ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಕಳೆದ 26 ವರ್ಷಗಳಿಂದ ಶಿವಮೊಗ್ಗದಲ್ಲಿ ನಮ್ ಟೀಮ್ ವತಿಯಿಂದ ನೀನಾಸಂ ತಿರುಗಾಟದ ನಾಟಕಗಳನ್ನು ಆಯೋಜಿಸಲಾಗುತ್ತಿದ್ದು, ಈ ಬಾರಿಯೂ ಅಕ್ಟೋಬರ್ 8 ಮತ್ತು 9ರಂದು ನಗರದ ಕುವೆಂಪು ರಂಗಮಂದಿರದಲ್ಲಿ ನೀನಾಸಂ ನಾಟಕೋತ್ಸವ ನಡೆಯಲಿದೆ ಎಂದು ನಮ್ ಟೀಮ್ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ತಿಳಿಸಿದರು.
ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ದಿನ ಸಂಜೆ 7ಕ್ಕೆ ನಾಟಕ ಪ್ರದರ್ಶನಗಳು ಆರಂಭವಾಗಲಿವೆ. ಅಕ್ಟೋಬರ್ 8ರಂದು ಶಂಕರ ಗೌಡ ರಚನೆಯ ‘ಪಾದುಕಾ ಕಿರೀಟಿ’ ನಾಟಕ ಪ್ರದರ್ಶನಗೊಳ್ಳಲಿದ್ದು, ಮಂಜು ಕೊಡಗು ನಿರ್ದೇಶಿಸಿದ್ದಾರೆ.
ನೀನಾಸಂ ನಾಟಕೋತ್ಸವದ ವಿವರ
ಅಕ್ಟೋಬರ್ 9ರಂದು ಮಹೇಶ್ ಎಲ್ಕುಂಚ್ಚಾರ್ ರಚನೆಯ ‘ಕೊಳ’ ನಾಟಕ ಪ್ರದರ್ಶನಗೊಳ್ಳಲಿದೆ. ನಂದಿನಿ ಕೆ.ಆರ್. ಹಾಗೂ ಪ್ರಶಾಂತ್ ಹಿರೇಮಠ ಕನ್ನಡಕ್ಕೆ ಅನುವಾದಿಸಿರುವ ಈ ನಾಟಕವನ್ನು ಮಂಜು ಕಾಸರಗೋಡು ನಿರ್ದೇಶಿಸಿದ್ದಾರೆ ಎಂದು ತಿಳಿಸಿದರು.
ರಾಮನ ಪಟ್ಟಾಭಿಷೇಕದ ಸಿದ್ಧತೆಯ ನಡುವೆ ಕೈಕೆಯ ಎರಡು ವರಗಳ ಬೇಡಿಕೆ, ರಾಮನ ವನವಾಸ, ದಶರಥನ ಮರಣ ಹಾಗೂ ಭರತನು ರಾಮನನ್ನು ಅಯೋಧ್ಯೆಗೆ ಮರಳಿ ಕರೆತರಲು ನಡೆಸುವ ಪ್ರಯತ್ನಗಳು ‘ಪಾದುಕಾ ಕಿರೀಟಿ’ ನಾಟಕದ ಕಥಾವಸ್ತುವಾಗಿದೆ.
ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಕೃತಿಯ ಪ್ರಭಾವದೊಂದಿಗೆ ಭಾಸನ ‘ಪ್ರತಿಮಾ’ ನಾಟಕದ ಕೆಲವು ಸಂಗತಿಗಳ ಹೋಲಿಕೆಯೂ ನಾಟಕದಲ್ಲಿದೆ. ಪಾತ್ರಗಳ ಆತ್ಮನಿರೂಪಣೆಯ ಮೂಲಕ ಕರ್ತವ್ಯ, ವಿಧಿ ಹಾಗೂ ವೈಯಕ್ತಿಕ ಆಶಯಗಳ ನಡುವಿನ ಸಂಘರ್ಷವನ್ನು ನಾಟಕ ಕಟ್ಟಿಕೊಡುತ್ತದೆ ಎಂದು ಹೇಳಿದರು.
‘ಕೊಳ’ ನಾಟಕದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ, ಜಾತಿ ವ್ಯವಸ್ಥೆ, ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ, ಜಮೀನುದಾರಿ ವ್ಯವಸ್ಥೆಯ ಕುಸಿತ, ಹೊಸ ವಾಣಿಜ್ಯ ಯುಗದ ಒತ್ತಡ ಹಾಗೂ ಮಹಿಳೆಯರ ಸ್ಥಾನಮಾನ ಸೇರಿದಂತೆ ಹಲವು ವಿಚಾರಗಳು ಪ್ರತಿಬಿಂಬಿತವಾಗುತ್ತವೆ.
ಕುಟುಂಬ ಸಂಬಂಧಗಳ ಸಂಕೀರ್ಣತೆ, ತಲೆಮಾರುಗಳ ಸಂಘರ್ಷ ಹಾಗೂ ಸಂಪ್ರದಾಯ ಮತ್ತು ಆಧುನಿಕ ಮನೋಭಾವದ ನಡುವಿನ ತೊಳಲಾಟವನ್ನು ನಾಟಕ ತೆರೆದಿಡುತ್ತದೆ ಎಂದು ತಿಳಿಸಿದರು.
ಒಂದು ನಾಟಕ ವೀಕ್ಷಣೆಗೆ ₹75 ಹಾಗೂ ಎರಡೂ ನಾಟಕಗಳ ವೀಕ್ಷಣೆಗೆ ₹100 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಯಾವುದೇ ವೇದಿಕೆ ಕಾರ್ಯಕ್ರಮ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ 9844518866 ಸಂಪರ್ಕಿಸಬಹುದು ಎಂದು ಹೊನ್ನಾಳಿ ಚಂದ್ರಶೇಖರ್ ತಿಳಿಸಿದರು.
