ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ : ಬಿಜೆಪಿಗೆ ಮರಳಿ ವಾಪಸ್ ಹೋಗುವ ಕುರಿತಾಗಿ ಪ್ರಮುಖ 50 ಜನರ ಬಳಿ ಚರ್ಚೆ ನಡೆಸಿದ್ದೆ. ಅವರೆಲ್ಲರೂ ಸಹ ಸರಿಯಾದ ವ್ಯಕ್ತಿಗಳು ಭರವಸೆ ನೀಡಿದರೆ ಮಾತ್ರ ಬಿಜೆಪಿಗೆ ಸೇರಿ ಎಲೆಕ್ಷನ್ಗೆ ನಿಲ್ಲಿ ಎಂದು ಹೇಳಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಜೀವನಕ್ಕೆ ಮಾರ್ಗದರ್ಶನ ನೀಡಿದ್ದು ಆರ್ಎಸ್ಎಸ್. ಆರ್ಎಸ್ಎಸ್ನ ಪ್ರಮುಖರು ಬಂದು ನನ್ನನ್ನು ಬಿಜೆಪಿಗೆ ಸೇರಿಕೊಳ್ಳುವಂತೆ ಹೇಳಿದ್ದರು. ಈ ಕುರಿತಾಗಿ ನಗರದ ಪದಾಧಿಕಾರಿಗಳು ಸೇರಿ 50 ಪ್ರಮುಖರೊಂದಿಗೆ ಮೂರು ಹಂತಗಳಲ್ಲಿ ಚರ್ಚೆ ಮಾಡಿದ್ದೇನೆ. ಆ ಮೂರೂ ಚರ್ಚೆಗಳಲ್ಲೂ ಅವರು ನನಗೆ ಹೇಳಿದ್ದು, ಈ ಹಿಂದೆ ನಿಮಗೆ ಟಿಕೆಟ್ ಏಕೆ ಕೊಟ್ಟಿಲ್ಲವೋ ಗೊತ್ತಿಲ್ಲ, ಆದರೆ ಈ ಬಾರಿ ಸರಿಯಾದ ವ್ಯಕ್ತಿಗಳು ಭರವಸೆ ನೀಡಿದರೆ ಮಾತ್ರ ಎಲೆಕ್ಷನ್ಗೆ ನಿಂತು ಗೆದ್ದು ಬನ್ನಿ. ಯಾರ್ಯಾರೋ ಹೇಳಿದರು ಎಂದು ಹೋಗಿ ಕಳೆದ ಬಾರಿ ಆದ ಹಾಗೆ ಆಗುವುದು ಬೇಡ ಎಂದಿದ್ದಾರೆ. ಅದರಂತೆ ಯಾರಾದರೂ ಭರವಸೆ ನೀಡಿದರೆ ಖಂಡಿತ ಎಲೆಕ್ಷನ್ಗೆ ನಿಲ್ಲುತ್ತೇನೆ. ಬಿಜೆಪಿಗೆ ಸೇರಿಸಿಕೊಳ್ಳದಿದ್ದರೂ ಮುಂದಿನ ಚುನಾವಣೆಯಲ್ಲಿ ನಿಂತು ಗೆದ್ದು, ನಾನೇ ಬಿಜೆಪಿಗೆ ಹೋಗುತ್ತೇನೆ” ಎಂದರು.
ಇದೇ ವೇಳೆ ಜನಸೇನಾ ಪಕ್ಷದ ಕಾರ್ಯಕರ್ತರು ಭೇಟಿ ಮಾಡಿದ ವಿಚಾರದ ಕುರಿತು ಮಾತನಾಡಿದ ಅವರು, ಹೆಚ್.ಎಂ. ಚಂದ್ರಶೇಖರಪ್ಪ ಅವರ ಕಾರ್ಯಕ್ರಮ ನಡೆದಾಗ ಅಲ್ಲಿಗೆ ನಮ್ಮ ಆತ್ಮೀಯರು ಬಂದಿದ್ದರು. ಅವರು ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ಸೇರಿಕೊಂಡು ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿ ಎಂದು ಕೇಳಿಕೊಂಡಿದ್ದರು. ಆದರೆ ನನ್ನ ರಾಜಕೀಯ ಆರಂಭವಾಗಿದ್ದೇ ಬಿಜೆಪಿಯಿಂದ, ನಾನು ಹೋದರೆ ಮತ್ತೆ ಬಿಜೆಪಿಗೆ ಮಾತ್ರ ಹೋಗುವುದು ಎಂದು ಅವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ ಎಂದು ತಿಳಿಸಿದರು.
