ಸುದ್ದಿಯ ಸ್ಥಳ: Sagara, Shivamogga, Karnataka
ಮಲೆನಾಡು ಟುಡೆ ಸುದ್ದಿ / ಆನಂದಪುರಂ / ಶಿವಮೊಗ್ಗ ಜಿಲ್ಲೆಯ ಆನಂದಪುರಂ ಸಮೀಪದ ಯಡೇಹಳ್ಳಿ ಗ್ರಾಮದಲ್ಲಿ ಮನೆಯೊಂದರಿಂದ ₹12 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕಳವು ಮಾಡಲಾಗಿದ್ದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ದಾವಣಗೆರೆಯ ರಾಜಣ್ಣ ಬಡಾವಣೆ ನಿವಾಸಿಗಳಾದ ಚಾಂದು ಪೀರ್ ಹಾಗೂ ಮಹಮದ್ ಯೂನಸ್ ಬಂಧಿತ ಆರೋಪಿಗಳು.ಯಡೇಹಳ್ಳಿ ಗ್ರಾಮದ ರಥ ಬೀದಿಯಲ್ಲಿರುವ ಪ್ರದೀಶ್ ಎಂಬುವವರ ಮನೆಯಲ್ಲಿ ಕಳವು ನಡೆದಿತ್ತು. ಮನೆಯ ಬೀರುವಿನಲ್ಲಿ ಇರಿಸಲಾಗಿದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿತ್ತು. ಕಳುವಾದ ಆಭರಣಗಳ ಒಟ್ಟು ಮೌಲ್ಯ ₹12 ಲಕ್ಷ ಎಂದು ತಿಳಿದುಬಂದಿದೆ.
ಪ್ರಕರಣದ ತನಿಖೆ ಕೈಗೊಂಡ ಆನಂದಪುರಂ ಪೊಲೀಸರು ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಕಳವು ಮಾಡಲಾಗಿದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತ ಚಾಂದು ಪೀರ್ ಹಾಗೂ ಮಹಮದ್ ಯೂನಸ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದ ಆರೋಪಿಗಳ ಬಂಧನ ಕಾರ್ಯಾಚರಣೆಯನ್ನು ಪಿಎ ಪ್ರವೀಣ್ ನೇತೃತ್ವದ ಪೊಲೀಸ್ ತಂಡ ನಡೆಸಿದೆ. ತಂಡದಲ್ಲಿ ಪೊಲೀಸ್ ಸಿಬ್ಬಂದಿಯಾದ ಪ್ರಶಾಂತ್ ಹಾಗೂ ಉಮೇಶ್ ಪಾಲ್ಗೊಂಡಿದ್ದರು.
