MLA Beluru Gopalakrishna / ಮಲೆನಾಡು ಟುಡೆ ಸುದ್ದಿ / ಸಾಗರ /ಸಚಿವ ಸಂಪುಟದಲ್ಲಿ ತಮಗೆ ಸಚಿವ ಸ್ಥಾನ ಒಲಿಯದೇ ಇರುವುದರ ಬಗ್ಗೆ ಯಾವುದೇ ಬೇಸರವಿಲ್ಲ. ಆದರೆ ನೋವಿದೆ ಅಂತಾ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. ಈ ಸಂಬಂಧ ಸಾಗರದಲ್ಲಿ ಮಾತನಾಡಿರುವ ಅವರು, ಸಿಎಂ ಹೇಳಿದ ಕಾರಣಕ್ಕೆ, ಅವರಿಗೆ ಬೆಲಕೊಟ್ಟು ನೋವನ್ನು ನುಂಗಿಕೊಂಡಿದ್ದೇನೆ ಅಂತಾ ತಿಳಿಸಿದ್ದಾರೆ.
ಅಲ್ದೆ, ಮಧು ಬಂಗಾರಪ್ಪ ಸಚಿವರಾಗಿರುವುದಕ್ಕೆ ಕಿಂಚಿತ್ತೂ ಬೇಜಾರಿಲ್ಲ, ಅವರು ತಮ್ಮ ರಾಜಕೀಯ ಹಕ್ಕನ್ನು ಕೇಳಿದ್ದಾರೆ, ನಾನು ನನ್ನ ಹಕ್ಕನ್ನು ಪ್ರತಿಪಾದಿಸಿದ್ದೆ ಅಷ್ಟೆ ಅಂತಾ ಬೇಳೂರು ಗೋಪಾಕೃಷ್ಣ ಸ್ಪಷ್ಟತೆಯನ್ನ ಸಹ ನೀಡಿದ್ರು.
ಇದೇ ವೇಳೇ ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿ ಎರಡು ತಿಂಗಳು ಕಾಲ ಕ್ಷೇತ್ರದಲ್ಲಿ ಇರಲಿಲ್ಲ ಎಂದು ಬೊಬ್ಬೆ ಹೊಡೆಯುತ್ತಿರುವ ಹರತಾಳು ಹಾಲಪ್ಪನವರು, ತಾವು ಸಚಿವರಾಗಿದ್ದಾಗ ಆರು ತಿಂಗಳ ಕಾಲ ಜೈಲಿನಲ್ಲಿದ್ದ ಇತಿಹಾಸವನ್ನು ಬಹುಶಃ ಮರೆತಿರಬೇಕು ಬೇಳೂರು ಅವರು ಬಿಜೆಪಿ ಸೇರ್ಪಡೆಯಾಗಲು ಸಂಘ ಪರಿವಾರದ ಪ್ರಮುಖರೊಬ್ಬರಿಗೆ ಕರೆ ಮಾಡಿದ್ದರು ಅಂತಾ ಹೇಳಿದ್ದಾರೆ. ಅದು ಸತ್ಯಕ್ಕೆ ದೂರ, ದಾಖಲೆಗಳಿದ್ದರೆ ಕೊಡಲಿ, ನನಗೆ ಬಿಜೆಪಿಯಲ್ಲಿ ಮತ್ತು ಸಂಘ ಪರಿವಾರದಲ್ಲಿ ಬಹಳಷ್ಟು ಆತ್ಮೀಯರಿದ್ದಾರೆ. ನನ್ನ ಏಳಿಗೆಯನ್ನು ಬಯಸುವ ಹಿತೈಷಿಗಳು ಅಲ್ಲಿದ್ದಾರೆ. ಅವರು ಸಹ ನನಗೆ ಸಚಿವ ಸ್ಥಾನ ಸಿಗಲಿ ಎಂದು ಹಾರೈಸಿದ್ದರು. ಹಾಗೆ ಸಚಿವ ಸ್ಥಾನ ತಪ್ಪಿದಾಗ, ಬಹಳಷ್ಟು ಜನ ನನಗೆ ಫೋನ್ ಮಾಡಿ ಸಾಂತ್ವನ ಹೇಳಿದ್ದಾರೆ. ಇದನ್ನೆ ಹಿಡ್ಕೊಂಡು ಅಪಪ್ರಚಾರ ಮಾಡೊದು ಸರಿಯಲ್ಲ ಎಂದರು.
ಮೇಲಾಗಿ ಬಹುಶಃ ಹರತಾಳು ಹಾಲಪ್ಪನವರಿಗೆ ಈ ಹಿಂದೆ ಕಾಂಗ್ರೆಸ್ ಸೇರ್ಪಡೆಯಾಗಲು ಅವರು ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದ ಕನಸು ಈಗ ಮತ್ತೆ ಬಿದ್ದಿರಬೇಕು ಎಂದು ಲೇವಡಿ ಮಾಡಿದರು. ಸಚಿವ ಸ್ಥಾನ ಪಡೆಯಲು ಕೊನೆಯ ಗಳಿಗೆಯವರೆಗೂ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ. ಅಂತಿಮ ಪಟ್ಟಿಯವರೆಗೂ ನನ್ನ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಕೊನೆ ಗಳಿಗೆಯಲ್ಲಿ ಅದು ಹೇಗೆ ಕೈತಪ್ಪಿ ಹೋಯಿತು ಅಂತಾ ಗೊತ್ತಾಗ್ಲಿಲ್ಲ ಅಂತಾ ಅನುಮಾನ ಹೊರಹಾಕಿದ್ರು.
