ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಖಿ ಕಟ್ಟಿದ ಪುಟಾಣಿ ಮಕ್ಕಳು

ಹಂಚಿಕೊಳ್ಳಿ
WhatsApp Facebook X Telegram
Children Tie Rakhi to Inmates at Shivamogga Central Prison

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಕ್ಷಾಬಂಧನ ಕೇವಲ ಅಣ್ಣ-ತಂಗಿಯರ ಬಾಂಧವ್ಯಕ್ಕೆ ಸೀಮಿತವಾದ ಹಬ್ಬವಲ್ಲ. ಮಾನವೀಯ ಘನತೆ, ಪ್ರೀತಿ, ಕ್ಷಮೆ ಹಾಗೂ ಪರಸ್ಪರ ವಿಶ್ವಾಸದ ಮೌಲ್ಯವನ್ನು ಎತ್ತಿಹಿಡಿಯುವ ಮೂಲಕ ಧರ್ಮಗಳ ಗಡಿಯನ್ನು ಮೀರಿ ಮಾನವೀಯ ಬಾಂಧವ್ಯ ಬೆಳೆಸುವ ವಿಶ್ವಮಾನವತೆಯ ಹಬ್ಬವಾಗಿದೆ ಎಂದು ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಗುರು ಫಾ. ಸೈಮನ್ ಪಿಂಟೋ ಅಭಿಪ್ರಾಯ ಪಟ್ಟರು.

ಶಿವಮೊಗ್ಗ ಧರ್ಮಪ್ರಾಂತ್ಯ ಹಾಗೂ ಶಿವಮೊಗ್ಗ ಕೇಂದ್ರ ಕಾರಾಗೃಹದ (Shivamogga Central Prison)ಆಶ್ರಯದಲ್ಲಿ ಇಂದು ಬೆಳಿಗ್ಗೆ 11.30ಕ್ಕೆ ಕೇಂದ್ರ ಕಾರಾಗೃಹದ ಗ್ರಂಥಾಲಯ ವಿಭಾಗದಲ್ಲಿ ಆಯೋಜಿಸಿದ್ದ ರಕ್ಷಾಬಂಧನ ಹಬ್ಬದ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಫಾ. ಸೈಮನ್ ಪಿಂಟೋ ರಕ್ಷಾಬಂಧನ ಮಾನವೀಯ ಘನತೆ ಹಾಗೂ ಮನುಷ್ಯನ ಮಹತ್ವವನ್ನು ಸಾರುತ್ತದೆ. ಕ್ಷಮೆ ಮತ್ತು ಪ್ರೀತಿಯ ಮೌಲ್ಯವನ್ನು ಎತ್ತಿಹಿಡಿಯುತ್ತದೆ. ಅಣ್ಣ ತಂಗಿಯ ರಕ್ಷಣೆಗೆ ತನ್ನ ಬದುಕನ್ನೇ ಮುಡಿಪಾಗಿಡುವ ಸಂಕಲ್ಪವನ್ನು ನೆನಪಿಸುವುದರ ಜೊತೆಗೆ ಮತ-ಧರ್ಮಗಳ ಗಡಿಯನ್ನು ಮೀರಿ ಎಲ್ಲ ಮನುಷ್ಯರ ನಡುವಿನ ಬಾಂಧವ್ಯವನ್ನು ಬಲಪಡಿಸುವ ಸಂದೇಶವನ್ನು ನೀಡುತ್ತದೆ ಎಂದರು. ಮೇವಾರದ ರಾಣಿ ಮತ್ತು ಮುಸ್ಲಿಂ ದೊರೆ ಹುಮಾಯೂನ್‌ಗೆ ಸಂಬಂಧಿಸಿದ ಐತಿಹಾಸಿಕ ಪ್ರಸಂಗವನ್ನು ಉಲ್ಲೇಖಿಸಿದ ಅವರು ಪರಸ್ಪರ ಗೌರವ ಮತ್ತು ಸಾಮರಸ್ಯದೊಂದಿಗೆ ಸಹಬಾಳ್ವೆ ನಡೆಸಬೇಕು ಎಂಬ ಸಂದೇಶ ರಕ್ಷಾಬಂಧನ ಹಬ್ಬ ನೀಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಭಾರತೀಯ ಕಾರಾಗೃಹ ಸೇವಾ ಆಯೋಗದ ಸಮನ್ವಯಾಧಿಕಾರಿ ಸಿಸ್ಟರ್ ಕೇಸರಿ ಫರ್ನಾಂಡಿಸ್ ಮಾತನಾಡಿ, ರಕ್ಷಾಬಂಧನವು ಬದುಕಿನಲ್ಲಿ ಬದಲಾವಣೆ ಮತ್ತು ಹೊಸ ಆರಂಭವನ್ನು ಸಂಕೇತಿಸುವ ಹಬ್ಬವಾಗಿದೆ ಎಂದರು. ಪ್ರತಿಯೊಬ್ಬರೂ ತಮ್ಮ ತಾಯಿ, ಸಹೋದರಿ, ಪತ್ನಿ ಮತ್ತು ಮಗಳನ್ನು ನೆನಪಿಸಿಕೊಂಡು ಗೌರವಿಸುವ ಸಂದರ್ಭವೂ ಇದಾಗಿದೆ. ರಾಖಿಯಾಗಿ ಕಟ್ಟುವ ಚಿಕ್ಕ ದಾರದಲ್ಲಿ ಅಪಾರ ಪ್ರೀತಿ ಅಡಗಿದ್ದು, ಅದು ಪರಸ್ಪರ ಕಾಳಜಿ, ವಿಶ್ವಾಸ ಮತ್ತು ಪವಿತ್ರ ಬಂಧನದ ಸಂಕೇತವಾಗಿದೆ. ಬದುಕಿನಲ್ಲಿ ಹೊಸ ಬದಲಾವಣೆಗೆ ಪ್ರೇರಣೆ ನೀಡುವ ಶಕ್ತಿ ರಕ್ಷಾಬಂಧನದಲ್ಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ಪಿ. ರಂಗನಾಥ್ ಮಾತನಾಡಿ, ರಕ್ಷಾಬಂಧನ ಹಬ್ಬವನ್ನು ಅಣ್ಣ-ತಂಗಿಯರ ಪವಿತ್ರ ಬಾಂಧವ್ಯದ ಪ್ರತೀಕವಾಗಿ ಆಚರಿಸಲಾಗುತ್ತದೆ. ಸಮಾಜದಲ್ಲಿ ಮಹಿಳೆಯನ್ನು ಗೌರವಿಸುವ ಮೌಲ್ಯವನ್ನು ಬೆಳೆಸಬೇಕೆಂಬ ಮಹತ್ವದ ಸಂದೇಶವನ್ನೂ ಈ ಹಬ್ಬ ಸಾರುತ್ತದೆ ಎಂದರು.

ಭಾರತೀಯ ಕಾರಾಗೃಹ ಸೇವಾ ಆಯೋಗದ ಕಾರ್ಯದರ್ಶಿ ಮೇರಿ ಡಿಸೋಜಾ ಹಾಗೂ ಕೈಗಾರಿಕಾ ಭದ್ರತಾ ಪಡೆಯ ಇನ್ಸ್‌ಪೆಕ್ಟರ್ ಜಗದೀಶ್ ಮಾತನಾಡಿ ಎಲ್ಲರಿಗೂ ರಕ್ಷಾಬಂಧನದ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ಕೇಂದ್ರ ಕಾರಾಗೃಹದ ಅಧೀಕ್ಷಕ ಮಹದೇವ ಪಿ. ನಾಯಕ್, ಸಹಾಯಕ ಅಧೀಕ್ಷಕರಾದ ಅಶೋಕ್ ಭಜಂತ್ರಿ ಮತ್ತು ಸುನಿಲ್ ಡಿ. ಗಲ್ಲೆ, ಜೈಲರ್‌ಗಳಾದ ಶ್ರೀಶೈಲ ಎಸ್. ಕಟ್ಟಿಮನಿ, ಶರಣಬಸವ, ಲಕ್ಷ್ಮೀ ಹಿರೇಮಠ, ಭಾರತೀಯ ಕಾರಾಗೃಹ ಸೇವಾ ಆಯೋಗದ ಸಿಸ್ಟರ್ ಎಲ್ಸಾ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಕೈದಿಗಳಿಗೆ ರಾಖಿ ಕಟ್ಟಿದ ಭದ್ರಾವತಿಯ ಪುಟಾಣಿಗಳು

ರಕ್ಷಾಬಂಧನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಭದ್ರಾವತಿಯ ಲಿಟಲ್ ಫ್ಲವರ್ ಶಾಲೆಯ ಪುಟಾಣಿ ಮಕ್ಕಳು ಕೇಂದ್ರ ಕಾರಾಗೃಹದ ಬಂಧಿಗಳಿಗೆ ರಾಖಿ ಕಟ್ಟಿದರು. ಮಕ್ಕಳಿಂದ ರಾಖಿ ಕಟ್ಟಿಸಿಕೊಂಡ ಬಂಧಿಗಳು ಅವರನ್ನು ಆಶೀರ್ವದಿಸಿ, ಸಿಹಿತಿನಿಸು ಹಂಚಿ ಶುಭ ಕೋರಿದರು. ಕಾರಾಗೃಹದ ವಾತಾವರಣದಲ್ಲಿ ನಡೆದ ಈ ರಕ್ಷಾಬಂಧನ ಆಚರಣೆಯು ಅಣ್ಣ-ತಂಗಿಯರ ಬಾಂಧವ್ಯದ ಜೊತೆಗೆ ಪ್ರೀತಿ, ಕಾಳಜಿ ಮತ್ತು ಮಾನವೀಯ ಸಂಬಂಧದ ಸಂದೇಶ ಸಾರಿತು. ಇದೇ ವೇಳೆ ರಕ್ಷಾಬಂಧನ ಆಚರಣೆಯ ಅಂಗವಾಗಿ ಕೇಂದ್ರ ಕಾರಾಗೃಹದ ಬಂಧಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಿತು. ಅಣ್ಣ-ತಂಗಿಯರ ಪವಿತ್ರ ಬಾಂಧವ್ಯವನ್ನು ಸಾರುವ ವಿಶೇಷ ಸಂಯೋಜನೆಯ ಗೀತೆಗಳನ್ನು ಬಂಧಿಗಳಾದ ಚಂದ್ರ ಹೆಮ್ಮಾಡಿ, ತಿಮ್ಮಪ್ಪ, ಆನಂದ, ತಿಪ್ಪೇಸ್ವಾಮಿ, ರವಿ, ಸಂದೀಪ್ ರಾಥೋಡ್ ಮತ್ತು ರವಿಕುಮಾರ್ ಹಾಡಿ ರಂಜಿಸಿದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor