ಟಿಪ್ಪು ನಗರದಲ್ಲಿ ಮನೆಗೆ ನುಗ್ಗಿ ಹಲ್ಲೆ, ಅತ್ತೆಯ ಮನೆಗೆ ಅಳಿಯನ ಬೆಂಕಿ, ಕಾಡೊಳಗೆ ನುಗ್ಗಿದ ಬಸ್ & ಆನಂದಪುರ ಕೇಸ್!

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

Shivamogga Morning Bulletin: ಸಾಲದ ವಿಚಾರಕ್ಕೆ ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು, ಅತ್ತೆ ಮನೆಗೆ ಬೆಂಕಿ ಹಚ್ಚಲು ಅಳಿಯನ ಯತ್ನ ಸೇರಿ ಪ್ರಮುಖ ಸುದ್ದಿಗಳು ಇಲ್ಲಿದೆ. ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರ ಗುಂಪೊಂದು ಇಬ್ಬರು ಸಹೋದರರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರೆ, ಮತ್ತೊಂದೆಡೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಳಿಯನೊಬ್ಬ ಅತ್ತೆಯ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಬ್ಯಾಂಕ್ ಸಾಲದ ನೋಟಿಸ್ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇತ್ತ ತೀರ್ಥಹಳ್ಳಿ ಸಮೀಪ ಬಸ್ ಒಂದು ರಸ್ತೆ ಬಿಟ್ಟು ಬದಿಗೆ ಜಾರಿದ್ದರಿಂದ ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಎಲ್ಲಾ ಪ್ರಮುಖ ವಿದ್ಯಮಾನಗಳ ವಿಸ್ತೃತ ವರದಿ ಇಲ್ಲಿದೆ.

Shivamogga Morning Bulletin : ಟಿಪ್ಪುನಗರದಲ್ಲಿ ಮಾರಣಾಂತಿಕ ಹಲ್ಲೆ, ಇಬ್ಬರು ಮೆಗ್ಗಾನ್ಗೆ ದಾಖಲು

ಯುವಕರ ಗುಂಪೊಂದು ಇಬ್ಬರು ಸಹೋದರರ ಮೇಲೆ ಮಾರಕಾಸ್ತ್ರಗಳಿಂದ ಭೀಕರ ದಾಳಿ ನಡೆಸಿದ ಘಟನೆ ನಗರದ ಟಿಪ್ಪುನಗರದ 5ನೇ ತಿರುವಿನಲ್ಲಿ ಸಂಭವಿಸಿದೆ. ಹಲ್ಲೆಗೊಳಗಾದವರನ್ನು ಕಾರ್ ಡೀಲರ್ ಆಗಿರುವ ರಹಮತ್ ಉಲ್ಲಾ ಹಾಗೂ ಅವರ ಸಹೋದರ ನ್ಯಾಮತ್ ಉಲ್ಲಾ ಎಂದು ಗುರುತಿಸಲಾಗಿದೆ. ಆರೋಪಿಗಳು ಏಕಾಏಕಿ ಮನೆಗೆ ನುಗ್ಗಿ ಈ ಕೃತ್ಯ ಎಸಗಿದ್ದಾರೆ. ದಾಳಿಯ ವೇಳೆ ರಹಮತ್ ಉಲ್ಲಾ ಅವರ ಬಲ ಭುಜಕ್ಕೆ ಭರ್ಚಿಯಿಂದ ಇರಿಯಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾಗೆಯೇ ಸಹೋದರ ನ್ಯಾಮತ್ ಉಲ್ಲಾ ಅವರ ಎಡಗೈಗೂ ತೀವ್ರ ಪೆಟ್ಟಾಗಿದೆ. ಘಟನೆ ನಡೆದ ತಕ್ಷಣವೇ ಇಬ್ಬರನ್ನೂ ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಕೋರರು ಇದೇ ಬಡಾವಣೆಯ ನಿವಾಸಿಗಳು ಎನ್ನಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸ್ತಿದ್ದಾರೆ.

Shivamogga Morning Bulletin : ಗಾಜನೂರಿನಲ್ಲಿ ಕೌಟುಂಬಿಕ ಕಲಹ, ಅತ್ತೆಯ ಮನೆಗೆ ಬೆಂಕಿ ಹಚ್ಚಲು ಅಳಿಯನ ಯತ್ನ

ಕುಟುಂಬದ ಕಲಹ ವಿಕೋಪಕ್ಕೆ ತಿರುಗಿ ಅಳಿಯನೊಬ್ಬ ಅತ್ತೆಯ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದ ಘಟನೆ ತಾಲೂಕಿನ ಗಾಜನೂರಿನಲ್ಲಿ ವರದಿಯಾಗಿದೆ. ದಾನಮ್ಮ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಮಂಜುನಾಥ್ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಾಗಿದೆ. ದಾನಮ್ಮ ಅವರ ಪುತ್ರಿ ಸುಚಿತ್ರಾ ಹಾಗೂ ಮಂಜುನಾಥ್ ವಿವಾಹವಾಗಿ 13 ವರ್ಷಗಳಾಗಿದ್ದು, ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಮಂಜುನಾಥ್ ಮದ್ಯವ್ಯಸನಿಯಾಗಿದ್ದು, ನಿರಂತರ ಜಗಳದ ಕಾರಣದಿಂದಾಗಿ ಸುಚಿತ್ರಾ ಕಳೆದ 6 ರಿಂದ 7 ವರ್ಷಗಳಿಂದ ತಾಯಿಯ ಮನೆಯಲ್ಲಿಯೇ ಆಶ್ರಯ ಪಡೆದಿದ್ದರು. ಜೂನ್ 7ರಂದು ಬೆಳಿಗ್ಗೆ 9.30ರ ಸುಮಾರಿಗೆ ದಾನಮ್ಮ ಅವರ ಮನೆಗೆ ಆಗಮಿಸಿದ ಮಂಜುನಾಥ್, ಮನೆಯವರನ್ನು ಜೀವಂತವಾಗಿ ಸುಟ್ಟುಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ನಂತರ ಬಾಗಿಲು, ಕಿಟಕಿ, ಬಟ್ಟೆ ಹಾಗೂ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಅಪಾಯದ ಮುನ್ಸೂಚನೆ ಅರಿತ ದಾನಮ್ಮ ತಕ್ಷಣವೇ ಮನೆಯಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Shivamogga Morning Bulletin :ಆನಂದಪುರ ಸಮೀಪ ಬ್ಯಾಂಕ್ ಸಾಲದ ವಿವಾದ, ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು

ಬ್ಯಾಂಕ್ ಸಾಲದ ವಿಚಾರವಾಗಿ ನಡೆದಿದ್ದ ಗಲಾಟೆಯಲ್ಲಿ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಆನಂದಪುರ ಸಮೀಪದ ಮಾದರಸನಕೊಪ್ಪ ಗ್ರಾಮದಲ್ಲಿ ವರದಿಯಾಗಿದೆ. ಮೃತ ವ್ಯಕ್ತಿಯನ್ನು 48 ವರ್ಷದ ರಾಘವೇಂದ್ರ ಎಂದು ಗುರುತಿಸಲಾಗಿದೆ. ಇವರು 4 ವರ್ಷಗಳ ಹಿಂದೆ ತಾಯಿಯ ಹೆಸರಿನಲ್ಲಿ ಗ್ರಾಮೀಣ ಬ್ಯಾಂಕಿನಿಂದ 3 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಅಸಲು ಕಟ್ಟದ ಕಾರಣ ಬ್ಯಾಂಕ್ ಅಧಿಕಾರಿಗಳು ರಾಘವೇಂದ್ರ ಅವರ ತಾಯಿ ಹಾಗೂ ಮಹೇಶ್ ಎಂಬುವರಿಗೆ ನೋಟಿಸ್ ನೀಡಿದ್ದರು. ಇದೇ ವಿಚಾರವಾಗಿ ಮೇ 23, 2026ರಂದು ರಾತ್ರಿ 10.30ರ ಸುಮಾರಿಗೆ ರಾಘವೇಂದ್ರ ಅವರು ಸಂಬಂಧಿಕರ ಮನೆಯಿಂದ ಊಟ ಮುಗಿಸಿ ವಾಪಸಾಗುತ್ತಿದ್ದಾಗ, ಆರೋಪಿ ಮಹೇಶ್ ದಾರಿಯಲ್ಲಿ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ ದೊಣ್ಣೆಯಿಂದ ರಾಘವೇಂದ್ರ ಅವರ ಸೊಂಟಕ್ಕೆ ಬಲವಾಗಿ ಹೊಡೆದಿದ್ದಾನೆ. ಈ ತೀವ್ರ ಸ್ವರೂಪದ ಗಾಯದಿಂದಾಗಿ ಆನಂದಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಘವೇಂದ್ರ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ತೀರ್ಥಹಳ್ಳಿ ಬಳಿ ನಿಯಂತ್ರಣ ತಪ್ಪಿ ಕಾಡಿಗೆ ನುಗ್ಗಿದ ಬಸ್

ತೀರ್ಥಹಳ್ಳಿ ತಾಲೂಕಿನಲ್ಲಿ ಸಂಚರಿಸುತ್ತಿದ್ದ ಬಸ್ ವೊಂದು ಏಕಾಏಕಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ಕಾಡಿನ ಪ್ರದೇಶಕ್ಕೆ ನುಗ್ಗಿದ ಘಟನೆ ವರದಿಯಾಗಿದೆ ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಾಹನದಲ್ಲಿದ್ದ ಕೆಲವೇ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆಯಷ್ಟೆ. ಘಟನೆಯಿಂದಾಗಿ ಪ್ರಯಾಣಿಕರು ಕೆಲಕಾಲ ತೀವ್ರ ಆತಂಕಕ್ಕೆ ಒಳಗಾಗಿದ್ದರು. ತಾಂತ್ರಿಕ ದೋಷದಿಂದ ಬಸ್ ನಿಯಂತ್ರಣ ತಪ್ಪಿತ್ತು ಎನ್ನಲಾಗಿದೆ

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor