ಪ್ರೀತಿ, ಮದುವೆ, ಅತ್ಯಾಚಾರ, ಗರ್ಭಪಾತ! ಕಾನ್​ಸ್ಟೇಬಲ್ ವಿರುದ್ಧ ಯುವತಿಯ ಗಂಭೀರ ಆರೋಪ!

ಹಂಚಿಕೊಳ್ಳಿ
WhatsApp Facebook X Telegram
Shivamogga Woman Accuses Police Constable

Police Constable / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಪೊಲೀಸ್ ಕಾನ್‌ಸ್ಟೇಬಲ್ ಓರ್ವ ಅತ್ಯಾಚಾರ ಎಸಗಿ, ಗರ್ಭಪಾತ ಮಾಡಿಸಿ ವಂಚಿಸಿದ್ದಾನೆ ಎಂದು ಸಂತ್ರಸ್ತ ಯುವತಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ, ಬಳಿಕ ಖಾಸಗಿ ವೀಡಿಯೊಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿರುವ ಕುರಿತು ಯುವತಿಯು ಮಾಧ್ಯಮಗಳ ಬಳಿಯಲ್ಲಿ ತನ್ನ ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ಯುವತಿ ಮಾಡಿರುವ ಆರೋಪದ ವಿವರ ಹೀಗಿದೆ.

ನಿನ್ನೆ ದಿನ ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಂತ್ರಸ್ತೆ ಠಾಣೆ ಒಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನ್‌ಸ್ಟೇಬಲ್ ಜೊತೆಗೆ ಫೇಸ್‌ಬುಕ್ ಮೂಲಕ ಒಂದು ವರ್ಷದ ಹಿಂದೆ ಪರಿಚಯವಾಗಿತ್ತು. 5 ತಿಂಗಳ ಬಳಿಕ ಈ ಪರಿಚಯ ಪ್ರೀತಿಗೆ ತಿರುಗಿತ್ತು. ಪಾರ್ಕ್ ಸೇರಿದಂತೆ ವಿವಿಧೆಡೆ ಸುತ್ತಾಡಿದ್ದೆವು. ತಾನು ಪೊಲೀಸ್ ಆಗಿರುವುದರಿಂದ ಸಾರ್ವಜನಿಕವಾಗಿ ಮಾತನಾಡಲು ಕಷ್ಟವಾಗುತ್ತದೆ ಎಂದು ಹೇಳಿ ಖಾಸಗಿ ಲಾಡ್ಜ್‌ಗೆ ಕರೆದೊಯ್ದು ಬಲವಂತವಾಗಿ ಅತ್ಯಾಚಾರ ಎಸಗಿದ್ದ. ಅಲ್ಲದೆ, ಖಾಸಗಿ ವೀಡಿಯೊಗಳನ್ನು ಚಿತ್ರೀಕರಿಸಿಕೊಂಡು, ಯಾರಿಗಾದರೂ ಹೇಳಿದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ತನ್ನ ತಂಗಿಯ ಮದುವೆಯಾದ ಬಳಿಕ ವಿವಾಹವಾಗುವುದಾಗಿ ಆತ ಭರವಸೆ ನೀಡಿದ್ದ. ಆದರೆ ಡಿಸೆಂಬರ್ 18ರ ಸುಮಾರಿಗೆ ನನ್ನ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದ. ಸ್ನೇಹಿತೆಯ ಮೊಬೈಲ್‌ನಿಂದ ಕರೆ ಮಾಡಿ ತಾನು ಗರ್ಭಿಣಿಯಾಗಿರುವ ವಿಚಾರ ತಿಳಿಸಿದಾಗ, ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಬಲವಂತವಾಗಿ ಗರ್ಭಪಾತ ಮಾಡಿಸಿದ್ದ. ಆ ಬಳಿಕ ಇಬ್ಬರ ನಡುವೆ ಜಗಳವಾಗಿ 112 ಸಹಾಯವಾಣಿಗೆ ಕರೆ ಮಾಡಲಾಗಿತ್ತು. ಅಲ್ಲಿ ರಾಜಿ ಮಾಡಿಕೊಂಡು, ತನ್ನ ಸಾಲ ತೀರಿದ ಬಳಿಕ ಮದುವೆಯಾಗುವುದಾಗಿ ಮತ್ತೆ ನಂಬಿಸಿದ್ದ. ಆದರೂ ಆತ ಪದೇಪದೇ ಹಲ್ಲೆ ಮಾಡುತ್ತಿದ್ದ. ಒಮ್ಮೆ ಮಹಿಳಾ ಠಾಣೆಗೆ ದೂರು ನೀಡಲು ಹೋದಾಗಲೂ, ಮದುವೆಯಾಗುವ ಭರವಸೆ ನೀಡಿ ದೂರು ದಾಖಲಿಸದಂತೆ ತಡೆದಿದ್ದ ಎಂದು ಯುವತಿ ವಿವರಿಸಿದ್ದಾಳೆ.

ಖಾಲಿ ಹಾಳೆಯ ಮೇಲೆ ನನ್ನಿಂದ ಸಹಿ ಪಡೆದುಕೊಂಡಿರುವ ಆತ, ಇದೀಗ ಬೇರೊಂದು ಹುಡುಗಿಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ದೂರು ವಾಪಸ್ ಪಡೆಯುವಂತೆ ಜೀವ ಬೆದರಿಕೆ ಹಾಕುತ್ತಿದ್ದಾನೆ. 2 ವಾರಗಳ ಹಿಂದೆ ಮಹಿಳಾ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದರೂ ಪೊಲೀಸರು ಆತನನ್ನು ಬಂಧಿಸಿಲ್ಲ. ಬದಲಾಗಿ ಆತನಿಗೆ ಬೆಂಬಲ ನೀಡುತ್ತಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿಐಜಿ ಅವರಿಗೂ ದೂರು ನೀಡಿದ್ದೇನೆ. ಆದರೂ ಆತ ರಾಜಾರೋಷವಾಗಿ ಓಡಾಡಿಕೊಂಡಿದ್ದು, ಕೊಲೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾಳೆ.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor