ಮಲೆನಾಡು ಟುಡೆ ಸುದ್ದಿ / ಭದ್ರಾವತಿ : ತಾಲೂಕಿನ ಭದ್ರಾವತಿ ನಗರದ ಮಾಧವಾಚಾರ್ ಸರ್ಕಲ್ ಸಮೀಪವಿರುವ ಭದ್ರಾ ನದಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಸಮೀಪದ ಹೊಸ ಸೇತುವೆಯಿಂದ ಹಾರಿ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ನದಿಯ ನೀರಿನ ಮೇಲೆ ಶವ ತೇಲಾಡುತ್ತಿರುವುದನ್ನು ಕಂಡ ಸ್ಥಳೀಯ ನಿವಾಸಿಗಳು ತಕ್ಷಣವೇ ಪೊಲೀಸರಿಗೆ ಸುದ್ಧಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದಾರೆ. ಅಲ್ಲದೆ, ನದಿಯ ದಡದ ಅಕ್ಕಪಕ್ಕ ಹುಡುಕಾಟ ನಡೆಸಿ, ಮೃತರ ಬಗ್ಗೆ ಸುಳಿವು ಕಲೆಹಾಕಲು ಪ್ರಯತ್ನಿಸುತ್ತಿದ್ದಾರೆ.

ಇದುವರೆಗೆ ಮೃತಪಟ್ಟ ವ್ಯಕ್ತಿಯ ಹೆಸರು, ವಿಳಾಸ ಅಥವಾ ಇತರೆ ಯಾವುದೇ ವಿವರಗಳು ಲಭ್ಯವಾಗಿಲ್ಲ. ಇದು ಆತ್ಮಹತ್ಯೆಯ ಪ್ರಕರಣವೇ ಅಥವಾ ಬೇರೆ ಕಾರಣವೇ ಎಂಬುದು ಸ್ಪಷ್ಟವಾಗಿಲ್ಲದ ಕಾರಣ, ಹಳೆನಗರ ಠಾಣೆಯ ಪೊಲೀಸರು ಸೇತುವೆಯ ಅಸುಪಾಸಿನಲ್ಲಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಜಾಲಾಡುತ್ತಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.
