ಸುದ್ದಿಯ ಸ್ಥಳ: Sagara, Shivamogga, Karnataka
ಮಲೆನಾಡು ಟುಡೆ ಸುದ್ದಿ / ಸಾಗರ / ಎಸಿ ಕೋರ್ಟಲ್ಲಿ ನಿವೇಶನದ ದಾವೆಗೆ ಸಂಬಂಧಿಸಿದಂತೆ ಹೊರಬಿದ್ದ ಆದೇಶದ ಪ್ರಮಾಣೀಕೃತ ಪ್ರತಿ ನೀಡಲು ಲಂಚ ಕೇಳಿದ್ದ ಅಧಿಕಾರಿಯೊಬ್ಬರನ್ನು ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿದ್ದಾರೆ. ಅನಿತಾ ಎಂಬವರಿಂದ ₹5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇರೆಗೆ ಲೋಕಾಯುಕ್ತ ಪೊಲೀಸರು ನಿನ್ನೆದಿನ ಗುರುವಾರ ಈ ಕಾರ್ಯಾಚರಣೆ ನಡೆಸಿದರು.
ಸಾಗರ ಉಪವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಗುರುರಾಯಚಾರ್ಯ, ದೂರುದಾರರಿಂದ ₹2,100 ಮುಂಗಡವವನ್ನ ಫೋನ್ ಪೇ ಮೂಲಕ ಪಡೆಯುತ್ತಿರುವಾಗಲೇ ಅವರನ್ನ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಲೋಕಾಯುಕ್ತ ಪ್ರಕರಣದ ವಿವರ
ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಿಳಗಲ್ಲೂರು ಗ್ರಾಮದ ನಿವಾಸಿಯೊಬ್ಬರು ಕಾರ್ಗಲ್‌ನಲ್ಲಿರುವ ನಿವೇಶನವೊಂದರ ವಿಚಾರವಾಗಿ ಉಪವಿಭಾಗಾಧಿಕಾರಿ ಕಚೇರಿಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಿಚಾರಣೆ ಪೂರ್ಣಗೊಂಡು ಆದೇಶ ಹೊರಬಂದ ನಂತರ ಅದರ ಪ್ರಮಾಣೀಕೃತ ಪ್ರತಿಗಾಗಿ ಅವರು ಕಚೇರಿಗೆ ತೆರಳಿದ್ದರು. ಆ ಪ್ರತಿ ನೀಡಲು ಗುರುರಾಯಚಾರ್ಯ ಅವರು ಲಂಚ ಕೇಳಿದ್ದಾರೆ ಎಂಬುದು ಅನಿತಾ ನೀಡಿದ ದೂರಿನ ಆರೋಪ.
ಲಂಚದ ಬೇಡಿಕೆಯಲ್ಲಿ ಕಚೇರಿಯ ಇತರ ಸಿಬ್ಬಂದಿಯ ಪಾತ್ರವಿದೆಯೇ ಎಂಬುದನ್ನೂ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಅಧಿಕಾರಿಗಳಾದ ರುದ್ರೇಶ್, ವೀರಬಸಪ್ಪ ಹಾಗೂ ಸಿಬ್ಬಂದಿ ಸುರೇಂದ್ರ, ಮಂಜುನಾಥ್, ಟೀಕಪ್ಪ, ನಾಗರಾಜ್, ಆದರ್ಶ, ಅರುಣಾ, ಜಮೀವುಲ್ಲ, ಪ್ರದೀಪ್, ಚೇತನ್ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
