ಸುದ್ದಿಯ ಸ್ಥಳ: Sagara, Shivamogga, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಸಚಿವ ಸಂಪುಟ ಪುನರ್ರಚನೆ ಸಂದರ್ಭದಲ್ಲಿ ಸಚಿವ ಸ್ಥಾನ ಸಿಗುತ್ತದೆ ಎಂಬ ಭರವಸೆಯಲ್ಲಿದ್ದು ನಿರಾಸೆ ಹೊಂದಿದ್ದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸರ್ಕಾರದಲ್ಲಿ ಉನ್ನತ ಸ್ಥಾನ ದೊರೆತಿದೆ. ರಾಜ್ಯದ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಹಾಗೂ ಪ್ರಮುಖ ರಾಜಕೀಯ ಹುದ್ದೆಗಳಿಗೆ ಶಾಸಕರು ಮತ್ತು ಮುಖಂಡರನ್ನು ಶಿಪಾರಸ್ಸು ಮಾಡಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಿಎಂ ಡಿಕೆ ಶಿವಕುಮಾರ್ ರವರಿಗೆ ಪಟ್ಟಿ ಹಾಗೂ ಪತ್ರ ರವಾನೆ ಮಾಡಿದೆ.
ಈ ಪ್ರಕಾರ, ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕ (ಗವರ್ನಮೆಂಟ್ ಚೀಫ್ ವಿಪ್) ಹುದ್ದೆಯನ್ನು ನೀಡಲಾಗಿದೆ.ಇತ್ತ ಎಂಎಲ್ಸಿ ಮಂಜುನಾಥ್ ಭಂಡಾರಿ ಅವರನ್ನು ವಿಧಾನ ಪರಿಷತ್ ಮುಖ್ಯ ಸಚೇತಕರಾಗಿ ಆಯ್ಕೆ ಮಾಡಲಾಗಿದೆ.
ಜಿಲ್ಲೆಯ ಇಬ್ಬರು ಪ್ರಭಾವಿಗಳಿಗೆ ಉನ್ನತ ಹುದ್ದೆ; ಇವರ ಕಾರ್ಯ ವಿಧಾನಗಳು ಹೇಗಿರುತ್ತವೆ?
ಶಿವಮೊಗ್ಗದ ಇಬ್ಬರು ಪ್ರಭಾವಿ ನಾಯಕರಿಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್ಗಳಲ್ಲಿ ಕಾರ್ಯನಿರ್ವಹಿಸುವ ಉತ್ತಮ ಹುದ್ದೆಯನ್ನೇ ನೀಡಲಾಗಿದೆ. ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕರಾಗಿ ಆಯ್ಕೆಯಾದ ಬೇಳೂರು ಗೋಪಾಲಕೃಷ್ಣ ಅವರು ವಿಧಾನಸಭೆಯ ಕಲಾಪಗಳಲ್ಲಿ ಆಡಳಿತ ಪಕ್ಷದ ಶಾಸಕರ ಹಾಜರಿ ಮತ್ತು ಶಿಸ್ತು ಕಾಪಾಡುವುದು, ಮಸೂದೆ ಹಾಗೂ ಮಹತ್ವದ ಮತದಾನದ ವೇಳೆ ವಿಪ್ ಜಾರಿಗೊಳಿಸಿ ಪಾಲನೆಯ ಮೇಲೆ ನಿಗಾ ಇಡುವುದು, ಪ್ರತಿಪಕ್ಷಗಳ ತಂತ್ರಗಳಿಗೆ ಸಮರ್ಥವಾಗಿ ತಿರುಗೇಟು ನೀಡಲು ಹಾಗೂ ಸರ್ಕಾರದ ಯೋಜನೆಗಳನ್ನು ಮಂಡಿಸಲು ಶಾಸಕರಿಗೆ ಮಾರ್ಗದರ್ಶನ ನೀಡುವುದು ಮತ್ತು ಸಭಾಧ್ಯಕ್ಷರು, ಸರ್ಕಾರ ಹಾಗೂ ಶಾಸಕರ ನಡುವೆ ಸಮನ್ವಯ ಸಾಧಿಸುವ ಕೆಲಸ ಮಾಡಬೇಕಿದೆ.
ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾಗಿರುವ ಮಂಜುನಾಥ್ ಭಂಡಾರಿ ಅವರು ವಿಧಾನ ಪರಿಷತ್ತಿನ ಕಲಾಪಗಳಲ್ಲಿ ಪಕ್ಷದ ಸದಸ್ಯರು ಸಕ್ರಿಯವಾಗಿ ಹಾಜರಿರುವಂತೆ ನೋಡಿಕೊಳ್ಳುವುದು, ಮೇಲ್ಮನೆಯಲ್ಲಿ ಮಸೂದೆ ಅಥವಾ ವಿಷಯಗಳ ಮತದಾನದ ಸಂದರ್ಭದಲ್ಲಿ ಸದಸ್ಯರಿಗೆ ‘ವಿಪ್’ ನೀಡುವುದು, ಸರ್ಕಾರದ ನಿಲುವುಗಳನ್ನು ಸಮರ್ಥಿಸಿಕೊಳ್ಳಲು ಸದಸ್ಯರೊಂದಿಗೆ ಸಮನ್ವಯ ಸಾಧಿಸುವುದು ಮತ್ತು ಸಭಾಪತಿಗಳು, ಸರ್ಕಾರ ಹಾಗೂ ಪರಿಷತ್ ಸದಸ್ಯರ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುವ ಕೆಲಸ ನಿರ್ವಹಿಸಬೇಕಿದೆ.
ಇನ್ನೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ತನ್ವೀರ್ ಸೇಠ್ ಅವರನ್ನು ನೇಮಕ ಮಾಡಲಾಗಿದೆ. ಇನ್ನುಳಿದಂತೆ ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಲಾಗಿದ್ದು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಬಿ. ಶಿವಣ್ಣ, ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತದ ಅಧ್ಯಕ್ಷರಾಗಿ ಕೆ. ಷಡಕ್ಷರಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಧ್ಯಕ್ಷರಾಗಿ ಪಿ.ಎಂ. ಅಶೋಕ್ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಅಧ್ಯಕ್ಷರಾಗಿ ಎ.ಆರ್. ಕೃಷ್ಣಮೂರ್ತಿ ಅವರನ್ನು ನೇಮಿಸಲಾಗಿದೆ.
ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಹಂಪನಗೌಡ ಬಾದರ್ಲಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಅಧ್ಯಕ್ಷರಾಗಿ ಡಿ.ಜಿ. ಶಾಂತನಗೌಡ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಜಿ.ಎಚ್. ಶ್ರೀನಿವಾಸ್, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮಹಾಂತೇಶ್ ಕೌಜಲಗಿ, ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್) ಅಧ್ಯಕ್ಷರಾಗಿ ಎಸ್.ಎನ್. ಸುಬ್ಬಾರೆಡ್ಡಿ ಹಾಗೂ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಎನ್.ಎಚ್. ಕೋನರಡ್ಡಿ ನೇಮಕಗೊಂಡಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಬಸನಗೌಡ ದದ್ದಲ್, ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಲ್ಲಮಪ್ರಭು ಪಾಟೀಲ್, ಕರ್ನಾಟಕ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಶ್ಯಾಮ್ ನಾಟೇಕರ್, ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತದ ಅಧ್ಯಕ್ಷರಾಗಿ ಎಚ್.ಸಿ. ಲಲಿತ್ ರಾಘವ್ ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸುಭಾಷ್ ರಾಥೋಡ್ ಅವರನ್ನು ಆಯ್ಕೆ ಮಾಡಲಾಗಿದೆ.
