ನಶೆ ಮುಕ್ತ ಶಿವಮೊಗ್ಗ ಜಿಲ್ಲೆ ಸಂಕಲ್ಪ- ವಾರ್ ಫೂಟ್ ನಲ್ಲಿ ಕೆಲಸ ಮಾಡುತ್ತೇವೆ- ಎಸ್ಪಿ ಬಿ. ನಿಖಿಲ್

ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ (SP) ಬಿ. ನಿಖಿಲ್ ಅವರು ಇಂದು ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಎಸ್.ಪಿ. ಆಗಿದ್ದ ಮಿಥುನ್ ಕುಮಾರ್ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬಿ. ನಿಖಿಲ್ ಅವರನ್ನು ನೇಮಕ ಮಾಡಲಾಗಿದ್ದು, ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕಾರ್ಯಪ್ಪ ಅವರು ಹೂಗುಚ್ಛ ನೀಡಿ ನೂತನ ಎಸ್.ಪಿ. ಅವರನ್ನು ಸ್ವಾಗತಿಸಿದರು.

 B Nikhil IPS Takes Charge as Shivamogga SP
B Nikhil IPS Takes Charge as Shivamogga SP

ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿ. ನಿಖಿಲ್ ಅವರು, ಜಿಲ್ಲೆಯ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ತಾವು ಕೈಗೊಳ್ಳಲಿರುವ ಪ್ರಮುಖ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಮೂಲತಃ ಚಿತ್ರದುರ್ಗದ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದಿರುವುದಾಗಿ ತಿಳಿಸಿದರು. 2017 ರ ಐಪಿಎಸ್ ಬ್ಯಾಚ್ ನ ಅಧಿಕಾರಿಯಾಗಿದ್ದೇನೆ. ಐಪಿಎಸ್ ನಲ್ಲಿ ಕನ್ನಡ ಸಾಹಿತ್ಯವನ್ನೇ ಐಚ್ಚಿಕ ವಿಷಯವಾಗಿ ತೆಗೆದುಕೊಂಡಿದ್ದೆ. ರಾಯಚೂರು, ಕೋಲಾರ ಎ.ಎನ್.ಎಫ್ ನಲ್ಲಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ಥುತ ಮಧ್ಯ ಕರ್ನಾಟಕ ಭಾಗದ ಶಿವಮೊಗ್ಗ ಜಿಲ್ಲೆಯಲ್ಲಿ ಎಸ್ಪಿ ಯಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ನನ್ನ ಭಾಗ್ಯ ಎಂದು ನಿಖಿಲ್ ಹೇಳಿದರು..ಶಿವಮೊಗ್ಗ ಜಿಲ್ಲೆ ಹಲವು ವಿಶೇಷತೆಗಳನ್ನು ಹೊಂದಿದ್ದು, ಜಿಲ್ಲೆಗೆ ಅದರದ್ದೇ ಆದ ಅಸ್ಮಿತೆ ಇದೆ. ಪ್ರತಿ ತಾಲೂಕುಗಳು ಭಿನ್ನವಾಗಿದೆ

B Nikhil IPS ಪೊಲೀಸ್ ಇಲಾಖೆಯ ಹೊಸ ಮಂತ್ರ: ಜನಸ್ನೇಹಿ ಆಡಳಿತ

ಠಾಣೆಗೆ ಬರುವ ಸಾರ್ವಜನಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕು ಮತ್ತು ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂಬುದು ಐಜಿಯವರ ಆಶಯವಾಗಿದೆ. ಅದರಂತೆ ದೂರುದಾರರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಮ್ಮ ಇಲಾಖೆ ಪ್ರಾಮಾಣಿಕವಾಗಿ ಕೆಲಸ ಮಾಡಲಿದೆ,” ಎಂದು ಅವರು ತಿಳಿಸಿದರು.

ಡ್ರಗ್ಸ್ ವಿರುದ್ಧ ಸಮರ: ‘ನಶೆ ಮುಕ್ತ ಶಿವಮೊಗ್ಗ’

ಮಾದಕ ವಸ್ತುಗಳ ಹಾವಳಿಯನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ ಎಸ್.ಪಿ:

ಗಾಂಜಾ ಮುಕ್ತ ಜಿಲ್ಲೆ: ಗಾಂಜಾ ಪೆಡ್ಲರ್‌ಗಳು ಮತ್ತು ಗ್ರಾಹಕರ ವಿರುದ್ಧ ಕಾನೂನು ಸಮರ ಸಾರಲಾಗುವುದು ಎಂದು ತಿಳಿಸಿದರು. ಗಾಂಜ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲಾ ರೀತಿಯಲ್ಲಿ ಅರಿವು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಜಿಲ್ಲೆಯನ್ನು ಗಾಂಜ ಮುಕ್ತವಾಗಿಸುವ ನಿಟ್ಟಿನಲ್ಲಿ ವಾರ್ ಫೂಟ್ ನಲ್ಲಿ ಕೆಲಸ ಮಾಡುವುದಾಗಿ ನಿಖಿಲ್ ಹೇಳಿದರು.

ಸರ್ಕಾರದ ಸಂಕಲ್ಪ: ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ಆಶಯದಂತೆ ‘ನಶೆ ಮುಕ್ತ ಕರ್ನಾಟಕ’ ನಿರ್ಮಾಣಕ್ಕೆ ಜಿಲ್ಲೆಯಲ್ಲಿ ಮೊದಲ ಆದ್ಯತೆ ನೀಡಲಾಗುವುದು.

ಪಬ್ಲಿಕ್ ಐ (Public Eye): ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಸಾಧಿಸಲು ಮತ್ತು ದೂರುಗಳನ್ನು ಸ್ವೀಕರಿಸಲು ‘ಪಬ್ಲಿಕ್ ಐ’ ಎಂಬ ವಾಟ್ಸಾಪ್ ಚಾನೆಲ್ ಆರಂಭಿಸಲಾಗುವುದು. ಸಾರ್ವಜನಿಕರು ಪೊಲೀಸ್ ವ್ಯವಸ್ಥೆಯೊಂದಿಗೆ ನೇರ ಸಂಪರ್ಕದಲ್ಲಿರಲು ಈ ಚಾನಲ್ ಸಹಕಾರಿಯಾಗಲಿದೆ 

ಮಕ್ಕಳಿಗಾಗಿ ‘ಸನ್ಮಿತ್ರ’ ಯೋಜನೆ

ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇಲಾಖೆಯು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ:

ಸನ್ಮಿತ್ರ ಯೋಜನೆ: ಮಕ್ಕಳು ಮೊಬೈಲ್ ಬಳಸುವಾಗ ಎದುರಿಸುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.

ಆರಕ್ಷಕ ದಿನ: ಶಾಲೆಗಳಲ್ಲಿ ‘ಆರಕ್ಷಕ ದಿನ’ ಆಚರಿಸುವ ಮೂಲಕ ಮೊಬೈಲ್ ವ್ಯಸನ ಮತ್ತು ನಶೆಯ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುವುದು ಎಂದು ನಿಖಿಲ್ ತಿಳಿಸಿದರು.

ಕೋಮು ಸೌಹಾರ್ದತೆ ಮತ್ತು ಸಂಚಾರ ನಿಯಮ

ಶಿವಮೊಗ್ಗ ಜಿಲ್ಲೆಯ ಕೋಮು ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ವಿಶೇಷ ಯೋಜನೆಯನ್ನು ರೂಪಿಸಲಾಗಿದೆ. ಸಂಘರ್ಷಗಳಿಗೆ ಕಡಿವಾಣ ಹಾಕಿ ಶಾಂತಿ ಕಾಪಾಡಲು ಬದ್ಧರಾಗಿರುವುದಾಗಿ ಅವರು ತಿಳಿಸಿದರು. ಇದರೊಂದಿಗೆ ಸಂಚಾರ ನಿಯಮಗಳ ಪಾಲನೆ ಹಾಗೂ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಅಭಿಯಾನ ಮುಂದುವರಿಯಲಿದೆ. ಪೊಲೀಸರ ಭಯಕ್ಕಾಗಿ ಹೆಲ್ಮೇಟ್ ಧರಿಸುವುದು ಬೇಡ. ಅವರ ಕುಟುಂಬಗಳ ಮೇಲೆ ಪ್ರೀತಿ ಇದ್ದರೆ ಮನೆಯಿಂದ ಹೊರಡುವ ಪ್ರತಿಯೊಬ್ಬ ಬೈಕ್ ಸವಾರರು ಹೆಲ್ಮೇಟ್ ಧರಿಸಬೇಕು ಎಂದು ನಿಖಿಲ್ ಮನವಿ ಮಾಡಿದರು.

 B Nikhil IPS Takes Charge as Shivamogga SP
B Nikhil IPS Takes Charge as Shivamogga SP

 B Nikhil IPS Takes Charge as Shivamogga SP