Shivamogga guarantee schemes /ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳ ದುರ್ಬಳಕೆ ತಡೆಗಾಗಿ ಗೃಹಲಕ್ಷ್ಮೀ ಮತ್ತು ಗೃಹಜ್ಯೋತಿ ಯೋಜನೆಯಡಿ ಸೌಲಭ್ಯ ಪಡೆಯಲು ಫಲಾನುಭವಿಗಳು ಹೊಸದಾಗಿ ಅರ್ಜಿ ಸಲ್ಲಿಸಬೇಕೆಂಬ ನಿಯಮ ಹಾಗೂ ಜಿಲ್ಲಾ ಫಲಾನುಭವಿಗಳಿಗೆ ಗುರುತಿನ ಚೀಟಿ ನೀಡಲು ಉದ್ದೇಶಿಸಿರುವ ಬಗ್ಗೆ ಇದೀಗ ತುಂಬಾನೇ ಚರ್ಚೆಯಾಗುತ್ತಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ಯಾವೆಲ್ಲಾ ಬದಲಾವಣೆ ಹೇಗೆ ಆಗುತ್ತಿದೆ ಎನ್ನುವುದರ ಬಗ್ಗೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ ಎಸ್ ಚಂದ್ರಭೂಪಾಲ್ ಮಾಹಿತಿ ನೀಡಿದ್ದಾರೆ.
ನಿನ್ನೆ ದಿನ ಮಂಗಳವಾರ ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಚೇರಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ, ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಳಕಂಡ ವಿಷಯಗಳನ್ನು ಅಂಗೀಕರಿಸಿದರು.
ಗೃಹಲಕ್ಷ್ಮೀ ಯೋಜನೆಯಲ್ಲಿ ಕಂಡಿದ್ದು
- ಗೃಹಲಕ್ಷ್ಮಿ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಸುಮಾರು 9,247 ಫಲಾನುಭವಿಗಳು ನಿಧನರಾಗಿದ್ದರೂ, ಅವರ ಬ್ಯಾಂಕ್ ಖಾತೆಗಳಿಗೆ ಇನ್ನೂ ಹಣ ಜಮೆ ಆಗುತ್ತಿರುವುದು ಹಾಗೂ ಅದನ್ನು ಬೇರೆಯವರು ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.
- ಅಲ್ಲದೆ, ಒಂದೇ ಮನೆಯಲ್ಲಿ ಇಬ್ಬರು ಅಥವಾ ಮೂವರು ಮಹಿಳೆಯರು ಯಜಮಾನಿಯರಾಗಿ ಸೌಲಭ್ಯ ಪಡೆಯುತ್ತಿರುವ ಪ್ರಕರಣಗಳೂ ಪತ್ತೆಯಾಗಿದ್ದು, ಇಂತಹ ಪ್ರಸಂಗಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಪರಿಷ್ಕರಿಸಲು ಸೂಚಿಸಲಾಗಿದೆ.
- ಸರ್ಕಾರಕ್ಕೆ ಆದಾಯ ತೆರಿಗೆ ಪಾವತಿಸುವವರು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿರುವುದು ಪತ್ತೆಯಾಗಿದೆ. ಜಿಲ್ಲೆಯ ವರದಿಯ ಪ್ರಕಾರ ಇಂತಹ 5,618 ಅನರ್ಹರು ಯೋಜನೆಯ ಲಾಭ ಪಡೆಯುತ್ತಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಹೀಗಾಗಿ ಇಂತಹ ಅನರ್ಹರನ್ನು ಫಲಾನುಭವಿಗಳ ಪಟ್ಟಿಯಿಂದ ತಕ್ಷಣವೇ ತೆಗೆದುಹಾಕಲು ಕಟ್ಟುನಿಟ್ಟಿನ ಕ್ರಮ ಅನಿವಾರ್ಯವಾಗಿದೆ ಎಂದು ಸಭೆ ತಿಳಿಸಿದೆ.
ಉಚಿತ ವಿದ್ಯುತ್ ದುರ್ಬಳಕೆ
ವಾಣಿಜ್ಯ ಬಳಕೆಗೆ ಬ್ರೇಕ್: ‘ಗೃಹಜ್ಯೋತಿ’ ಯೋಜನೆಯಡಿ ಗೃಹಬಳಕೆಗಾಗಿ ನೀಡಲಾಗುವ 200 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡು, ಕೆಲವರು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವುದು ಕಂಡುಬಂದಿದೆ. ಅಲ್ಲದೆ, ಒಬ್ಬರ ಹೆಸರಲ್ಲೇ ಒಂದಕ್ಕಿಂತ ಹೆಚ್ಚು ಮೀಟರ್‌ಗಳಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಬಾಡಿಗೆ ಮನೆಗಳಲ್ಲಿ ನಿಜವಾದ ಫಲಾನುಭವಿಗಳಿದ್ದಾರೆಯೇ ಅಥವಾ ಬೇರೆಯವರಿದ್ದಾರೆಯೇ ಎಂದು ಸೂಕ್ತ ತನಿಖೆ ನಡೆಸಿ ಸರಿಪಡಿಸಲು ಆದೇಶಿಸಲಾಗಿದೆ.
ಸ್ಮಾರ್ಟ್ ಕಾರ್ಡ್ ಹಾಗೂ ಮತದಾನದ ಹಕ್ಕು ಕಡ್ಡಾಯ:
‘ಶಕ್ತಿ’ ಯೋಜನೆಯಡಿ ಉಚಿತ ಪ್ರಯಾಣದ ಸೌಲಭ್ಯವು ಕೇವಲ ಅರ್ಹರಿಗೆ ಮಾತ್ರ ತಲುಪುವಂತೆ ಮಾಡಲು ಮಹಿಳೆಯರಿಗೆ ಇಲಾಖೆಯಿಂದ ಶೀಘ್ರದಲ್ಲೇ ಸ್ಮಾರ್ಟ್ ಕಾರ್ಡ್ ನೀಡಲು ಉದ್ದೇಶಿಸಲಾಗಿದೆ. ಇದರೊಂದಿಗೆ, ಮತದಾನದ ಹಕ್ಕು ಇಲ್ಲದಿದ್ದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ಸಿಗುವುದಿಲ್ಲ ಎಂಬ ಸರ್ಕಾರದ ಕಟ್ಟುನಿಟ್ಟಿನ ಸೂಚನೆಯ ಹಿನ್ನೆಲೆಯಲ್ಲಿ, ಬಿ.ಎಲ್.ಒ ಗಳ ಮೂಲಕ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಲು ಫಲಾನುಭವಿಗಳಿಗೆ ಜಾಗೃತಿ ಮೂಡಿಸಲು ತಾಲೂಕು ಮಟ್ಟದ ಸಮಿತಿಗಳಿಗೆ ಸೂಚಿಸಲಾಗಿದೆ.
ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಸಂಕಲ್ಪ
ಯೋಜನೆಗಳ ದುರ್ಬಳಕೆ ತಡೆಗಾಗಿ ಹೊಸದಾಗಿ ಅರ್ಜಿ ಸಲ್ಲಿಸಬೇಕೆಂಬ ಸರ್ಕಾರದ ನಿರ್ಧಾರ ಹಾಗೂ ಫಲಾನುಭವಿಗಳಿಗೆ ಗುರುತಿನ ಚೀಟಿ ನೀಡುವ ಉಪಕ್ರಮವನ್ನು ಸಭೆ ಸ್ವಾಗತಿಸಿದೆ. ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಘೋಷಣೆಯಂತೆ, ಗ್ಯಾರಂಟಿ ಯೋಜನೆಗಳು ನೈಜ ಫಲಾನುಭವಿಗಳಿಗೆ ತಲುಪುವಂತೆ ಮಾಡಲು ಜಿಲ್ಲಾ ಪ್ರಾಧಿಕಾರವು ಬದ್ಧವಾಗಿದೆ. ಜೊತೆಗೆ ಗ್ಯಾರಂಟಿ ಯೋಜನೆಗಳನ್ನು (Shivamogga guarantee schemes) ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿರುವುದಕ್ಕೆ ಸಭೆ ಹರ್ಷ ವ್ಯಕ್ತಪಡಿಸಿತು.
ಮೀಟಿಂಗ್ನಲ್ಲಿ ಚರ್ಚೆಯಾದ ಅಂಶಗಳು
ಸಭೆಯಲ್ಲಿ ಶಿಕಾರಿಪುರ ಸದಸ್ಯರಾದ ನಾಗನಗೌಡ, ಇತ್ತೀಚೆಗೆ ಬಸ್ಸುಗಳಲ್ಲಿ ದಟ್ಟಣೆ ಹೆಚ್ಚಾಗಿದ್ದು, ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಹೊಸ ಬಸ್ಸುಗಳನ್ನು ಮಂಜೂರು ಮಾಡುವಂತೆ ಸಭೆಯಲ್ಲಿ ಮನವಿ ಮಾಡಿದರು.
ಸದಸ್ಯರು, ತಾಲ್ಲೂಕು ಮಟ್ಟದ ಸಭೆಗಳಿಗೆ ಡಿಪೋ ಮ್ಯಾನೇಜರ್‌ಗಳು ಗೈರಾಗುತ್ತಿದ್ದಾರೆ. ಸಾಗರದಿಂದ ಹೊಸನಗರಕ್ಕೆ ಸಂಜೆ 6:30ರ ನಂತರ ಬಸ್ ಸೌಕರ್ಯವಿಲ್ಲ ಹಾಗೂ ತೀರ್ಥಹಳ್ಳಿ ಗ್ರಾಮೀಣ ಸಾರಿಗೆ ಸಮಸ್ಯೆಗಳು ಹಾಗೇ ಉಳಿದಿವೆ. ಹೊಸನಗರ ತಾಲ್ಲೂಕಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಇಲ್ಲದೆ ಶಕ್ತಿ ಯೋಜನೆಯ ಸೌಲಭ್ಯ ಸಿಗುತ್ತಿಲ್ಲವಾದ್ದರಿಂದ ಈ ಮಾರ್ಗಕ್ಕೆ ಬಸ್ ಬಿಡಬೇಕೆಂದು ಹಾಗೂ ತೀರ್ಥಹಳ್ಳಿ-ಬಸವಾನಿ ಮಾರ್ಗದಲ್ಲಿ ಬಸ್ ಬಿಡುವಂತೆ ಮನವಿ ಮಾಡಿದರು.
ಉಪಾಧ್ಯಕ್ಷರಾದ ಶಿವಣ್ಣ ಮಾತನಾಡಿ, ಸಭೆಯಲ್ಲಿ ಚರ್ಚೆಯಾದ ವಿಷಯಗಳ ಕುರಿತು ಅಧಿಕಾರಿಗಳು ಕಡ್ಡಾಯವಾಗಿ ಅನುಪಾಲನಾ ವರದಿ ನೀಡಬೇಕು. ಕೈಗೊಳ್ಳಲಾದ ಕ್ರಮಗಳ ಬಗ್ಗೆ ತಿಳಿಸಬೇಕು. ಆಗ ಮಾತ್ರ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯವೆಂದರು.
ಶಕ್ತಿ ಯೋಜನೆಯಡಿ ಈವರೆಗೆ 76801377 ಅಂದರೆ ಶೇ.65 ರಷ್ಟು ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು ರೂ.5527.41 ಕೋಟಿ ಸರ್ಕಾರ ವೆಚ್ಚ ಮಾಡಿದೆ ಎಂದು ಕೆಎಸ್‌ಆರ್‌ಟಿಸಿ ಡಿಸಿ ನವೀನ್ ತಿಳಿಸಿದರು.
Whatsapp / https://chat.whatsapp.com/JrsZ8He4nN600n0r3tJItz
ಗೃಹಜ್ಯೋತಿ ಯೋಜನೆ : ಸದಸ್ಯರು ಮಾತನಾಡಿ, ಹೊಸ ಮನೆ ನಿರ್ಮಾಣದ ಸಂದರ್ಭದಲ್ಲಿ ಕೆಇಬಿ ವತಿಯಿಂದ ಎನ್‌ಒಸಿ ನೀಡಲು ಸಮಸ್ಯೆಗಳಿವೆ. ಇದನ್ನು ಅಧಿಕಾರಿಗಳು ತಮ್ಮ ಹಂತದಲ್ಲೇ ಬಗೆಹರಿಸಲು ಕ್ರಮ ವಹಿಸಬೇಕು. ಸ್ಮಾರ್ಟ್ ಸಿಟಿ ಯೋಜನೆಯಡಿ ಯುಜಿ ಕೇಬಲ್ ಅಳವಡಿಸುವಾಗ ರಸ್ತೆಯ ಟೈಲ್ಸ್ ಕಿತ್ತು ಹಾಗೇ ಬಿಡುತ್ತಿರುವುದು ಮತ್ತು ಲೈಟ್ ಕಂಬಗಳ ಕೆಳಗೆ ಕೇಬಲ್ ವೈರ್‌ಗಳನ್ನು ಸರಿಯಾಗಿ ನಿರ್ವಹಿಸದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು, ಕೆಲಸವನ್ನು ಸಮರ್ಪಕವಾಗಿ ಮುಗಿಸಬೇಕು. ವಾಣಿಜ್ಯ ಉದ್ದೇಶಗಳಿಗಾಗಿ ಗೃಹಜ್ಯೋತಿ ಯೋಜನೆಯ ದುರ್ಬಳಕೆಯಾಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದರು.
ಅನ್ನಭಾಗ್ಯ ಯೋಜನೆ : ನ್ಯಾಯಬೆಲೆ ಅಂಗಡಿಗಳಲ್ಲಿ ಫಲಾನುಭವಿಗಳಿಂದ ಅನಗತ್ಯವಾಗಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ಕೇಳುತ್ತಿರುವುದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರದ ಅಧಿಕೃತ ಮಾರ್ಗಸೂಚಿ ಇಲ್ಲದೆ ಇಂತಹ ನಿಯಮ ಹೇರಬಾರದು ಮತ್ತು ಪಡಿತರವನ್ನು ಸಮರ್ಪಕವಾಗಿ ವಿತರಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ತಾಂತ್ರಿಕ ಸಮಸ್ಯೆ: ಸರ್ವರ್ ಸಮಸ್ಯೆ ನಿವಾರಿಸುವುದು, ಪಡಿತರ ವಿತರಣಾ ಸ್ಥಳಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವುದು ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ವೈಫೈ ಅಳವಡಿಕೆ ಕುರಿತು ಸೂಕ್ತ ಮಾರ್ಗಸೂಚಿ ಸಿದ್ಧಪಡಿಸುವಂತೆ ಮನವಿ ಮಾಡಲು ಸಭೆ ತೀರ್ಮಾನಿಸಿತು.
ಬಿಪಿಎಲ್ ಕಾರ್ಡ್ ಸಮಸ್ಯೆ: ಒಂದೇ ಪಡಿತರ ಚೀಟಿಯಲ್ಲಿ ತಂದೆ ಮಕ್ಕಳ ಹೆಸರು ಇದ್ದು, ಮಕ್ಕಳು ದುಡಿಯಲು ಆರಂಭಿಸಿದಾಗ ಇಡೀ ಕಾರ್ಡ್ ಎಪಿಎಲ್ ಆಗಿ ಪರಿವರ್ತನೆಗೊಳ್ಳುತ್ತಿರುವುದರಿಂದ ಬಡ ಪೋಷಕರು ಸೌಲಭ್ಯ ವಂಚಿತವಾಗುತ್ತಿದೆ. ಅಲ್ಲದೆ, ಆಸ್ಪತ್ರೆ ಮತ್ತಿತರ ತುರ್ತು ಅಗತ್ಯಗಳಿಗಾಗಿ 1 ಲಕ್ಷ ರೂ. ಒಳಗಿನ ನಾಲ್ಕು ಚಕ್ರದ ವಾಹನ ಹೊಂದಿದ್ದರೂ ಬಿಪಿಎಲ್ ರದ್ದಾಗುತ್ತಿರುವ ನಿಯಮದ ಬಗ್ಗೆ ಚರ್ಚಿಸಿ, ಸೂಕ್ತ ಮಾರ್ಗದರ್ಶನಕ್ಕಾಗಿ ಕೋರಲಾಯಿತು.
Shivamogga guarantee schemes ಸಭೆಯಲ್ಲಿ ಪ್ರಾಧಿಕಾರದ ಉಪಾಧ್ಯಕ್ಷರಾದ ಶಿವಣ್ಣ, ಎಂ ಎಸ್ ಬಸವರಾಜಪ್ಪ, ಅಫ್ತಾಬ್ ಪರ್ವೇಜ್, ರಮೇಶ್, ಸದಸ್ಯರಾದ ಅಮೀರ್ ಅಮ್ಜಾ, ಪ್ರಭಾಕರ್, ಭವ್ಯ ಕೃಷ್ಣಮೂರ್ತಿ, ರಾಹುಲ್, ಅರ್ಚನ, ನವುಲೇಶ್, ಶಿವಾನಂದ, ಉದಯಕುಮಾರ್, ಹೆಚ್ ಎಂ ಮಧು, ಚಿದಂಬರ, ಜಯಶೀಲಪ್ಪಗೌಡ, ಜಯಂತ್, ನಾಗನಗೌಡ ಇತರೆ ಸದಸ್ಯರು ಹಾಗೂ ಜಿ.ಪಂ ಉಪ ಕಾರ್ಯದರ್ಶಿ ಸುಜಾತ, ಆಹಾರ ಇಲಾಖೆ ಉಪ ನಿರ್ದೇಶಕ ಸತೀಶ್ ಇತರೆ ಅಧಿಕಾರಿಗಳು ಹಾಜರಿದ್ದರು.
