ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ವಿಚಾರಕ್ಕೆ ಗಲಾಟೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲಿ ಕೆಲವು ಗಲಾಟೆಗಳು ಅವರವರ ನಡುವೆಯೇ ಮಾತುಕತೆಯ ಮೂಲಕ ಬಗೆಹರಿದರೆ, ಇನ್ನು ಕೆಲವು ಗಲಾಟೆಗಳು 112 ಪೊಲೀಸರ ಬಳಿ ಹೋಗುತ್ತವೆ. ಅಂತಹವುಗಳಲ್ಲಿ ಸಿಕ್ಕ 03 ಸುದ್ದಿಗಳನ್ನು ನಮ್ಮ ಚಟ್‌ಪಟ್ ಸುದ್ದಿಗಳ ಮೂಲಕ ನಿಮಗೆ ತಿಳಿಸುತ್ತಿದ್ದೇವೆ ನೋಡಿ.
ಸಂಬಂಧಿಕರ ಮನೆಗೆ ಹೋಗುತ್ತೇನೆ ಎಂದಿದ್ದಕ್ಕೆ ಮಗಳ ವಿರುದ್ಧ ದೂರು!
ಶಿವಮೊಗ್ಗ: ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಗಳೊಬ್ಬಳು ಸಂಬಂಧಿಕರ ಮನೆಗೆ ಹೋಗುತ್ತೇನೆ ಎಂದು ಗಲಾಟೆ ಮಾಡುತ್ತಿದ್ದಾಳೆ ಎಂಬ ವಿಚಾರವಾಗಿ ಪೋಷಕರು 112 ಪೊಲೀಸರಿಗೆ ಫೋನ್ ಮಾಡಿದ್ದಾರೆ. ವಿಚಾರ ತಿಳಿದ 112 ಸಿಬ್ಬಂದಿ ಸ್ಥಳಕ್ಕೆ ತೆರಳಿ ಪೋಷಕರು ಹಾಗೂ ಮಗಳು ಇಬ್ಬರಿಗೂ ತಿಳುವಳಿಕೆ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಪುನಃ ಏನಾದರೂ ನಿಮ್ಮ ಮಗಳು ಗಲಾಟೆ ಮಾಡಿದರೆ ಪೊಲೀಸ್ ಠಾಣೆಗೆ ಬಂದು ದೂರು ನೀಡುವಂತೆ ಎಚ್ಚರಿಕೆ ನೀಡಿದ್ದಾರೆ.
ಪಾರ್ಕ್‌ನಲ್ಲಿ ವಿಡಿಯೋ ಮಾಡುತ್ತಾ ಅಸಭ್ಯ ವರ್ತನೆ: ಪೊಲೀಸರಿಗೆ ದೂರು
ಶಿವಮೊಗ್ಗ: ಕೆಲವು ಹುಡುಗರು ಪಾರ್ಕ್‌ನಲ್ಲಿ ವಿಡಿಯೋ ಮಾಡುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು 112 ಪೊಲೀಸರಿಗೆ ಸ್ಥಳೀಯರೊಬ್ಬರು ದೂರು ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ERV ಸಿಬ್ಬಂದಿ ಸದರಿ ಹುಡುಗರನ್ನು ಠಾಣೆಗೆ ಕರೆದುಕೊಂಡು ಬಂದು SHO ಅವರ ಮುಂದೆ ಹಾಜರುಪಡಿಸಿ ದೂರನ್ನು ಮುಕ್ತಾಯಗೊಳಿಸಿದ್ದಾರೆ.
ಪಕ್ಕದ ಮನೆಯ ಗಲಾಟೆ: 112ಗೆ ದೂರು
ಶಿವಮೊಗ್ಗ: ಪಕ್ಕದ ಮನೆಯಲ್ಲಿ ಗಲಾಟೆ ಮಾಡುತ್ತಿದ್ದಾರೆ, ಇದರಿಂದ ತೊಂದರೆಯಾಗುತ್ತಿದೆ ಎಂದು ಓಲ್ಡ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಿಂದ 112 ಸಿಬ್ಬಂದಿಗೆ ಫೋನ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಪೊಲೀಸರು ಪಕ್ಕದ ಮನೆಯವರಿಗೆ ಗಲಾಟೆ ಮಾಡದಂತೆ ಸೂಕ್ತ ತಿಳುವಳಿಕೆ ಹಾಗೂ ಎಚ್ಚರಿಕೆ ನೀಡಿ ಪ್ರಕರಣವನ್ನು ಸ್ಥಳದಲ್ಲೇ ಮುಕ್ತಾಯಗೊಳಿಸಿದ್ದಾರೆ.
