ಶಿವಮೊಗ್ಗ: ನಗರದ ಪ್ರಸಿದ್ದ ರೆಸಾರ್ಟ್ ಮಾಲೀಕರ ಕಾರು ಚಾಲಕನ ಮೇಲೆ ಮೂವರು ಕಿಡಿಗೇಡಿಗಳು ಹಲ್ಲೆ ನಡೆಸಿ, ಮೊಬೈಲ್ ಹಾಗೂ ನಗದನ್ನು ದೋಚಿರುವ ಘಟನೆ ನಡೆದಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Shimoga Robbery ಘಟನೆಯ ಹಿನ್ನೆಲೆ
ನಗರದ ಪ್ರಸಿದ್ದ ರೆಸಾರ್ಟ್ ಮಾಲೀಕರ ಕಾರು ಚಾಲಕನಾಗಿ ಕೆಲಸ ಮಾಡುತ್ತಿರುವ ಚಾಲಕ ಎಂದಿನಂತೆ ಸಹೋದ್ಯೋಗಿ ಅವರೊಂದಿಗೆ ನಾಯಿಗಳನ್ನು ವಾಕಿಂಗ್ ಮಾಡಿಸಲು ರೆಸಾರ್ಟ್‌ಗೆ ತೆರಳಿದ್ದರು. ರಾತ್ರಿ ಸುಮಾರು 8:45ರ ವೇಳೆಗೆ ರೆಸಾರ್ಟ್‌ನಿಂದ ವಾಪಸ್ ಬರುತ್ತಿದ್ದಾಗ, ಸಾಗರ ರಸ್ತೆಯ ಆಲ್ಕೊಳ ಸರ್ಕಲ್ ಬಳಿ ಸ್ಕೂಟಿಯಲ್ಲಿ ಬಂದ ಮೂವರು ಯುವಕರು ಇನೋವಾ ಕಾರನ್ನು ಅಡ್ಡಗಟ್ಟಿದ್ದಾರೆ. ಇದರಿಂದ ಭಯಗೊಂಡ ಚಾಲಕ ವಾಜಪೇಯಿ ಲೇಔಟ್ ರಸ್ತೆಯತ್ತ ಕಾರು ತಿರುಗಿಸಿದರೂ ಬೆನ್ನಟ್ಟಿದ ದರೋಡೆಕೋರರು ರಸ್ತೆ ಮಧ್ಯೆ ತಡೆದಿದ್ದಾರೆ.
ಕಾರು ನಿಲ್ಲಿಸುತ್ತಿದ್ದಂತೆಯೇ ಕಬ್ಬಿನ ರಾಡ್ನಿಂದ ಕಾರಿನ ಗ್ಲಾಸ್ ಪುಡಿಪುಡಿ ಮಾಡಿದ ಕಿಡಿಗೇಡಿಗಳು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಚಾಲಕ ಹಾಗೂ ಸಹ ಉದ್ಯೋಗಿಯ ಮೇಲೆ ಹಲ್ಲೆ ಮಾಡಿದ ದರೋಡೆಕೋರರು, ಚಾಲಕನ ಮೊಬೈಲ್‌ನಿಂದ ಬಲವಂತವಾಗಿ ಸ್ಕ್ಯಾನರ್ ಮೂಲಕ 4,000 ರೂಪಾಯಿಗಳನ್ನು ಫೋನ್-ಪೇ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಹಾಗೆಯೇ ಚಾಲಕನ ಬಳಿಯಿದ್ದ 20 ಸಾವಿರ ಮೌಲ್ಯದ ಒಪ್ಪೋ ಮೊಬೈಲ್ ಹಾಗೂ ಸಹ ಉದ್ಯೋಗಿಯಬಳಿಯಿದ್ದ 16 ಸಾವಿರ ಮೌಲ್ಯದ ವಿವೋ ಮೊಬೈಲ್ ಅನ್ನು ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
Shimoga Robbery Resort Driver Attacked, Money Extorted
