ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ / ಶಿವಮೊಗ್ಗ / ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಲು ಮತ್ತು ಕೈ ಎತ್ತಲು ಹಿಂದೇಟು ಹಾಕಿದ ಸಭಿಕರಿಗೆ ಶಾಸಕ ಲಕ್ಷ್ಮಣ ಸವದಿ ರಾಮ್ ನಾಮ್ ಸತ್ಯ ಹೈ ಎಂಬ ಸ್ವಾರಸ್ಯಕರ ದೃಷ್ಟಾಂತದ ಮೂಲಕ ಚುರುಕು ಮುಟ್ಟಿಸಿದರು.
ಭಾಷಣದ ವೇಳೆ ಸವದಿ ಅವರು ಎಲ್ಲರೂ ಒಟ್ಟಾಗಿ ಭಾರತ್ ಮಾತಾ ಕಿ ಜೈ ಎಂದು ಹೇಳುವಂತೆ ಕರೆ ನೀಡಿದರು. ಆದರೆ ಕೆಲವರು ಮಾತ್ರ ಕೈ ಎತ್ತಿ ಘೋಷಣೆ ಕೂಗಿದರೆ, ಇನ್ನು ಕೆಲವರು ಸುಮ್ಮನೆ ಕುಳಿತಿದ್ದರು. ಇದನ್ನು ಗಮನಿಸಿದ ಸವದಿ, ಒಬ್ಬೊಬ್ಬರು ಅಂದ್ರು, ಒಬ್ಬೊಬ್ಬರು ಹಾಗೆಯೇ ಕುಳಿತರು. ಇವರಿಗೆ ಒಂದು ದೃಷ್ಟಾಂತ ಹೇಳಿದ ಮೇಲೆ ಹೇಗೆ ಕೈ ಎತ್ತುತ್ತಾರೆ ನೋಡಿ ಎಂದು ಹೇಳಿ ಕಥೆಯೊಂದನ್ನು ಆರಂಭಿಸಿದರು.
ಒಂದು ಊರಿನಲ್ಲಿ ಒಬ್ಬರು ತೀರಿಹೋಗಿದ್ದರು. ನಾಲ್ಕು ಮಂದಿ ಶವವನ್ನು ಹೊತ್ತಿದ್ದರು, ಮುಂದೆ ಒಬ್ಬ ಗಡಿಗೆ ಹಿಡಿದು ನಡೆಯುತ್ತಿದ್ದರೆ, ಹಿಂದೆ ಜನರು ಬೆನ್ನತ್ತಿದ್ದರು. ಮುಂದೆ ಇದ್ದವನು ರಾಮ ನಾಮ ಹೈ ಅಂದ ಕೂಡಲೇ ಹಿಂದಿನವರೆಲ್ಲರೂ ಸತ್ಯ ಹೈ ಎನ್ನುತ್ತಿದ್ದರು. ಅಂತ್ಯಸಂಸ್ಕಾರಕ್ಕೆ ಬಂದಿದ್ದ ಯಜಮಾನನೊಬ್ಬನ ಜೊತೆ ಅವನ ಸಣ್ಣ ಮಗುವೂ ಬಂದಿತ್ತು. ಇನ್ನೂ ಸಾಮಾಜಿಕ ಪ್ರಜ್ಞೆ ಮೂಡಿರದ ಆ ಮಗು ತನ್ನ ತಂದೆಗೆ, ‘ಅಪ್ಪಾ, ಮುಂದಿನವನು ರಾಮ ನಾಮ ಅಂದ ಕೂಡಲೇ ಹಿಂದಿನವರೆಲ್ಲರೂ ಸತ್ಯ ಅಂತಾರಲ್ಲ, ಮತ್ತೆ ಮೇಲೆ ಮಲಗಿಕೊಂಡಿರುವವನು ಯಾಕೆ ಅನ್ನಲ್ಲ? ಎಂದು ಕೇಳಿತು. ಆಗ ತಂದೆ, ‘ಮಗೂ, ಅದಕ್ಕೆ ಅನ್ನೋಕೆ ಆಗಲ್ಲ, ಅದು ಶಿವನ ಪಾದ ಸೇರೈತಿ’ ಎಂದು ಉತ್ತರಿಸಿದನು ಎಂದು ಸವದಿ ವಿವರಿಸಿದರು.
ಈ ಕಥೆ ಮುಗಿಸಿದ ಬಳಿಕ ಸಭಿಕರತ್ತ ನೋಡಿದ ಸವದಿ, ಇದು ನಿಮಗೆ ಅರ್ಥವಾಯಿತಾ? ನಾನೀಗ ಎರಡೂ ಕೈ ಎತ್ತಿ ಭಾರತ್ ಮಾತಾ ಕಿ ಅಂತೀನಿ. ನೀವು ಅದನ್ನು ಯಾವ ರೀತಿ ಅರ್ಥೈಸಿಕೊಳ್ಳುತ್ತೀರಿ ಎಂಬುದು ನಿಮಗೆ ಬಿಟ್ಟಿದ್ದು ಎಂದು ನಗುತ್ತಲೇ ಟಾಂಗ್ ನೀಡಿದರು. ಸವದಿ ಅವರ ಈ ಮಾತು ಕೇಳುತ್ತಿದ್ದಂತೆಯೇ ಇಡೀ ಸಭೆಯಲ್ಲಿದ್ದ ಜನರು ಒಕ್ಕೊರಲಿನಿಂದ ಕೈ ಎತ್ತಿ ಜೋರಾಗಿ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದರು.
