ನವೆಂಬರ್​ 19ರಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು 2 ಸಾವಿರ ರೈತರ ಪ್ರತಿಭಟನೆ! ಏನಿದು? ಕಾರಣ?

ಹಂಚಿಕೊಳ್ಳಿ
WhatsApp Facebook X Telegram
Crop Insurance Dispute Over 2,000 Farmers Plan Shivamogga Protest on November 19
Crop Insurance Dispute Over 2,000 Farmers Plan Shivamogga Protest on November 19

ಸುದ್ದಿಯ ಸ್ಥಳ: Sagara, Shivamogga, Karnataka

ಮಲೆನಾಡು ಟುಡೆ ಸುದ್ದಿ / ಸಾಗರ / ಇದೇ ನವೆಂಬರ್ 19 ರಂದು ಬೆಳಗ್ಗೆ 10 ಗಂಟೆಗೆ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶೋಧಾ ರೈತ ಉತ್ಪಾದಕ ಕಂಪನಿ ಮುಖ್ಯಸ್ಥ ಪುರುಷೋತ್ತಮ ಬೆಳಕ್ಕಿ ತಿಳಿಸಿದ್ದಾರೆ. ಸಾಗರದದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಧಾ ಬೆಳೆವಿಮೆ ಹೋರಾಟ ಸಮಿತಿ, ಮ್ಯಾಮ್ಕೋಸ್, ಆಪ್ಸ್‌ಕೋಸ್ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿವೆ. ಸುಮಾರು 2 ಸಾವಿರಕ್ಕೂ ಅಧಿಕ ಬೆಳೆವಿಮೆ ಪಾವತಿಸಿರುವ ರೈತರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ರೈತರಿಗೆ ವೈಜ್ಞಾನಿಕವಾಗಿ ಲೆಕ್ಕಾಚಾರ ಮಾಡಿದ ವಿಮಾ ಪರಿಹಾರ ದೊರೆಯುವವರೆಗೂ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ. ಬೆಳೆವಿಮೆ ಯೋಜನೆಯಡಿ ವಿಮಾ ಕಂತು ಪಾವತಿಸಿದ ರೈತರಿಗೆ ಬೆಳೆ ನಷ್ಟಕ್ಕೆ ಅನುಗುಣವಾಗಿ ಪರಿಹಾರ ನೀಡದೆ ವಂಚಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

2023-24 ಹಾಗೂ 2024-25ನೇ ಸಾಲಿನಲ್ಲಿ ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ಭಾಗದ ರೈತರಿಗೆ ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ಭಾರೀ ಅನ್ಯಾಯವಾಗಿದೆ. ವಿಮಾ ಕಂತು ಪಾವತಿಸಿದ್ದರೂ ರೈತರಿಗೆ ಅತ್ಯಂತ ಕಡಿಮೆ ಪ್ರಮಾಣದ ಪರಿಹಾರ ದೊರೆಯುತ್ತಿದೆ. ಬೆಳೆ ನಷ್ಟಕ್ಕೆ ಅನುಗುಣವಾಗಿ ವಿಮಾ ಪರಿಹಾರ ನೀಡದಿರುವುದು ಖಂಡನೀಯ ಎಂದು ಆರೋಪಿಸಿದರು.

ಬೆಳೆವಿಮೆ ಪರಿಹಾರದ ಮೊತ್ತ ಕಡಿಮೆಯಾಗಲು ಅವೈಜ್ಞಾನಿಕ ಮ್ಯಾಪಿಂಗ್ ಪ್ರಮುಖ ಕಾರಣವಾಗಿದೆ. ತುಮರಿ, ಚನ್ನಗೊಂಡ, ಎಸ್.ಎಸ್. ಭೋಗ್, ನಿಟ್ಟೂರು, ಹೊಸೂರು, ಅರಮನೆಕೊಪ್ಪ, ನಗರ, ಹೊಸನಗರ ಹಾಗೂ ತೀರ್ಥಹಳ್ಳಿ ಭಾಗಗಳಲ್ಲಿ ವಿಪರೀತ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಆದರೂ ರೈತರಿಗೆ ಸಮರ್ಪಕ ಪರಿಹಾರ ದೊರೆಯುತ್ತಿಲ್ಲ ಎಂದು ದೂರಿದರು.

ಮಳೆಮಾಪನ ಯಂತ್ರಗಳು ಸರಿಯಾಗಿಲ್ಲ ಎಂಬ ಕಾರಣ ನೀಡಿ ವಿಮಾ ಕಂತು ಪಾವತಿಸಿರುವ ರೈತರಿಗೆ ನ್ಯಾಯಯುತ ಪರಿಹಾರ ನೀಡುತ್ತಿಲ್ಲ. ರೈತರು ನಿಯಮಾನುಸಾರ ವಿಮಾ ಕಂತು ಪಾವತಿಸಿದ್ದರೂ ನಷ್ಟಕ್ಕೆ ತಕ್ಕ ಪರಿಹಾರ ಸಿಗದಿರುವುದರ ಹಿಂದೆ ದೊಡ್ಡ ಸಂಚು ನಡೆಯುತ್ತಿದೆ. ರೈತರ ಹಣವನ್ನು ವಂಚಿಸುವ ಈ ವ್ಯವಸ್ಥೆಯ ಹಿಂದೆ ಯಾರಿದ್ದಾರೆ ಎಂಬುದು ಬಹಿರಂಗವಾಗಬೇಕು ಎಂದು ಆಗ್ರಹಿಸಿದರು.

ರೈತರನ್ನು ಬೆಳೆ ನಷ್ಟದಿಂದ ರಕ್ಷಿಸಬೇಕಾದ ವಿಮಾ ಕಂಪನಿಯಿಂದಲೇ ಅನ್ಯಾಯವಾಗುತ್ತಿದೆ. ಬೆಳೆವಿಮೆ ಪರಿಹಾರವನ್ನು ವೈಜ್ಞಾನಿಕವಾಗಿ ನಿರ್ಧರಿಸಿ ವಿತರಿಸಬೇಕು. ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಪುರುಷೋತ್ತಮ ಬೆಳಕ್ಕಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಪ್ಸ್‌ಕೋಸ್ ಅಧ್ಯಕ್ಷ ಬಿ.ಎ. ಇಂದುಧರ ಬೇಸೂರು, ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ನಡೆಯುತ್ತಿರುವ ಅನ್ಯಾಯದ ಕುರಿತು ಈಗಾಗಲೇ ಸಂಸದರು, ಶಾಸಕರು ಹಾಗೂ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.ರೈತರು ಕಳೆದುಕೊಂಡ ಬೆಳೆಗಳಿಗೆ ವಿಮಾ ಕಂತು ಪಾವತಿಸಿದ್ದರೂ ನಷ್ಟಕ್ಕೆ ಅನುಗುಣವಾಗಿ ಪರಿಹಾರ ನೀಡುತ್ತಿಲ್ಲ. ಮಳೆಮಾಪನ ವ್ಯವಸ್ಥೆಯಲ್ಲಿನ ದೋಷಗಳನ್ನು ಸರಿಪಡಿಸುವ ಉದ್ದೇಶದಿಂದ ಒಟ್ಟು 32 ಮಳೆಮಾಪನ ಕೇಂದ್ರಗಳನ್ನು ದುರಸ್ತಿ ಮಾಡಲಾಗಿದೆ. ಆದರೂ ರೈತರಿಗೆ ಸರಿಯಾದ ಪ್ರಮಾಣದಲ್ಲಿ ಬೆಳೆವಿಮೆ ಪರಿಹಾರ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಮಸ್ಯೆಯನ್ನು ಈಗಾಗಲೇ ಶಾಸಕರ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರನ್ನು ಭೇಟಿಯಾಗಲು ಅವಕಾಶ ಕಲ್ಪಿಸುವ ಭರವಸೆಯನ್ನು ಶಾಸಕರು ನೀಡಿದ್ದಾರೆ. ರೈತರಿಗೆ ನ್ಯಾಯಯುತ ಪರಿಹಾರ ದೊರಕಿಸಿಕೊಡುವ ಉದ್ದೇಶದಿಂದ ನವೆಂಬರ್ 19ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಎಲ್ಲ ರೈತರು ಹಾಗೂ ಸಂಘಟನೆಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಸುಧೀಂದ್ರ ಎಸ್.ಎಸ್. ಭೋಗ್, ದೇವರಾಜ ಕಪ್ಪದೂರು ಹಾಗೂ ಶೇಖರಪ್ಪ ಉಪಸ್ಥಿತರಿದ್ದರು.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor