ಮಲೆನಾಡು ಟುಡೆ ಸುದ್ದಿ / ಸಾಗರ / ಸಾಗರದ ಶಾಹಿ ಗಾರ್ಮೆಂಟ್ಸ್ ಕಾರ್ಮಿಕರು ಎದುರಿಸುತ್ತಿರುವ ಪಿಎಫ್ ಮತ್ತು ಇಎಸ್ಐ ಪರಿಷ್ಕೃತ ನಿಯಮಗಳಿಗೆ ಸಂಬಂಧಿಸಿದ ಗೊಂದಲಗಳನ್ನು ಶೀಘ್ರ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಪಟ್ಟಣದ ಶಾಹಿ ಗಾರ್ಮೆಂಟ್ಸ್ಗೆ ನಿನ್ನೆದಿನ ಮಂಗಳವಾರ ಭೇಟಿ ನೀಡಿದ ಅವರು, ಅಲ್ಲಿನ ಕಾರ್ಮಿಕರು ಹಾಗೂ ನೌಕರರೊಂದಿಗೆ ನೇರವಾಗಿ ಸಂವಾದ ನಡೆಸಿದರು. ಪಿಎಫ್ ಮತ್ತು ಇಎಸ್ಐಗೆ ಸಂಬಂಧಿಸಿದಂತೆ ಕಾರ್ಮಿಕರು ಮುಂದಿಟ್ಟ ಸಮಸ್ಯೆಗಳನ್ನು ಆಲಿಸಿದ ಅವರು, ಕಾರ್ಮಿಕ ಇಲಾಖೆ ಹಾಗೂ ಸಂಬಂಧಿಸಿದ ಉನ್ನತಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಕುಂದುಕೊರತೆಗಳಿಗೆ ತಕ್ಷಣ ಸ್ಪಂದನೆ ಬಿ.ವೈ.ರಾಘವೇಂದ್ರ
ಕ್ಷೇತ್ರದ ಶ್ರಮಿಕರ ಹಿತರಕ್ಷಣೆಗೆ ಸದಾ ಬದ್ಧವಾಗಿದ್ದು, ಗಾರ್ಮೆಂಟ್ಸ್ ಕಾರ್ಮಿಕರ ಹಕ್ಕುಗಳು ಹಾಗೂ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸಲಾಗುವುದು ಎಂದು ಹೇಳಿದರು.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಮಿಕರ ಸಾಮಾಜಿಕ ಭದ್ರತೆ, ವೇತನ ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ಹಲವು ಸುಧಾರಣೆಗಳನ್ನು ಜಾರಿಗೊಳಿಸಿದೆ. ಈ ಸೌಲಭ್ಯಗಳು ಕ್ಷೇತ್ರಮಟ್ಟದಲ್ಲಿ ಪಾರದರ್ಶಕವಾಗಿ ಪ್ರತಿಯೊಬ್ಬ ಕಾರ್ಮಿಕನಿಗೂ ತಲುಪುವಂತೆ ನೋಡಿಕೊಳ್ಳುವುದು ಆದ್ಯತೆಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕ್ಕೆ, ಟಿ.ಡಿ.ಮೇಘರಾಜ್, ಕಾರ್ಮಿಕ ಇಲಾಖೆ ಪ್ರಾದೇಶಿಕ ಅಧಿಕಾರಿ ಜೆಸಿನಾ, ಇಲಾಖೆಯ ಇಎಸ್ಐ ಶಾಖಾ ವ್ಯವಸ್ಥಾಪಕ ಪ್ರಿಯಾಂಶು, ಸಹಾಯಕ ವ್ಯವಸ್ಥಾಪಕಿ ಆಶಾದೇವಿ, ಶಾಹಿ ಗಾರ್ಮೆಂಟ್ಸ್ ವಲಯ ವ್ಯವಸ್ಥಾಪಕ ದಿನೇಶ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕ ಉದಯ್, ವ್ಯವಸ್ಥಾಪಕ ನಿಖಿಲ್ ಮತ್ತಿತರರು ಉಪಸ್ಥಿತರಿದ್ದರು.
