ಹಾದಿಯನ್ನಂತು ತಪ್ಪಿಸಲು ಸಾಧ್ಯವಿಲ್ಲ…ಆನೆಗಳ ಸಂಖ್ಯೆ ಸಮ ಪ್ರಮಾಣದಲ್ಲಿಡಲು ಅಂದಿನ ಅರಣ್ಯಾಧಿಕಾರಿಗಳು ಖೆಡ್ಡಾ ಆಪರೇಷನ್ ಗಳನ್ನು ಮಾಡುತ್ತಿದ್ದರು. ಆನೆಗಳನ್ನು ದೇವಸ್ಥಾನ ಟಿಂಬರ್ ವ್ಯಾಪಾರಿಗಳಿಗೆ ಕಡಿಮೆ ಹಣಕ್ಕೆ ನೀಡುತ್ತಿದ್ದರು. ಹಿಂದೆಲ್ಲಾ ಖೆಡ್ಡಾ ಗಳನ್ನು ಹೇಗೆ ಮಾಡುತ್ತಿದ್ದರು? ಏಕೆ ಮಾಡುತ್ತಿದ್ದರು ? ಎಂಬುದರ ಚಿತ್ರಣ ಇಲ್ಲಿದೆ.
ಖೆಡ್ಡಾ ಎಂದರೆ ಹಿಂದಿ ಭಾಷೆಯಲ್ಲಿ ಬಲವಂತವಾಗಿ ಬೆನ್ನಟ್ಟುವ ಪದವನ್ನು ಹೋಲುತ್ತದೆ. ಹಿಂದೆಲ್ಲಾ ಸಾಮಾನ್ಯವಾಗಿ ಮನುಷ್ಯ-ಆನೆಗಳ ಸಂಘರ್ಷ ಹೆಚ್ಚಾದಾಗ ಅಥವಾ ಆರ್ಥಿಕ ಉದ್ದೇಶಕ್ಕಾಗಿ ಬೇಟೆಯಾಡುವ ಸಂದರ್ಭದಲ್ಲಿ ಖೆಡ್ಡಾ ಮಾಡಲಾಗುತ್ತಿತ್ತು. ಖೆಡ್ಡಾ ದಲ್ಲಿ ನಾಲ್ಕು ವಿಧಾನಗಳಿವೆ. ಕಾಡಾನೆಗಳನ್ನು ಕುಮ್ಕಿ ಆನೆಗಳ ಸಹಾಯದಿಂದ ಹೊಂಡಗಳಲ್ಲಿ ಬಲೆಗೆ ಬೀಳಿಸುವುದು, ಆನೆಗಳ ಹಿಂಡನ್ನು ಸೆರೆಹಿಡಿಯಲು ಖೆಡ್ಡಾ ಕಾರ್ಯಾಚರಣೆಗಳ ಮಾಡುವುದು , ಖೆಡ್ಡಾಗಳು ಅಥವಾ ಆವರಣಗಳಿಗೆ ಓಡಿಸುವುದು ಅಥವಾ ರಿವರ್-ಡ್ರೈವ್ ವಿಧಾನದ ಮೂಲಕ ಹಿಂಡನ್ನು ಓಡಿಸುವ ಮೂಲಕ ಆನೆಗಳನ್ನು ಸೆರೆ ಹಿಡಿಯಲಾಗುತ್ತಿತ್ತು.
ವಂಡರ್ ಡ್ರಗ್ ಎಟಿರೇಪಿನ್ ಹೈಡ್ರೋಕ್ಲೋರೈಡ್
ಸಾಮಾನ್ಯವಾಗಿ ಆನೆಗಳನ್ನು ಖೆಡ್ಡಾ ಗೆ ಬೀಳಿಸಿ ಸೆರೆ ಹಿಡಿಯುವುದು ಒಂದು ವಿದಾನವಾದರೆ, ಪ್ರಸ್ಥುತ ದಿನಗಳಲ್ಲಿ ಆನೆಗಳಿಗೆ ಅರವಳಿಕೆ ನೀಡಿ ಸೆರೆ ಹಿಡಿಯಲಾಗುತ್ತದೆ. ಅದರಲ್ಲೂ ಎಟರೋಪಿನ್ ಹೈಡ್ರೊಕ್ಲೊರೈಡ್ ಎಂಬುದು ನಾರ್ಕೋಟಿಕ್ ಡ್ರಗ್ ಸಾಲಿಗೆ ಸೇರಿದ ಔಷಧಿ. ಕೇವಲ ಎರಡು ಎಂಎಲ್ ನಷ್ಟು ಮದ್ದು ಒಂದು ಆನೆಯನ್ನು ಕ್ಷಣಾರ್ದದಲ್ಲಿ ಪ್ರಜ್ಞೆ ತಪ್ಪಿಸುತ್ತದೆ ಎಂದರೆ ಅದು ಎಷ್ಟು ಪರಿಣಾಮಕಾರಿ ಎಂಬುದು ಅರ್ಥವಾಗುತ್ತದೆ.
ಹೀಗಾಗಿ ಈ ಅರವಳಿಕೆಯನ್ನು ಆನೆ ಕಾರ್ಯಾಚರಣೆಯ ಸಂದರ್ಭದಲ್ಲಿ ಮಾತ್ರ ಉಪಯೋಗಿಸಲಾಗುತ್ತದೆ.ಐದು ಎಂಎಲ್ ವೈಯಲ್ ಗೆ ಒಂದು ಲಕ್ಷಕ್ಕೂ ಅಧಿಕ ಬೆಲೆಯಿರುವ ಈ ಅರವಳಿಕೆ ಮದ್ದಿನಲ್ಲಿ ಒಂದು ಎಂಎಲ್ ದುರುಪಯೋಗ ಪಡಿಸಿಕೊಂಡರೂ..ಅದನ್ನು ಬೇರೆ ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದಾದ ಸಾದ್ಯತೆಗಳು ಹೆಚ್ಚಿರುತ್ತದೆ.ಹೀಗಾಗಿ ವನ್ಯಜೀವಿ ವೈದ್ಯರು ಡಾರ್ಟ್ ಮಾಡುವಾಗ ಇದನ್ನು ಸೂಕ್ಷ್ಮವಾಗಿ ಪ್ರಯೋಗಿಸುತ್ತಾರೆ.ಇದರ ಒಂದು ಹನಿ ದೇಹದ ಮೇಲೆ ಬಿದ್ದರೂ..ಅದರ ಪರಿಣಾಮ ಊಹಿಸಿಕೊಳ್ಳಲು ಸಾಧ್ಯವಿಲ್ಲ.ಕಣ್ಣು ಶಾಶ್ವತವಾಗಿ ಕುರುಡಾಗುವ ಸಾಧ್ಯತೆಗಳಿವೆ.ಆನೆಯ ದೇಹದ ತೂಕವನ್ನು ಪರಿಗಣಿಸಿ ಇದನ್ನು ಪ್ರಯೋಗಿಸಲಾಗುತ್ತದೆ.
ಆನೆಗಳನನ್ನು ನಾಜೂಕಾಗಿ ಸೆರೆಹಿಡಿಯುವ ಆದುನಿಕ ವ್ಯವಸ್ಥೆಗಳಿದ್ದರೂ, ಅದನ್ನು ಸಾಂಪ್ರಾದಾಯಿಕವಾಗಿ ಸೆರೆ ಹಿಡಿಯುವುದೇ ಒಂದು ಹಿರಿಮೆಯ ಸಂಗತಿ.
60-70 ರ ದಶಕದಲ್ಲಿ ರಾಜ್ಯದಲ್ಲಿ ಕಾಡಾನೆಗಳ ಸಂಖ್ಯೆ ಹೆಚ್ಚಳವಾದ ಸಂದರ್ಭದಲ್ಲಿ ಅವುಗಳನ್ನು ಸೆರೆ ಹಿಡಿದು ಪಳಗಿಸುವ ಕೆಲಸಕ್ಕೆ ಅರಣ್ಯ ಇಲಾಖೆ ಮುಂದಾಯಿತು. ಹಳೆ ಮೈಸೂರು ಪ್ರಾಂತ್ಯದ ಕಾಕನೆಕೋಟೆ ಖೆಡ್ಡಾ ಆಪರೇಷನ್ ಅರಣ್ಯ ಇಲಾಖೆ ಇತಿಹಾಸದ ಪುಟಗಳಲ್ಲಿ ಮಹತ್ವ ಪಡೆದಿದೆ. ಈ ಖೆಡ್ಡಾ ದಲ್ಲಿ ಪಳಗಿದ ಆನೆಗಳೇ ಮೈಸೂರು ಅಂಬಾರಿಯನ್ನು ಹೊತ್ತು ಮೆರೆದಿವೆ. ಇತ್ತಿಚ್ಚೆಗೆ ಸಾವನ್ನಪ್ಪಿದ ಅರ್ಜುನ ಕೂಡ ಕಾಕಾನ ಕೋಟೆ ಖೆಡ್ಡಾ ದಲ್ಲಿ ಬಂಧಿಯಾಗಿ, ನಂತರ ಅಂಬಾರಿ ಹೊರುವ ಮೂಲಕ ರಾಜ್ಯದ ಜನತೆಯ ಮನೆ ಮಾತಾಗಿತ್ತು. ಅಭಿಮನ್ಯು ಕೂಡ ಇದೇ ಖೆಡ್ಡಾದಲ್ಲಿ ಸೆರೆಯಾದ ಆನೆಯಾಗಿದೆ. ಈಗಲೂ ಕಬಿನಿ ಜಲಾಶಯದ ಹಿನ್ನೀರು ಕಡಿಮೆಯಾದ್ರೆ..ಖೆಡ್ಡಾಗಳು ಕಾಣಸಿಗುತ್ತವೆ. ಬೃಹತ್ ಗಾತ್ರದ ಮರದ ದಿಣ್ಣೆಗಳ ಕೋಟೆಯ ಆವರಣ ಮಾಡಿ ಗುಂಡಿ ತೆಗೆದು ಅನೆಗಳನ್ನು ಬೀಳಿಸುವುದು, ಆವರಣದಲ್ಲಿ ಸಿಲುಕಿಸುವುದು ಖೆಡ್ಡವಾಗಿದೆ.
1873-74 ಮೈಸೂರು ಸರ್ಕಾರದಲ್ಲಿ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿದ ಜೆಪಿ ಆಂಡರ್ ಸನ್ ಮೊದಲ ಬಾರಿಗೆ ಮೈಸೂರಿನ ಕರಡಿ ಹಳ್ಳಿಯಲ್ಲಿ ರಲ್ಲಿ ಖೆಡ್ಡಾ ಪರಿಚಯಿಸಿದರು. ಕಬನಿ ನದಿಯ ದಡದಲ್ಲಿರುವ ಕಾಕನಕೋಟೆ ಕಾಡು ಇಂತಹ ಯೋಜನೆಗಳ ತಾಣವಾಗಿತ್ತು. ಆಗ ಖೆಡ್ಡಾ ಎಂಬುದು ಮನರಂಜನೆಯ ಕಾರ್ಯಕ್ರಮ ಕೂಡ ಆಗಿತ್ತು. ರಾಜ್ಯಕ್ಕೆ ಗಣ್ಯರು ಭೇಟಿ ನೀಡುವ ಸಂದರ್ಭದಲ್ಲಿ ಖೆಡ್ಡಾ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು.
ಬ್ರಿಟಿಷ್ ಸೇನಾ ಅಧಿಕಾರಿ ಕರ್ನಲ್ ಪಿಯರ್ಸನ್ ಆನೆಗಳನ್ನು ಹಿಡಿಯುವ ಮೊದಲ ಪ್ರಯತ್ನವೂ ವಿಫಲವಾಗಿತ್ತು ಡ್ಯೂಕ್ಸ್ ಮತ್ತು ವೈಸ್ ರಯ್ ಗಳು 1891 ರಲ್ಲಿ ಮೈಸೂರಿಗೆ ಭೇಟಿ ನೀಡಿದಾಗ ರಷ್ಯಾದ ಗ್ರಾಂಡ್ ಡ್ಯೂಕ್ ಗೌರವಾರ್ಥವಾಗಿ ಕಬಿನಿ ನದಿಯ ಮೂಲಕ ರಿವರ್-ಡ್ರೈವ್ ವಿಧಾನದ ಮೂಲಕ ಖೆಡ್ಡಾ ಕಾರ್ಯಾಚರಣೆಯನ್ನು ಏರ್ಪಡಿಸಲಾಗಿತ್ತು.
ಸ್ಯಾಂಡರ್ಸನ್ ಮೊದಲ ಖೆಡ್ಡಾದ ಯಶಸ್ವಿ ಕಾರ್ಯಾಚರಣೆಯ ನಂತರ, ಕಾಕನಕೋಟೆಯಲ್ಲಿ ಪ್ರಾರಂಭವಾದ ಈ ವ್ಯವಸ್ಥೆಯು ಮೈಸೂರಿನಲ್ಲಿ ಬಹಳ ಜನಪ್ರಿಯವಾಯಿತು. ತದನಂತರದಲ್ಲಿ ರಾಜ್ಯದಲ್ಲಿ 36 ಖೆಡ್ಡಾ ಕಾರ್ಯಾಚರಣೆಗಳನ್ನು 1971 ರವರೆಗೆ ನಡೆಸಲಾಯಿತು.ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಅಡಿಯಲ್ಲಿ ಖೆಡ್ಡಾವನ್ನು ನಿಷೇಧಿಸಲಾಯಿತು ಪ್ರಾಣಿ ಹಿಂಸೆಯ ದೃಷ್ಟಿಯಿಂದ ಖೆಡ್ಡಾ ಆಪರೇಷನ್ ಕೈ ಬಿಡಲಾಯಿತು.
ಆಪರೇಷನ್ ಖೆಡ್ಡಾ ಕೈಬಿಟ್ಟ ನಂತರ ಹೆಚ್ಚಾದ ಕಾಡಾನೆಗಳ ಸಂಖ್ಯೆ
ಆನೆಗಳ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಜಾರಿಗೆ ತಂದ ಕಾಯ್ದೆ ಇಂದು ಆನೆಗಳ ಸಂತತಿ ಹೆಚ್ಚಾಗುವಂತೆ ಮಾಡಿದ್ದೇನೋ ನಿಜ. 70 ರ ದಶಕದಲ್ಲಿ ಎರಡು ಸಾವಿರ ಗಟಿ ದಾಟಿದ್ದ ಆನೆಗಳ ಸಂಖ್ಯೆ ಈಗ ಆರು ಸಾವಿರ ಗಡಿದಾಟೆದೆ. 2017 ರಲ್ಲಿ ರಾಜ್ಯದಲ್ಲಿ 6049 ಆನೆಗಳಿದ್ದವು. ಎಪ್ಪತ್ತರ ದಶಕದಲ್ಲಿ ಎರಡು ಸಾವಿರಕ್ಕಿಂತ ಹೆಚ್ಚಿದ್ದ ಆನೆಗಳ ಸಂಖ್ಯೆಯನ್ನು ಕಡಿಮೆ ಮಾಡುವುದಕ್ಕಾಗಿಯೇ ಆಪರೇಷನ್ ಖೆಡ್ಡಾ ಮಾಡಲಾಯಿತು.ಈಗಲೂ ಕಬಿನಿ ಬ್ಯಾಕ್ ವಾಟರ್ ಗೆ ಬೇಸಿಗೆ ಸಂದರ್ಭದಲ್ಲಿ ಹೋದ್ರೆ ಸುಮಾರು ಎರಡು ಕಿಲೋಮೀಟರ್ ನಷ್ಟು ಬೇಲಿ ರೂಪದಲ್ಲಿ ಖೆಡ್ಡಾ ಕಾಣಸಿಗುತ್ತದೆ.
ಆನೆಗಳನ್ನು ಬಲೆಗೆ ಬೀಳಿಸುವ ಖೆಡ್ಡಾ ವ್ಯವಸ್ಥೆಯಲ್ಲಿ ತಮಟೆ ಭಾರಿಸವವರು,, ಮಾವುತರು, ಭದ್ರತಾ ಸಿಬ್ಬಂದಿ, ಸಹಾಯಕರು ಮತ್ತು ಕುಮ್ಕಿ ಆನೆಗಳ ತಂಡ ಒಳಗೊಂಡಿರುತ್ತದೆ. ಕಾಡಾನೆಗಳ ಹಿಂಡು ಪತ್ತೆಯಾದ ಸ್ಥಳದಿಂದ ಖೆಡ್ಡಾಗೆ ಬರುವ ಹಾದಿಯಲ್ಲಿ ತಪ್ಪಿಸಿಕೊಳ್ಳಬಹುದಾದ ಎಲ್ಲಾ ಮಾರ್ಗಗಳನ್ನು ಬಂದ್ ಮಾಡಲಾಗುತ್ತದೆ. ಆನೆಗಳು ದಾರಿತಪ್ಪದಂತೆ ತಡೆಯಲು ದೊಡ್ಡ ಬೆಂಕಿ ಹಚ್ಚಿ, ಕೇಕೆ ಹಾಕುತ್ತಾ , ಡೋಲು ಬಾರಿಸುತ್ತಾ ಜನರು ಸಾಕಾನೆಗಳ ಸಹಾಯದಿಂದ ಕಾಡಾನೆಗಳ ಹಿಂಡನ್ನು ಹೆಮ್ಮೆಟ್ಟಿಸುತ್ತಾರೆ. ಬಂದೂಕು ಗುಂಡು ಹಾರಿಸಿ ಆನೆಗಳನ್ನು ಹೆದರಿಸಿ ಅವುಗಳನ್ನು ಖೆಡ್ಡಾ ಆವರಣದಲ್ಲಿ ಇರಿಸಲಾಗುತ್ತದೆ. ಒಂದು ಖೆಡ್ಡಾ ದಲ್ಲಿ ಕನಿಷ್ಠ ಎಂದರೂ 200 ರಿಂದ 250 ಆನೆಗಳನ್ನು ಬಂಧಿಯನ್ನಾಗಿ ಮಾಡಲಾಗುತ್ತದೆ.ಬಂಧಿಯಾದ ಕಾಡನೆಗಳಿಗೆ ಹತ್ತರಿಂದ ಹದಿನೈದು ದಿನಗಳವರೆಗೆ ನೀರು ಆಹಾರ ನೀಡದೆ ನಿತ್ರಾಣ ಮಾಡಲಾಗುತ್ತದೆ. ಆಗ ಸಹಜವಾಗಿ ಆನೆ ಶಕ್ತಿಯನ್ನು ಕಳೆದುಕೊಂಡಿರುತ್ತದೆ. ಆನೆ ಶಾಂತ ಸ್ವಭಾವಕ್ಕೆ ಬರುತ್ತಿದ್ದಂತೆ ಖೆಡ್ಡಾದಲ್ಲಿ ಸೆರೆಯಾದ ದೊಡ್ಡ ಆನೆಗಳನ್ನು ಪುನಃ ಕಾಡಿಗೆ ಬಿಡಲಾಗುತ್ತಿತ್ತು. ಸಣ್ಣ ಮರಿಗಳನ್ನು ಹಿಡಿದು ಬಿಡಾರಕ್ಕೆ ತಂದು ಪಳಗಿಸಿ ತರಬೇತಿ ನೀಡಲಾಗುತ್ತಿತ್ತು. ಅಲ್ಲದೆ ಮರಿಯಾನೆಗಳನ್ನು ದೇವಸ್ಥಾನಗಳಿಗೆ ಟಿಂಬರ್ ವ್ಯಾಪಾರಿಗಳಿಗೆ ಮಾರಲಾಗುತ್ತಿತ್ತು. ಅದು ಐದರಿಂದ ಇಪ್ಪೈತ್ತೈದು ಸಾವಿರ ರೂಪಾಯಿ ನೀಡಲಾಗುತ್ತಿತ್ತು. ಖೆಡ್ಡಾ ಆಪರೇಷನ್ ಮೂಲಕ ಆನೆಗಳ ಸಂತತಿಯ ಸಮತೋಲನ ಕಾಯ್ದುಕೊಳ್ಳಲಾಗುತ್ತಿತ್ತು.
ಆನೆ ಮಾರಾಟ ಮಾಡುವುದರ ಹಿಂದೆ ಆದಾಯದ ದುರುದ್ದೇಶ ಇರಲಲ್ಲ. ಕಾಡಿನ ನೀತಿಯಲ್ಲಿ ನೈಸರ್ಗಿಕವಾಗಿ ಆನೆಯನ್ನು ಕೊಂದು ಆಹಾರವಾಗಿ ಸೇವಿಸುವ ವನ್ಯಪ್ರಾಣಿ ರಾಜ್ಯದಲ್ಲಿ ಇಲ್ಲ. ಸಿಂಹ ಹುಲಿ ಚಿರತೆ ಆನೆಯ ಮೇಲೆ ದಾಳಿ ಮಾಡಬಲ್ಲವು. ಆದರೆ ರಾಜ್ಯದಲ್ಲಿ ಸಿಂಹಗಳೇ ಇಲ್ಲ.ಆನೆಗಳ ಸಂಖ್ಯೆ ಕುಗ್ಗಿಸಿ, ಸಮತೋಲನ ಕಾಪಾಡುವ ವನ್ಯಪ್ರಾಣಿ ಇಲ್ಲದೇ ಇರುವುದದಿಂದ ಆನೆಗಳ ಸಂತತಿ ಹೆಚ್ಚಾಗುತ್ತದೆ ಇದಕ್ಕೆ ಮುಂದೊಂದು ದಿನ ಬೆಲೆ ತೆರಬೇಕಾಗುತ್ತದೆ ಎಂಬ ಕಾರಣಕ್ಕೆ ಖೆಡ್ಡಾ ಆಪರೇಷನ್ ಗಳು ನಡೆಯುತ್ತಿದ್ದವು. ಒಂದು ಅರಣ್ಯ ಪ್ರದೇಶದಲ್ಲಿ ಇಂತಿಷ್ಟೇ ಕಾಡು ಪ್ರಾಣಿಗಳು ಇರಬೇಕು ಎಂಬ ಲೆಕ್ಕಚಾರ ಅಂದಿನ ಅರಣ್ಯಾಧಿಕಾರಿಗಳಿಗೆ ಇತ್ತು. ಕ
ಹೀಗಾಗಿಯೇ ಆನೆಗಳ ಸಂಖ್ಯೆ ಎರಡು ಸಾವಿರ ಗಡಿ ದಾಟಿದಾಗಲೇ..ಆಪರೇಷನ್ ಖೆಡ್ಡಾಗೆ ಚಾಲನೆ ನೀಡಲಾಗಿತ್ತು. 60-70 ರದ ದಶಕದಲ್ಲಿ ಬಂಡಿಪುರ ನಾಗರಹೊಳೆ ಅರಣ್ಯಕ್ಕೆ ಆನೆ ಹಂತಕರ ತಂಡ ಲಗ್ಗೆ ಇಟ್ಟ ಸಂದರ್ಭದಲ್ಲಿ ಅವರು ದಂತಕ್ಕಾಗಿ ಗಂಡಾನೆಯನ್ನೇ ಬೇಟಿಯಾಡುತ್ತಿದ್ದರು. ಕಾಡಿನಲ್ಲಿ ಗಂಡಾನೆಗಳ ಸಂಖ್ಯೆ ಕೂಡ ಕಡಿಮೆಯಾಗಿತ್ತು. ಇದರಿಂದ ಸಂತಾನೋತ್ಪತ್ತಿಗೆ ಹಿನ್ನಡೆಯಾಗಿತ್ತು. . 1972 ರಲ್ಲಿ ಜಾರಿಯಾದ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿ ನಂತರ ಆನೆ ಹಂತಕರ ಸಂಖ್ಯೆ ಕಡಿಮೆಯಾಯ್ತು. ಕಾಡಿನಲ್ಲಿ ಆನೆಗಳ ಹಿಂಡು ಸ್ವಚ್ಚಂದವಾಗಿ ವಿಹರಿಸಲು ಅವಕಾಶವಾಯ್ತು. ಆನೆಗಳ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಾಯ್ತು.
ಈಗ ಮತ್ತೆ ಕಾಡಾನೆ ಸೆರೆ ಕಾರ್ಯಾಚರಣೆ ಸರ್ಕಾರಕ್ಕೆ ಅನಿವಾರ್ಯವಾಗಿದೆ. ಹಾಸನ ಚಿಕ್ಕಮಗಳೂರು ಮೈಸೂರು ಶಿವಮೊಗ್ಗ ಚಾಮರಾಜ ಜಿಲ್ಲೆಗಳಲ್ಲಿ ಆನೆ ಮಾನವ ಸಂಘರ್ಷ ಹೆಚ್ಚಾಗಿದೆ. ಸಾವು ನೋವುಗಳಾಗುತ್ತಿವೆ. ಬೆಳೆ ಉಳಿಸಿಕೊಳ್ಳಲು ರೈತರು ವಿದ್ಯುತ್ ಬೇಲಿ ಅಳವಡಿಸುತ್ತಾರೆ. ವಿದ್ಯುತ್ ಬೇಲಿಗೆ ಸಿಲುಕಿ, ಇಲ್ಲವೇ ರಸ್ತೆ ದಾಟುವ ವೇಳೆ ರೈಲು ಇತರೆ ವಾಹನಗಳಿಗೆ ಸಿಲುಕಿ ಆನೆಗಳು ಸಾವನ್ನಪ್ಪುತ್ತವೆ. ಹಿಂಡನ್ನು ಬಿಟ್ಟು ಅಗಲುವ ಕಾಡಾನೆ ಕೂಡ ಜನರನ್ನು ಕಂಡಾಗ ಎಗರಿ ಸಾಯುಸುತ್ತಿವೆ. ಇದಕ್ಕೆಲ್ಲಾ ಕಾರಣ ಆನೆಗಳು ಓಡಾಡುವ ಕಾಡು ಕಿರಿದಾಗಿ, ಅವುಗಳು ರೈತ ಕಾಫಿ ಟೀ ತೋಟಗಳಾಗಿ ಮಾರ್ಪಟ್ಟಿರುವುದೇ ಆಗಿದೆ. ಹಲವೆಡೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು. ಕಾಡು ಕಿರಿದಾಗಿದೆ. ಕಾಡಿನಲ್ಲಿ ಆನೆಗಳಿಗೆ ಬೇಕಾದ ಬಿದುರು, ಹಾಲುಸೊಪ್ಪು, ಬೈನೆ ,ಕಬ್ಬಿನಂತ ಆಹಾರ ಕಡಿಮೆಯಾಗಿದೆ.
ರಾಜ್ಯದಲ್ಲಿ ಆನೆಗಳ ಸಂಖ್ಯೆ ಆರು ಸಾವಿರ ಗಡಿ ದಾಟಿದೆ ಎಂದರೆ..ಅದಕ್ಕಿರಬೇಕಾದ ಅರಣ್ಯದ ವ್ಯಾಪ್ತಿ ಪ್ರದೇಶ ಅರ್ದ ರಾಜ್ಯವನ್ನಾದರೂ ಮೀಸಲಿಡಬೇಕಾಗುತ್ತದೆ. ಆನೆಗಳ ಹಿಂಡು ಹೆಚ್ಚಾದಂತೆ ಮದಕ್ಕೆ ಬರುವ ಗಂಡಾನೆಗಳ ನಡುವೆ ನಡೆಯುವ ನೈಸರ್ಗಿಕ ಕಾದಾಟ , ಕಾದಾಟದಲ್ಲಿ ಸೋಲುವ ಗಂಡು ಆನೆ ಹಿಂಡನ್ನಗಲಿ ಬರುವ ಸಂಖ್ಯೆ ಹೆಚ್ಚುತ್ತಿದೆ. ದಿಕ್ಕು ಕಾಣದೆ ಅತ್ತಿಂದಿತ್ತ ಬರುವ ಕಾಡಾನೆ ಸಹಜವಾಗಿಯೇ ಕ್ರೋಧಗೊಂಡಿರುತ್ತದೆ. ತನ್ನೆದುರು ಇರುವ ವ್ಯಕ್ತಿ ಅಥವಾ ಪ್ರಾಣಿ ಶತ್ರುವಾಗಿಯೇ ಕಾಣುತ್ತದೆ. ಒಂದೆಡೆ ಹಿಂಡನ್ನು ಅಗಲಿ, ಆಹಾರ ಹರಸಿ ಬರುವ ಕಾಡಾನೆಗೆ ಎದುರಾಗುವ ವ್ಯಕ್ತಿ ಬಲಿಯಾಗುತ್ತಾನೆ. ಇಲ್ಲವೇ ಆಹಾರ ಹರಸಿ ರೈತರ ಕೃಷಿ ಭೂಮಿಗೆ ಲಗ್ಗೆಯಿಡುವ ಕಾಡಾನೆ ವಿದ್ಯುತ್ ಬೇಲಿ ಸ್ಪರ್ಷಿಸಿ ಸಾವನ್ನಪ್ಪುತ್ತದೆ.
ಜನರ ಆಕ್ರೋಶ ಹೆಚ್ಚಾದಾಗ ಮಾತ್ರ ಸರ್ಕಾರ ಕಾಡಾನೆ ಸೆರೆಗೆ ಮುಂದಾಗುತ್ತದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸೆರೆಹಿಡಿಯುವ ಕಾಡಾನೆಗಳನ್ನು ರೇಡಿಯೋ ಕಾಲರ್ ಅಳವಡಿಸಿ ಬೇರೆ ಕಾಡಿಗೆ ಬಿಡಲಾಗುತ್ತದೆ. ಅವುಗಳು ಪುನಃ ತಾವಿದ್ದ ಸ್ಥಳಕ್ಕೆ ವಾಪಸ್ಸಾಗುತ್ತಿವೆ.ಇದರ ಬದಲು ಸೆರೆಹಿಡಿಯುವ ಕಾಡಾನೆಗಳನ್ನು, ಬಿಡಾರದಲ್ಲಿ ಪಳಗಿಸಿ ಅರಣ್ಯ ಇಲಾಖೆಯ ಕಾರ್ಯಗಳಿಗೆ ಬಳಸಿಕೊಳ್ಳಬಹುದು. ಇಲ್ಲವೇ ಕುಮ್ಕಿ ಆನೆಗಳನ್ನಾಗಿ ಮಾಡಿ, ಕಾಡಾನೆಗಳ ಕಾರ್ಯಾಚರಣೆಗೆ ಬಳಸಿಕೊಳ್ಳಬಹುದು. ಇದರಿಂದ ಮಾವುತ ಕಾವಾಡಿಗಳ ಸಾವಿರಾರು ವರ್ಷಗಳ ಪರಂಪರೆಯನ್ನು ಉಳಿಸಿದಂತಾಗುತ್ತದೆ.ಮಾವುತ ಕಾವಾಡಿಗಳಿಗೆ ಕೆಲಸ ನೀಡಿದಂತಾಗುತ್ತದೆ, ಅವರ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವಂತೆ ಮಾಡಿದಂತಾಗುತ್ತದೆ ಎಂಬುದು ಅನುಭವಿ ಮಾವುತರ ಅಭಿಪ್ರಾಯವಾಗಿದೆ.
ಕಾಡು ಕಡಿಮೆಯಾಗಿರುವ ಈ ಸಂದರ್ಭದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಒಂದೆಡೆ ಆನೆ ಸೆರೆ ಹಿಡಿದು ಬಿಡಾರಕ್ಕೆ ಬಿಡಬೇಕು, ಇಲ್ಲವೇ ಆನೆ ಸಂತತಿಗೆ ಬ್ರೇಕ್ ಹಾಕಲು ವೈಜ್ಞಾನಿಕ ಕ್ರಮಗಳನ್ನು ಜಾರಿಗೆ ತರಬೇಕು. ತುಂಬಾ ಸಂಕಷ್ಟ,ಸಂಘರ್ಷದ ಕಾಲಘಟ್ಟದಲ್ಲಿರುವುದರಿಂದಲೇ ಆನೆ ಮಾನವ ಸಂಘರ್ಷ ಹೆಚ್ಚುತ್ತಿದೆ. ಇದಕ್ಕೆಲ್ಲಾ ಸರ್ಕಾರ ತಕ್ಷಣವೇ ಪರಿಹಾರ ಕಂಡುಕೊಳ್ಳಬೇಕಿದೆ.
