ಶಿವಮೊಗ್ಗ : ಸಂಸದ ರಾಘವೇಂದ್ರರವರು ಬಹಿರಂಗವಾಗಿ ಕ್ಷಮೆ ಕೇಳದಿದ್ದರೆ ಮನೆಗೆ ಮುತ್ತಿಗೆ ಹಾಕುವ ಎಚ್ಚರಿಕೆ, ಏನಿದು ಸುದ್ದಿ ?

ಹಂಚಿಕೊಳ್ಳಿ
WhatsApp Facebook X Telegram
ಮಧು ಬಂಗಾರಪ್ಪರವರ ಬಳಿ ಬಿವೈ ರಾಘವೇಂದ್ರ ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಆಗ್ರಹ
ಮಧು ಬಂಗಾರಪ್ಪರವರ ಬಳಿ ಬಿವೈ ರಾಘವೇಂದ್ರ ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಆಗ್ರಹ

ಮಲೆನಾಡುಟುಡೆ ಸುದ್ದಿ / ಶಿವಮೊಗ್ಗ:  ಸಂಸದ ಬಿ.ವೈ. ರಾಘವೇಂದ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ನಡುವಿನ ಏಕವಚನ ಪದಬಳಕೆಯ ವಿಚಾರ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ಶಿಕಾರಿಪುರದಲ್ಲಿ ನಡೆದ ಸಭೆಯೊಂದರಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಸಚಿವ ಮಧು ಬಂಗಾರಪ್ಪ ಅವರನ್ನು ಏಕವಚನದಲ್ಲಿ ಮಾತನಾಡಿಸಿದ್ದರು. ತದನಂತರ ತೀರ್ಥಹಳ್ಳಿಯಲ್ಲಿ ಸಿಎಂ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ಈ ಕುರಿತು ಪ್ರಸ್ತಾಪಿಸಿ, ಏಕವಚನದಲ್ಲಿ ಮಾತನಾಡುವುದರಿಂದ ಅಭಿವೃದ್ಧಿಯಾಗುವುದಿಲ್ಲ ಎಂದು ವ್ಯಂಗ್ಯವಾಡಿದ್ದರು. ಇದೀಗ ಈ ರಾಜಕೀಯ ಸಮರ ಸಂಸದರ ಮನೆಗೆ ಮುತ್ತಿಗೆ ಹಾಕುವ ಹಂತಕ್ಕೆ ತಲುಪಿದ್ದು, ಸಂಸದ ಬಿ.ವೈ. ರಾಘವೇಂದ್ರ ಅವರು ಬಹಿರಂಗವಾಗಿ ಕ್ಷಮೆ ಕೇಳದಿದ್ದರೆ ಅವರ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಕಾಂಗ್ರೆಸ್ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. 

ಈ ಕುರಿತಾಗಿ ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗರಾಜ್ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಏಕವಚನದಲ್ಲಿ ಸಾರ್ವಜನಿಕವಾಗಿ ತೇಜೋವಧೆ ಮಾಡಿರುವ ಸಂಸದ ಬಿ.ವೈ. ರಾಘವೇಂದ್ರ ಅವರು ತಕ್ಷಣ ಕ್ಷಮಾಪಣೆ ಕೇಳಬೇಕು. ಇಲ್ಲವಾದಲ್ಲಿ ಶಿಕಾರಿಪುರ ತಾಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಉಗ್ರ ಹೋರಾಟ ರೂಪಿಸಿ ಸಂಸದರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. 

ಮಧು ಬಂಗಾರಪ್ಪ ಅವರು ಕಸ್ತೂರಿರಂಗನ್ ವರದಿ ವಿರುದ್ಧದ ಪಾದಯಾತ್ರೆಗೆ ಬಂದ ಸಂದರ್ಭದಲ್ಲಿ, ತಾಲೂಕಿನ 12 ಗ್ರಾಮಗಳ ಸಂತ್ರಸ್ತರ ಪರವಾಗಿ ಸಾರ್ವಜನಿಕವಾಗಿ ಧ್ವನಿ ಎತ್ತಿದ್ದಾರೆ. ಇದರಿಂದ ಹತಾಶೆಗೊಂಡಿರುವ ಸಂಸದರು, ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಏಕವಚನದಲ್ಲಿ ತೇಜೋವಧೆ ಮಾಡಿದ್ದಾರೆ. ನಿಮ್ಮ ಈ ನಾಲಿಗೆಯೇ ನಿಮ್ಮ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಹೀಗಾಗಿ ತಕ್ಷಣವೇ ಅವರು ಮಧು ಬಂಗಾರಪ್ಪ ಅವರಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. 

ಸಂಸದರು ಎಲ್ಲಾ ಸಂದರ್ಭಗಳಲ್ಲೂ ನಿಮ್ಮ ರಾಘಣ್ಣ ಎಂದು ತಾವೇ ಹೇಳಿಕೊಳ್ಳುತ್ತಾರೆ. ಆದರೆ ಕೇಂದ್ರದ ಅರಣ್ಯ ಸಚಿವ ಭೂಪೇಂದ್ರ ಸಿಂಗ್ ಹಾಗೂ ಮಾಜಿ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿ ಮಾಡಿ ಕಸ್ತೂರಿರಂಗನ್ ವರದಿ ಜಾರಿ ಮಾಡದಂತೆ ಮನವಿ ಮಾಡಿದರೂ, ಇವರ ಮನವಿಯನ್ನು ತಿರಸ್ಕರಿಸಿ ಇವರದೇ ಕೇಂದ್ರ ಸರ್ಕಾರ ಕಸ್ತೂರಿರಂಗನ್ ವರದಿ ಜಾರಿಗೆ ಅಧಿಸೂಚನೆ ಹೊರಡಿಸಿದೆ. ಇದರಿಂದ ನಿಮ್ಮ ಮಾತಿಗೆ ಹಾಗೂ ಮನವಿಗೆ ಕೇಂದ್ರ ಸರ್ಕಾರದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬುದು ಸಾಬೀತಾಗಿದೆ ಎಂದು ನಾಗರಾಜ್ ಗೌಡ ಹೇಳಿದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor