ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​, ಜೆಪಿ ನಗರದಲ್ಲಿ ನಡೆದಿದ್ದು ಕೊಲೆ! ಪತ್ನಿ, ಪ್ರಿಯಕರನ ವಿರುದ್ಧ ಕೇಸ್! ಸಾಗರ ಪೇಟೆಯಲ್ಲಿ ನಡೆದಿದ್ದೇನು?

ಮಲೆನಾಡು ಟುಡೆ ಸುದ್ದಿ / ಸಾಗರ / ಸಾಗರ ಪೇಟೆಯ ಜೆ.ಪಿ. ನಗರದಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ ಸಾವಿನ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಆತ್ಮಹತ್ಯೆ ಎಂದುಕೊಂಡಿದ್ದ ಪ್ರಕರಣ ಇದೀಗ, ಬದಲಾಗಿ ವ್ಯವಸ್ಥಿತವಾದ ಕೊಲೆ ಎಂಬ ಸತ್ಯ ಇದೀಗ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ಸಾಗರ ಟೌನ್​ ಪೊಲೀಸ್ ಸ್ಟೇಷನ್​ ಕೇಸ್​

ಮೇ 15ರಂದು ಜೆ.ಪಿ. ನಗರದ ನಿವಾಸಿ ಪರಶುರಾಮ್ ಎಂಬುವವರು ಸಾವನ್ನಪ್ಪಿದ್ದರು. ಅವರ ಸಾವಿನ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ, ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಬಿಂಬಿತವಾಗಿದ್ದ ಪ್ರಕರಣದ ಹಿಂದೆ ಪತ್ನಿಯ ಅನೈತಿಕ ಸಂಬಂಧ ಹಾಗೂ ಮಾರಣಾಂತಿಕ ಹಲ್ಲೆಯ ಕರಾಳ ಮುಖ ಅಡಗಿರುವುದು ತನಿಖೆಯ ವೇಳೆ ಸ್ಪಷ್ಟವಾಗಿದೆ.

ಘಟನೆಯ ಗಾಂಭೀರ್ಯತೆಯನ್ನು ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಈ ಮೂಲಕ ತನಿಖೆಗೆ ಹೊಸ ವೇಗ ನೀಡಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಸಾಗರ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.

ಸಾಗರ ಪೇಟೆಯಲ್ಲಿ ನಡೆದಿದ್ದು ಏನು?

ಮೃತ ಪರಶುರಾಮ್ ಅವರು ಮೇ 15ರಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಆರಂಭಿಕ ಹಂತದಲ್ಲಿ ಇದೊಂದು ಆತ್ಮಹತ್ಯೆ ಕೇಸ್​ ಎಂಬ ನಿರ್ಧಾರಕ್ಕೆ ಬರಲಾಗಿತ್ತು ಮತ್ತು ಅದೇ ಆಧಾರದ ಮೇಲೆ ಪ್ರಕರಣವನ್ನು ಸಹ ದಾಖಲಿಸಿಕೊಳ್ಳಲಾಗಿತ್ತು.

ಸಾಗರ ಪೇಟೆ : ಸ್ಥಳೀಯರ ಅನುಮಾನದ ಮೇರೆಗೆ ಬದಲಾದ ನಿರ್ಣಯ

ಆದರೆ, ಪರಶುರಾಮ್ ಅವರ ಸಾವು ಸಹಜವಾದದ್ದಲ್ಲ ಎಂಬ ಅನುಮಾನ ಜೆ.ಪಿ. ನಗರದ ಸ್ಥಳೀಯರ ವಲಯದಲ್ಲಿ ಚರ್ಚೆಯಾಗತೊಡಗಿದವು. ಸಾರ್ವಜನಿಕವಾಗಿ ಕೇಳಿಬಂದ ಈ ಸ್ವರೂಪದ ಚರ್ಚೆಗಳು ಹಾಗೂ ಅನುಮಾನದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆಯು, ಪ್ರಕರಣದ ಕಡತವನ್ನು ಪುನರ್ ಪರಿಶೀಲನೆಗೆ ಒಳಪಡಿಸಿತು. ಈ ವೇಳೆ ಇದೊಂದು ಆತ್ಮಹತ್ಯೆಯಲ್ಲ, ಬದಲಾಗಿ ಕೊಲೆ ಎಂದು ಸ್ಪಷ್ಟವಾಗತೊಡಗಿದೆ.

ಕೌಟುಂಬಿಕ ಕಲಹ ಕಾರಣವಾಯಿತೆ?

ಪರಶುರಾಮ್ ಅವರ ಕೊಲೆಗೆ ಕೌಟುಂಬಿಕ ಕಲಹ ಹಾಗೂ ಪತ್ನಿಯ ಅನೈತಿಕ ಸಂಬಂಧ ಕಾರಣ ಎಂಬುದನ್ನ ಇದೀಗ ಪೊಲೀಸರು ಕಂಡುಕೊಂಡಿದ್ದಾರೆ. ಮೃತ ಪರಶುರಾಮ್ ಅವರ ಪತ್ನಿ ಹಾಗೂ ಮಂಜುನಾಥ್ ಅಲಿಯಾಸ್ ಟೀಪುಡಿ ಮಂಜು ಎಂಬಾತನ ನಡುವೆ ವಿವಾಹೇತರ ಸಂಬಂಧವಿತ್ತು ಎನ್ನಲಾಗಿದೆ. ಪತ್ನಿಯ ಈ ನಡವಳಿಕೆ ಪತಿ ಪರಶುರಾಮ್ ಅವರಿಗೆ ತಿಳಿದಿತ್ತು. ಇದೇ ವಿಚಾರದಲ್ಲಿಒ ಪತಿ ಮತ್ತು ಪತ್ನಿಯ ನಡುವೆ ಆಗಾಗ ವಾಗ್ವಾದ ಹಾಗೂ ಗಲಾಟೆ ನಡೆಯುತ್ತಿತ್ತು. ಇನ್ನೂ ಸಂಸಾರದಲ್ಲಿ ನೆಮ್ಮದಿ ಹಾಳಾಗಿ, ಪ್ರತಿದಿನವೂ ಕೌಟುಂಬಿಕ ಸಂಘರ್ಷಕ್ಕೆ ಈ ವಿಷಯವೇ ಮೂಲ ಕಾರಣವಾಗಿ ಪರಿಣಮಿಸಿತ್ತು ಎನ್ನಕಲಾಗಿದೆ.

ಮೇ 15 ರಂದು ಏನಾಯ್ತು /ಸಾಗರ ಪೇಟೆಯಲ್ಲಿ ನಡೆದಿದ್ದೇನು?

ಮೇ 15ರಂದು ಸಹ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪರಶುರಾಮ್ ಅವರ ಮನೆಯಲ್ಲಿ ಪತಿ-ಪತ್ನಿಯ ನಡುವೆ ಜಗಳ ಪ್ರಾರಂಭವಾಗಿತ್ತು. ಈ ಕೌಟುಂಬಿಕ ಕಲಹದ ನಡುವೆ, ಮಂಜುನಾಥ್ ಪರಶುರಾಮ್ ಅವರ ಮನೆಗೆ ಎಂಟ್ರಿಕೊಟ್ಟಿದ್ಧಾನೆ. ಅಲ್ಲದೆ ಮನೆಗೆ ಬಂದ ಮಂಜುನಾಥ್ ನೇರವಾಗಿ ಪರಶುರಾಮ್ ಅವರೊಟ್ಟಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಈ ಜಗಳ ವಿಕೋಪಕ್ಕೆ ತಿರುಗಿದ್ದು, ಇಬ್ಬರೂ ಕೈಗೆ ಸಿಕ್ಕ ಮಾರಕಾಸ್ತ್ರ ಹಿಡಿದು ಜಗಳವಾಡಿದ್ದಾರೆ. ಒಂದು ಕಡೆ ಪರಶುರಾಮ್ ಕುಡುಗೋಲು ಹಿಡಿದುಕೊಂಡರೆ, ಮತ್ತೊಂದೆಡೆ ಮಂಜುನಾಥ್ ಚಾಕುವಿನೊಂದಿಗೆ ಪರಸ್ಪರ ಆಕ್ರಮಣಕ್ಕೆ ಮುಂದಾಗಿದ್ದಾರೆ.

ಪರಶುರಾಮ್ ಮೇಲೆ ಹಲ್ಲೆ

ಈ ಜಗಳ ಹೊಡೆದಾಟದ ನಡುವೆ ತನ್ನ ಕೈಲಿದ್ದ ಚಾಕುವಿನಿಂದ ಮಂಜುನಾಥ್, ಪರಶುರಾಮ್ಗೆ ಚುಚ್ಚಿದ್ದಾನೆ. ಇದರಿಂಧಾಗಿ ಮಾರಣಾಂತಿಕವಾಗಿ ಗಾಯಗೊಂಡ ಪರಶುರಾಮ್​ ಸ್ಥಳದಲ್ಲಿಯೇ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಅವರನ್ನು ಸ್ವತಃ ಹಲ್ಲೆಕೋರ ಮಂಜುನಾಥ್ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವ ನಾಟಕವಾಡಿದ್ದ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ವೈದ್ಯರ ಸೂಚನೆಯ ಮೇರೆಗೆ ಪರಶುರಾಮ್ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಅತಿಯಾದ ರಕ್ತಸ್ರಾವ ಹಾಗೂ ಆಳವಾದ ಗಾಯದ ಪರಿಣಾಮ, ಚಿಕಿತ್ಸೆ ಫಲಕಾರಿಯಾಗದೆ ಅಂದು ರಾತ್ರಿ 12 ಗಂಟೆಯ ಸುಮಾರಿಗೆ ಪರಶುರಾಮ್ ಕೊನೆಯುಸಿರೆಳೆದಿದ್ದರು,.

ಸತ್ಯ ಮುಚ್ಚಿಡುವ ಪ್ರಯತ್ನ

ಘಟನೆ ನಡೆದ ದಿನದಿಂದಲೂ ಪರಶುರಾಮ್ ಅವರ ಪತ್ನಿ ಸತ್ಯವನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ದಳು. ಕಣ್ಣೆದುರೇ ಪತಿಗೆ ಚಾಕುವಿನಿಂದ ಇರಿದಿದ್ದರೂ, ವಿಷಯವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟು, ಇದೊಂದು ಆತ್ಮಹತ್ಯೆ ಎಂಬಂತೆ ಬಿಂಬಿಸುವಲ್ಲಿ ಆಕೆ ಶಾಮೀಲಾಗಿದ್ದಳು ಎಂಬುದು ಪೊಲೀಸರ ಆರೋಪ. ಪರಶುರಾಮ್ ಅವರಿಗೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ ಆರೋಪಿ ಮಂಜುನಾಥ್ ಯಾನೆ ಟೀಪುಡಿ ಮಂಜು ಹಾಗೂ ಕೊಲೆ ವಿಷಯ ಸಂಪೂರ್ಣವಾಗಿ ಗೊತ್ತಿದ್ದರೂ ಮಾಹಿತಿಯನ್ನು ಮುಚ್ಚಿಟ್ಟಿದ್ದಲ್ಲದೆ, ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಪತ್ನಿ ವಿರುದ್ಧ ಇದೀಗ ಸಾಗರ ಪೇಟೆ ಠಾಣೆಯ ಪಿಎಸ್‍ಐ ಶಾಂತರಾಜು ಅವರು ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಾಥಮಿಕ ಹಂತದಲ್ಲಿ ಲಭ್ಯವಾದ ತಪ್ಪು ಮಾಹಿತಿಗಳಿಂದಾಗಿ ಪ್ರಕರಣದ ದಿಕ್ಕು ತಪ್ಪಿತ್ತು, ಆದರೆ ಸ್ಥಳೀಯರ ಮಾಹಿತಿಯ ಆಧಾರದ ಮೇಲೆ ಮರುತನಿಖೆ ನಡೆಸಿದಾಗ ನೈಜ ಸಂಗತಿಗಳು ಅನಾವರಣಗೊಂಡಿವೆ

ಪೊಲೀಸ್ ಮೂಲ

ಸಾಗರ ಪೇಟೆಯಲ್ಲಿ ನಡೆದಿದ್ದೇನು? ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​, ಜೆಪಿ ನಗರದಲ್ಲಿ ನಡೆದಿದ್ದು ಕೊಲೆ! ಪತ್ನಿ, ಪ್ರಿಯಕರನ ವಿರುದ್ಧ ಕೇಸ್!
ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​, ಜೆಪಿ ನಗರದಲ್ಲಿ ನಡೆದಿದ್ದು ಕೊಲೆ!

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw