ಶಿವಮೊಗ್ಗ : 3 ಸಾವಿರ ಪೊಲೀಸ್, ಸಾವಿರಾರು ಸಿಸಿಟಿವಿ ಕ್ಯಾಮರಾ, ಹಿಂದೂ ಮಹಾಸಭಾ ಗಣೇಶೋತ್ಸವದ ವಿಸರ್ಜನಾ ಪೂರ್ವ ಮೆರವಣಿಗೆಗೆ  ಹೇಗಿದೆ ತಯಾರಿ 

ಹಂಚಿಕೊಳ್ಳಿ
WhatsApp Facebook X Telegram
ಎಸ್_ ಪಿ ನಿಖಿಲ್_ ಬಿ ಜಿಲ್ಲಾ ರಕ್ಷಣಾಧಿಕಾರಿ ಶಿವಮೊಗ್ಗ, ಮಲೆನಾಡು ಟುಡೆ ಸುದ್ದಿ
ಎಸ್_ ಪಿ ನಿಖಿಲ್_ ಬಿ ಜಿಲ್ಲಾ ರಕ್ಷಣಾಧಿಕಾರಿ ಶಿವಮೊಗ್ಗ, ಮಲೆನಾಡು ಟುಡೆ ಸುದ್ದಿ

ಶಿವಮೊಗ್ಗ: ನಗರದ ಪ್ರಸಿದ್ಧ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆಯನ್ನು ಸೆಪ್ಟಂಬರ್ 25 ರಂದು ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿಯ ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಸ್ ಪಿ ನಿಖಿಲ್ ಬಿ. ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟಂಬರ್ 25 ರಂದು ಬೆಳಿಗ್ಗೆ 10:30ಕ್ಕೆ ನಗರದ ಭೀಮೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಇಂದು ಸಂಜೆ ನಗರದಲ್ಲಿ ರೂಟ್ ಮಾರ್ಚ್ ನಡೆಸಲಾಗುವುದು ಎಂದರು.

ವಿಸರ್ಜನಾ ಮೆರವಣಿಗೆಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಭದ್ರತೆಗಾಗಿ 5 ಜನ ಎಸ್ ಪಿ, 22 ಜನ ಡಿಎಸ್ ಪಿ, 84 ಜನ ಸಿಪಿಐ, 289 ಜನ ಎಎಸ್ ಐ ಹಾಗೂ ಹೆಚ್ ಸಿ, ಪಿ ಸಿ ಸೇರಿದಂತೆ ಒಟ್ಟು 2,134 ಸಿಬ್ಬಂದಿ ಒಳಗೊಂಡಂತೆ 3,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ 7 ಅಗ್ನಿಶಾಮಕ ವಾಹನಗಳು, 4 ಆಂಬ್ಯುಲೆನ್ಸ್‌ಗಳು, 3,500 ವಿಡಿಯೋ ಹಾಗೂ ಸಿಸಿಟಿವಿ ಕ್ಯಾಮೆರಾಗಳು ಮತ್ತು 12 ಡ್ರೋನ್ ಕ್ಯಾಮೆರಾಗಳ ಮೂಲಕ ಕಣ್ಗಾವಲು ಇಡಲಾಗಿದೆ.ಶಾಂತಿ-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕಳೆದ 10 ದಿನಗಳಲ್ಲಿ 2 ಬಾರಿ ರೌಡಿ ಪೆರೇಡ್ ನಡೆಸಿ, 20 ರೌಡಿ ಆಸಾಮಿಗಳನ್ನು ಜೈಲಿಗೆ ಕಳುಹಿಸಲಾಗಿದೆ ಹಾಗೂ 32 ಜನರನ್ನು ಗಡಿಪಾರು ಮಾಡಲಾಗಿದೆ ಎಂದು ಎಸ್ ಪಿ ವಿವರ ನೀಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸುವವರ ಮೇಲೆಯೂ ತೀವ್ರ ನಿಗಾ ವಹಿಸಲಾಗಿದೆ. ಸಾರ್ವಜನಿಕರು ಯಾವುದೇ ಸುಳ್ಳು ಸುದ್ದಿ ಅಥವಾ ವದಂತಿಗಳಿಗೆ ಕಿವಿಗೊಡದೆ, ಸಂತೋಷದಿಂದ ಹಬ್ಬವನ್ನು ಆಚರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.


ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor