ಖಾತೆಯಲ್ಲಿ ಹಣವಿದ್ದರೂ ಪಾಲಿಸಿ ರದ್ದು: ವಿಮಾ ಸಂಸ್ಥೆಗೆ ಜಿಲ್ಲಾ ಗ್ರಾಹಕ ಆಯೋಗದಿಂದ ದಂಡ

ಹಂಚಿಕೊಳ್ಳಿ
WhatsApp Facebook X Telegram
court image for court realated storis
court image for court realated storis

Consumer Court ಶಿವಮೊಗ್ಗ: ಖಾತೆಯಲ್ಲಿ ಹಣ ಲಭ್ಯವಿದ್ದರೂ ಆಟೋ ಡೆಬಿಟ್ ಮೂಲಕ ವಿಮಾ ಕಂತು ಸ್ವೀಕರಿಸದೆ ಮತ್ತು ನೋಟೀಸ್ ನೀಡದೆ ಪಾಲಿಸಿಯನ್ನು ರದ್ದುಗೊಳಿಸಿ ಸೇವಾ ನ್ಯೂನತೆ ಎಸಗಿದ್ದ ಕೆನರಾ ಬ್ಯಾಂಕ್ ಹಾಗೂ ಕೆನರಾ ಹೆಚ್‌ಎಸ್‌ಬಿಸಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಲೈಫ್ ಇನ್ಶೂರೆನ್ಸ್ ಕಂಪನಿಗೆ ಶಿವಮೊಗ್ಗ ಜಿಲ್ಲಾ ಗ್ರಾಹಕರ ಕುಂದುಕೊರತೆಗಳ ನಿವಾರಣಾ ಆಯೋಗವು ಪರಿಹಾರ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿ ವಿಶ್ವ ಆನೆ ದಿನಾಚರಣೆ ಸಂಭ್ರಮ: ಬಿಡಾರ ಓಪನಿಂಗ್​​ ಬಗ್ಗೆ ಅಧಿಕಾರಿಗಳು ಹೇಳಿದ್ದೇನು

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬಾರಂಗಿ ಗ್ರಾಮದ ನಿವಾಸಿ, ದಿವಂಗತ ನಟರಾಜನಾಯ್ಕ ಅವರ ಪತ್ನಿ ಸುಮಾ ಅವರು ತಮ್ಮ ವಕೀಲರ ಮುಖಾಂತರ ಕೆನರಾ ಬ್ಯಾಂಕ್‌ನ ಸೊರಬ ಶಾಖೆಯ ವ್ಯವಸ್ಥಾಪಕರು ಮತ್ತು ವಿಮಾ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ವಿರುದ್ಧ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ದೂರುದಾರರ ಪತಿ ನಟರಾಜನಾಯ್ಕ ಅವರು ಕೆನರಾ ಜೀವ ಭೀಮಾ ಸ್ಮಾರ್ಟ್ ಸುರಕ್ಷಾ ಪ್ಲಾನ್ ಅಡಿಯಲ್ಲಿ ವಿಮಾ ಪಾಲಿಸಿ ಹೊಂದಿದ್ದರು. ಯೋಜನೆಯ ನಿಯಮದಂತೆ ವಾರ್ಷಿಕ ಕಂತು ರೂ. 7,854.80 ಅನ್ನು ಆಟೋ ಡೆಬಿಟ್ ಮೂಲಕ ಬ್ಯಾಂಕ್ ಖಾತೆಯಿಂದ ಪಾವತಿಸಿಕೊಳ್ಳಬೇಕಾಗಿತ್ತು. ಆದರೆ, 21/01/2023 ರಂದು ಖಾತೆಯಲ್ಲಿ ಅಗತ್ಯ ಮೊತ್ತವಿಲ್ಲದ ಕಾರಣ ಕಂತು ಜಮೆಯಾಗಿರಲಿಲ್ಲ. ತದನಂತರ ಖಾತೆಗೆ ವೇತನದ ಹಣ ಜಮೆಯಾಗಿದ್ದರೂ ಬ್ಯಾಂಕಿನವರು ಕಂತಿನ ಹಣವನ್ನು ಡೆಬಿಟ್ ಮಾಡಿಕೊಳ್ಳಲು ವಿಫಲರಾಗಿದ್ದರು.

ಈ ಮಧ್ಯೆ, 24/05/2023 ರಂದು ವಿಮೆದಾರ ನಟರಾಜನಾಯ್ಕ ಅವರು ನಿಧನ ಹೊಂದಿದ್ದರು. ಬಳಿಕ ಅವರ ಪತ್ನಿ ವಿಮಾ ಹಣಕ್ಕಾಗಿ ಕೋರಿಕೆ ಸಲ್ಲಿಸಿದಾಗ, ಪಾಲಿಸಿಯು ರದ್ದಾಗಿದೆ ಎಂದು ತಿಳಿಸಲಾಗಿತ್ತು. ಯಾವುದೇ ಮುನ್ಸೂಚನೆ ಅಥವಾ ನೋಟೀಸ್ ನೀಡದೆ ಏಕಾಏಕಿ ಪಾಲಿಸಿ ರದ್ದುಗೊಳಿಸಿರುವುದು ಸೇವಾ ಲೋಪ ಎಂದು ಆರೋಪಿಸಿ ಸುಮಾ ಅವರು ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.

ದೂರು ಹಾಗೂ ಸಲ್ಲಿಕೆಯಾದ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಆಯೋಗವು, ಬ್ಯಾಂಕ್ ಹಾಗೂ ವಿಮಾ ಸಂಸ್ಥೆಯಿಂದ ಸೇವಾ ನ್ಯೂನತೆಯಾಗಿರುವುದು ಸಾಬೀತಾಗಿದೆ ಎಂದು ತೀರ್ಮಾನಿಸಿತು. ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಹಾಗೂ ಸದಸ್ಯರಾದ ಬಿ. ಡಿ. ಯೋಗಾನಂದ ಅವರನ್ನೊಳಗೊಂಡ ಪೀಠವು ಪಾಲಿಸಿಯ ಒಟ್ಟು ಮೊತ್ತ ರೂ. 20,00,000 (ಇಪ್ಪತ್ತು ಲಕ್ಷ ರೂ.) ಅನ್ನು ದಿನಾಂಕ 04/07/2023 ರಿಂದ ಅನ್ವಯವಾಗುವಂತೆ ಶೇ. 8 ರಷ್ಟು ವಾರ್ಷಿಕ ಬಡ್ಡಿಯೊಂದಿಗೆ 45 ದಿನಗಳ ಒಳಗಾಗಿ ಪಾವತಿಸಬೇಕು ಹಾಗೂ ತಪ್ಪಿದ್ದಲ್ಲಿ ಶೇ. 10 ರಷ್ಟು ಬಡ್ಡಿ ನೀಡಬೇಕಾಗುತ್ತದೆ ಎಂದು ಆದೇಶಿಸಿದೆ. ಜೊತೆಗೆ, ದೂರುದಾರರಿಗೆ ಉಂಟಾದ ಮಾನಸಿಕ ಹಿಂಸೆಗೆ ಪರಿಹಾರವಾಗಿ ರೂ. 50,000 ದಂಡ ಹಾಗೂ ದೂರಿನ ವೆಚ್ಚಕ್ಕಾಗಿ ರೂ. 10,000 ಪಾವತಿಸಲು ಬ್ಯಾಂಕ್ ಮತ್ತು ವಿಮಾ ಸಂಸ್ಥೆಗೆ ಖಡಕ್ ನಿರ್ದೇಶನ ನೀಡಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor