ಮಲೆನಾಡು ಟುಡೆ ಸುದ್ದಿ / ಶಿಕಾರಿಪುರ / ಪಟ್ಟಣದ ಹುಚ್ಚರಾಯಸ್ವಾಮಿ ಕೆರೆಯಲ್ಲಿ ನಿನ್ನೆ ದಿನ ಬುಧವಾರ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬಿಸಿಎ ವಿದ್ಯಾರ್ಥಿನಿ ನಮಿತಾ (21) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಲಭ್ಯವಾಗಿದೆ.
ಸೆಮಿಸ್ಟರ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ, ಒಂದು ವಿಷಯದಲ್ಲಿ ಅನುತ್ತೀರ್ಣಳಾಗಿದ್ದಳು. ಈ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ನೋಟ್ನಲ್ಲಿ ಬರೆದಿದ್ದಾಳೆ ಎಂದು ಸಂಬಂಧಿಕರು ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪಟ್ಟಣದ ನಿವಾಸಿಯಾಗಿದ್ದ ನಮಿತಾ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿಸಿಎ ವ್ಯಾಸಂಗ ಮಾಡುತ್ತಿದ್ದಳು. ಬುಧವಾರ ಬೆಳಿಗ್ಗೆ ಕಾಲೇಜಿಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಹೊರಟಿದ್ದಳು. ನಂತರ ಹುಚ್ಚರಾಯಸ್ವಾಮಿ ಕೆರೆ ಬಳಿ ಆಕೆಯ ದ್ವಿಚಕ್ರ ವಾಹನ, ಚಪ್ಪಲಿ ಸೇರಿದಂತೆ ವೈಯಕ್ತಿಕ ವಸ್ತುಗಳು ಪತ್ತೆಯಾಗಿದ್ದವು.
ಯುವತಿ ಕೆರೆಗೆ ಬಿದ್ದಿರುವ ಮಾಹಿತಿ ತಿಳಿದ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದರು. ಇದೀಗ ಸಾವಿನ ಹಿಂದಿನ ಕಾರಣ ಹೊರಬಂದಿದೆ. ನಮಿತಾ ಬರೆದಿದ್ದಾಳೆ ಎನ್ನಲಾದ ಡೆತ್ನೋಟ್ ಆಕೆಯ ಕಾಲೇಜು ಬ್ಯಾಗ್ನಲ್ಲಿ ಪತ್ತೆಯಾಗಿದೆ ಎಂದು ಸಂಬಂಧಿಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂಬುದನ್ನೂ ಡೆತ್ನೋಟ್ನಲ್ಲಿ ಉಲ್ಲೇಖಿಸಿರುವ ಆಕೆ, ತನ್ನನ್ನು ಕ್ಷಮಿಸುವಂತೆ ಪೋಷಕರಿಗೆ ಕೋರಿದ್ದಾರೆ. ಸದ್ಯ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
