ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ನಗರದ ಕೋಟೆ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಸೆ.25ರಂದು ನಡೆಯಲಿದೆ. ಉತ್ಸವದ ಹಿನ್ನೆಲೆಯಲ್ಲಿ ಇಡೀ ನಗರ ಅದ್ದೂರಿಯಾಗಿ ಸಿಂಗಾರಗೊಂಡಿದ್ದು, ಪ್ರಮುಖ ರಸ್ತೆಗಳು ಹಾಗೂ ವೃತ್ತಗಳು ಕಲಾಕೃತಿಗಳಿಂದ ಕಂಗೊಳಿಸುತ್ತಿವೆ’ ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಕೇಸರಿ ಅಲಂಕಾರ ಸಮಿತಿಯಿಂದ ಗಣಪತಿ ಸಾಗುವ ಮಾರ್ಗಗಳಲ್ಲಿ ಮಾತ್ರವಲ್ಲದೆ ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ವಿವಿಧ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಕೇಸರಿ ಬಂಟಿಂಗ್‌ಗಳಿಂದ ನಗರವನ್ನು ಅಲಂಕರಿಸಲಾಗಿದ್ದು, ಶಿವಮೊಗ್ಗ ಕೇಸರಿಮಯವಾಗಿ ಕಂಗೊಳಿಸುತ್ತಿದೆ ಎಂದರು.
ರಾಜಬೀದಿ ಉತ್ಸವಕ್ಕೆ ಶಿವಮೊಗ್ಗ ಮಾತ್ರವಲ್ಲದೆ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದೆ. ಸಾರ್ವಜನಿಕರಿಗೆ ತಿಂಡಿ, ಪಾನೀಯ, ಸಿಹಿ, ಪ್ರಸಾದ, ನೀರು ಹಾಗೂ ಮಜ್ಜಿಗೆ ವಿತರಿಸಲು ವಿವಿಧ ಸಂಘ-ಸಂಸ್ಥೆಗಳು ಮತ್ತು ಯುವಕ ಸಂಘಗಳು ಸಿದ್ಧತೆ ಮಾಡಿಕೊಂಡಿವೆ ಎಂದರು.
ಉತ್ಸವದ ಹಿನ್ನೆಲೆಯಲ್ಲಿ ಸೆ.24ರಂದು ರಾತ್ರಿ 8.30ಕ್ಕೆ ಕೋಟೆ ಭೀಮೇಶ್ವರ ದೇವಸ್ಥಾನದಲ್ಲಿ ಮೂರ್ತಿಗೆ ಮಹಾಮಂಗಳಾರತಿ ಹಾಗೂ ವೀರ ಶಿವಮೂರ್ತಿ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಲಿದೆ ಎಂದ ಅವರು, ಸೆ.25ರಂದು ಬೆಳಗ್ಗೆ 10ರಿಂದ 10.30ರೊಳಗೆ ಉತ್ಸವದ ಗಣಪತಿ ರಾಜಬೀದಿ ಮೆರವಣಿಗೆ ಆರಂಭವಾಗಲಿದೆ. ಗಾಡಿಕೊಪ್ಪ ಸೇರಿದಂತೆ ಗಾಂಧಿ ಬಜಾರ್, ಅಕ್ಕಮಹಾದೇವಿ ವೃತ್ತ ವಿವಿಧೆಡೆ ಸ್ವಾಗತ ಕಮಾನು ಹಾಗೂ ವಿಶೇಷ ಅಲಂಕಾರ ಮಾಡಲಾಗಿದೆ. ಗಾಂಧಿ ಬಜಾರ್‌ನಲ್ಲಿ ಕಲಾವಿದ ಜೀವನ್ ಅವರ ನೇತೃತ್ವದಲ್ಲಿ ಆಂಜನೇಯನ ಬೃಹತ್ ಕಲಾಕೃತಿ ನಿರ್ಮಿಸಲಾಗಿದೆ ಎಂದರು.
ಹಿಂದೂ ಸಂಘಟನಾ ಮಹಾಮಂಡಳಿಯ ಗಣೇಶೋತ್ಸವ 82ನೇ ವರ್ಷಕ್ಕೆ ಕಾಲಿಟ್ಟಿದ್ದು, ಹಲವು ವರ್ಷಗಳಿಂದ ವಿವಿಧ ಸವಾಲುಗಳ ನಡುವೆಯೂ ಉತ್ಸವವನ್ನು ಮುಂದುವರಿಸಿಕೊಂಡು ಬರಲಾಗಿದೆ. ಲೋಕಮಾನ್ಯ ತಿಲಕರ ಸಾರ್ವಜನಿಕ ಗಣೇಶೋತ್ಸವದ ಆಶಯ ಹಾಗೂ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಗಣೇಶೋತ್ಸವ ವಹಿಸಿದ್ದ ಪಾತ್ರವನ್ನು ಸ್ಮರಿಸಲಾಗುತ್ತಿದೆ ಎಂದು ಚನ್ನಬಸಪ್ಪ ಹೇಳಿದರು.
ವಂದೇ ಮಾತರಂ ಹೆಸರಿನ ಸ್ವಾಗತ ಕಮಾನು ನಿರ್ಮಾಣ
ಶಿವಪ್ಪ ನಾಯಕ ವೃತ್ತದ ಬಳಿ ಛತ್ರಪತಿ ಶಿವಾಜಿ ಮಹಾರಾಜರ ಪರಿಕಲ್ಪನೆಯ ಅಲಂಕಾರ ಮಾಡಲಾಗಿದ್ದು, ವಂದೇ ಮಾತರಂ ಹೆಸರಿನ ಸ್ವಾಗತ ಕಮಾನು ನಿರ್ಮಿಸಲಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು. ರಾಜಬೀದಿ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನೆಲೆಯಲ್ಲಿ ಸಂಚಾರ ನಿಯಂತ್ರಣ ಹಾಗೂ ಭದ್ರತೆಗೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಉತ್ಸವವು ಶಾಂತಿಯುತವಾಗಿ ನಡೆಯಲು ನಾಗರಿಕರು, ವಿವಿಧ ಸಂಘ–ಸಂಸ್ಥೆಗಳು ಹಾಗೂ ಎಲ್ಲ ಸಮುದಾಯಗಳ ಜನರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
