ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಗೆ ಸಿಎಂ ಡಿಕೆ ಶಿವಕುಮಾರ್ ಬಂದ ಸಂದರ್ಭದಲ್ಲಿ ಸಹಜವಾಗಿಯೇ ಶಾಸಕರುಗಳು ಜಿಲ್ಲೆಗೆ ಕ್ಷೇತ್ರಕ್ಕೆ ಸಂಬಂಧಿಸಿದ ಅಹವಾಲನ್ನ ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ರೈತರು ಹಾಗೂ ಗ್ರಾಮೀಣ ಜನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ತುರ್ತು ಪರಿಹಾರ ಕಲ್ಪಿಸುವಂತೆ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ್ ಸಹ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಗೆ ಮನವಿ ಸಲ್ಲಿಸಿದರು. ಅವರ ಮನವಿಯಲ್ಲಿ ಕ್ಷೇತ್ರದ 4 ಹೋಬಳಿಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವುದು, ಹಾಗೂ ನೀರಾವರಿ ಯೋಜನೆಗಳಿಗೆ ಅನುದಾನ ಒದಗಿಸುವುದು ಪ್ರಮುಖ ಬೇಡಿಕೆಯಾಗಿತ್ತು.
ಈ ಕುರಿತು ವಿವರವಾಗಿ ಗಮನಿಸುವುದಾದರೆ, ವಿಷಯ ಹೀಗಿದೆ. ಶಿವಮೊಗ್ಗ ತಾಲೂಕಿನ ಹಾರನಹಳ್ಳಿ, ಹೊಳಲೂರು, ಕುಂಸಿ ಹಾಗೂ ಆಯನೂರು ಹೋಬಳಿಗಳಲ್ಲಿ ವಾಡಿಕೆಗಿಂತ ಶೇ.69ರಷ್ಟು ಮುಂಗಾರು ಮಳೆ ಕೊರತೆಯಾಗಿದೆ. ಈ ಭಾಗದಲ್ಲಿ ಬಿತ್ತನೆಯಾಗಿರುವ ಒಟ್ಟು 17,205 ಹೆಕ್ಟೇರ್ ಪ್ರದೇಶದ ಪೈಕಿ ಸುಮಾರು 13,305 ಹೆಕ್ಟೇರ್ ಪ್ರದೇಶವು ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಅನಾವೃಷ್ಟಿಯಿಂದ ಬಾಧಿತವಾಗಿದೆ. ಪರಿಣಾಮ ಮೆಕ್ಕೆಜೋಳ, ರಾಗಿ ಹಾಗೂ ಭತ್ತ ಸೇರಿದಂತೆ ಸುಮಾರು ಶೇ.75ರಷ್ಟು ಬೆಳೆಗಳು ಹಾನಿಗೊಳಗಾಗಿವೆ. ಅಂತರ್ಜಲ ಮಟ್ಟ ಕುಸಿದಿರುವ ಪರಿಣಾಮ ಕೊಳವೆಬಾವಿಗಳಲ್ಲಿಯೂ ನೀರಿನ ಲಭ್ಯತೆ ಕಡಿಮೆಯಾಗಿದೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ . ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗಳ ಜಂಟಿ ಸಮೀಕ್ಷೆಯಲ್ಲಿಯೂ ಬೆಳೆಹಾನಿ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಹಾರನಹಳ್ಳಿ, ಆಯನೂರು, ಕುಂಸಿ ಹಾಗೂ ಹೊಳಲೂರು ಹೋಬಳಿಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿ, ರೈತರಿಗೆ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕಿ ಶಾರದಾ ಪೂರ್ಯಾನಾಯ್ಕ್ ಒತ್ತಾಯಿಸಿದ್ದಾರೆ.
ಕಸ್ತೂರಿರಂಗನ್ ವರದಿ, ರಸ್ತೆ ಯೋಜನೆ ಕುರಿತು ಗ್ರಾಮಸ್ಥರ ಆಕ್ಷೇಪ
ಕಸ್ತೂರಿರಂಗನ್ ವರದಿಯ ಪರಿಸರ ಸೂಕ್ಷ್ಮ ಪ್ರದೇಶದ ಪ್ರಸ್ತಾವನೆ ಹಾಗೂ ರೋಡ್ ನೆಟ್‌ವರ್ಕ್ ಗ್ರಿಡ್ ಪ್ಲಾನ್‌ಗೆ ಸಂಬಂಧಿಸಿದಂತೆ ಕ್ಷೇತ್ರದ ಹಲವು ಗ್ರಾಮಗಳ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಗ್ರಾಮಸ್ಥರು ಸಲ್ಲಿಸಿರುವ ಮನವಿಗಳನ್ನು ಶಾಸಕಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ಅರಹತೊಳಲು, ಹನುಮಂತಾಪುರ, ಕೆಂಗನಳ್ಳಿ (ಅಶೋಕನಗರ), ಮಲ್ಲಾಪುರ, ಕನಸಿನಕಟ್ಟೆ, ಸನ್ಯಾಸಿಕೋಡಮಗ್ಗಿ, ನಾಗಸಮುದ್ರ, ಸಿದ್ದಿಪುರ, ಹೊಳೆಹಟ್ಟಿ, ಸೂಗೂರು, ಬುಳ್ಳಾಪುರ (ಗೊರುವಿಕಟ್ಟೆ), ಕೂಡ್ಲಿ, ಜಾವಳ್ಳಿ, ಬಿ.ಬೀರನಹಳ್ಳಿ, ವೆಂಕಟಾಪುರ, ಬೆಳಗಲು, ಕಾಟೀಕೆರೆ, ದಾಸರಕಲ್ಲಹಳ್ಳಿ, ತಿಮ್ಲಾಪುರ, ಮಾರಶೆಟ್ಟಿಹಳ್ಳಿ, ತಟ್ಟೆಹಳ್ಳಿ ಹಾಗೂ ಅಗಸನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನರು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ ಮನವಿ ಸಲ್ಲಿಸಿದ್ದಾರೆ ಎಂದು ಶಾರದಾ ಪೂರ್ಯಾನಾಯ್ಕ್ ಸಿಎಂಗೆ ಸಲ್ಲಿಸಿದ್ದ ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಕೊನೆಯ ಭಾಗದ ಕೆರೆಗಳಿಗೆ ತಲುಪದ ನೀರು
ಶಿವಮೊಗ್ಗ ತಾಲೂಕಿನ ಹರಕೆರೆ ಗ್ರಾಮದ ಬಳಿ ತುಂಗಾನದಿಯಿಂದ ನೀರನ್ನು ಎತ್ತಿ ಹಾಯ್ ಹೊಳೆ, ಬ್ಯಾರೇಹಳ್ಳ ಹಾಗೂ ಗೌಡನಕೆರೆಗಳ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಯಿಂದ ರೈತರಿಗೆ ಅನುಕೂಲವಾಗುತ್ತಿದೆ. ಆದರೆ, ಗೌಡನಕೆರೆಯಿಂದ ಸವಳಂಗ ಕೆರೆಯವರೆಗೆ ಇರುವ ಹಳ್ಳ ಹಾಗೂ ನಾಲೆ ವ್ಯವಸ್ಥೆ ಹಾನಿಗೊಳಗಾಗಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಇದರೊಂದಿಗೆ ಮಾರ್ಗಮಧ್ಯೆ ರೈತರು ಪಂಪ್‌ಸೆಟ್‌ಗಳ ಮೂಲಕ ನೀರನ್ನು ಎತ್ತಿಕೊಳ್ಳುತ್ತಿರುವುದರಿಂದ ಕೊನೆಯ ಭಾಗದಲ್ಲಿರುವ ಕೆರೆಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕೊಳವೆ ಮಾರ್ಗದ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು ಎಂದು ಶಾಸಕಿ ಒತ್ತಾಯಿಸಿದ್ದಾರೆ.
3 ಹಂತದ ನೀರಾವರಿ ಕಾಮಗಾರಿಗಳಿಗೆ ₹22.42 ಕೋಟಿ ಬೇಡಿಕೆ
- ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವಿವಿಧ ಕೆರೆಗಳಿಗೆ ನೀರು ತುಂಬಿಸುವ ಉದ್ದೇಶದಿಂದ ಒಟ್ಟು ₹22.42 ಕೋಟಿ ಅಂದಾಜು ಮೊತ್ತದ 3 ಹಂತಗಳ ಕಾಮಗಾರಿಗಳಿಗೆ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಲಾಗಿದೆ.
- ಮೊದಲ ಹಂತದಲ್ಲಿ ಯರೆಕೊಪ್ಪ ಹೊಸೂರು, ಸೇವಾಲಾಲ್ ನಗರ, ಕೊನಗವಳ್ಳಿ ಹಾಗೂ ಮುದುವಾಲ-ಎಡವಾಲ ಮಾರ್ಗದ 8 ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ತುಂಬಿಸುವ ಕಾಮಗಾರಿಗೆ ₹9.76 ಕೋಟಿ ಅನುದಾನ ಕೋರಲಾಗಿದೆ.
- ಎರಡನೇ ಹಂತದಲ್ಲಿ ಮಲ್ಲಾಪುರ-ಹಿಟ್ಟೂರು-ರಾಮನಗರ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ₹9.96 ಕೋಟಿ ಒದಗಿಸುವಂತೆ ಮನವಿ ಮಾಡಲಾಗಿದೆ.
- ಮೂರನೇ ಹಂತದಲ್ಲಿ ಕುಂಸಿ ಗ್ರಾಮದ ಹೊಸಕೆರೆಯಿಂದ ಕೆಳಭಾಗದಲ್ಲಿರುವ 18 ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ ₹2.70 ಕೋಟಿ ಅನುದಾನ ನೀಡುವಂತೆ ಕೋರಲಾಗಿದೆ.
ಈ 3 ಹಂತಗಳ ಕಾಮಗಾರಿಗಳಿಗೆ ಒಟ್ಟು ₹22.42 ಕೋಟಿ ಅನುದಾನ ಒದಗಿಸಿ, ನೀರಾವರಿ ಸೌಲಭ್ಯವನ್ನು ಸುಧಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕಿ ಶಾರದಾ ಪೂರ್ಯಾನಾಯ್ಕ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
