ದೇವರ ಪ್ರಾರ್ಥನೆಗೆ ಅಡ್ಡಿಯಾಗದ ಜೇನು ದಾಳಿ,ಕಡಿತದ ನೋವಿನಲ್ಲೂ ಪೂಜೆ ಪೂರೈಸಿ ಭಕ್ತಿಯ ಪರಾಕಾಷ್ಠೆ!

Bee Attack ಶಿವಮೊಗ್ಗ :  ಶುಭ ಶುಕ್ರವಾರದ ಶಿಲುಬೆ ಹಾದಿಯಲ್ಲಿ ಹೆಜ್ಜೇನುಗಳು ದಾಳಿ ನಡೆಸಿದರೂ, ಅದರ ನೋವಿನಲ್ಲಿಯೂ ಪೂಜೆಯಲ್ಲಿ ಪಾಲ್ಗೊಂಡು ಭಕ್ತಿಯ ಪರಾಕಾಷ್ಠೆ ಮೆರೆದರು. ಜೇನಿನ ಗೂಡು ನಾವೆಲ್ಲಾ ಎಂದು ಸಾರಿ ಹೇಳಿದರು. ನೂರಕ್ಕೂ ಅಧಿಕ ಭಕ್ತರಿಗೆ ಎರಡು ಮೂರರಂತೆ ಜೇನು ಕಚ್ಚಿದರೂ, ಲೆಕ್ಕಿಸದೆ ಇತರರ ರಕ್ಷಣೆಗೆ ಧಾವಿಸಿದರು ಇಂತಹ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಶಿವಮೊಗ್ಗದ ಸೆಕ್ರೆಡ್ ಹಾರ್ಟ್ ಪ್ರಧಾನಾಲಯದ ಆವರಣ.

ಮಧ್ಯಾಹ್ನ 3 ಗಂಟೆಯವರೆಗೂ ಶಿವಮೊಗ್ಗದಲ್ಲಿ ಕರೆಂಟ್​ ಇರಲ್ಲ! ವಿವರ ಓದಿ

ಹೌದು ಯೇಸುಕ್ರಿಸ್ತ ಸಾವನ್ನಪ್ಪಿದ ದಿನವನ್ನು ಕ್ರೈಸ್ತರು ಶುಭ ಶುಕ್ರವಾರವಾಗಿ ನೋಡುತ್ತಾರೆ.ನಲ್ವತ್ತು ದಿನ ಉಪವಾಸ ಪ್ರಾರ್ಥನೆ ತ್ಯಾಗ ಪ್ರೀತಿ ದಾನದ ಮೂಲಕವೇ ನಡೆಯುವ ಸಂಪ್ರದಾಯ ಗುಡ್ ಪ್ರೈಡೆ ದಿನಕ್ಕೆ ಅಂತ್ಯಗೊಳ್ಳುತ್ತದೆ. ನೆನ್ನೆ ಗುಡ್ ಪ್ರೈಡೆ ದಿನ ಶೇಕಡಾ 75 ರಷ್ಟು  ಮಂದಿ ಉಪವಾಸದಿಂದಲೇ ಸೆಕ್ರೆಡ್ ಹಾರ್ಟ್ ಆವರಣದ ಶಿಲುಬೆ ಹಾದಿಯಲ್ಲಿ ಪಾಲ್ಗೊಂಡಿದ್ದರು.

700 ಕ್ಕೂ ಅಧಿಕ ಕ್ರೈಸ್ತಭಾಂಧವರು ಗುಡ್ ಪ್ರೈಡೆಯ ಶಿಲುಬೆಹಾದಿಯಲ್ಲಿ ಪಾಲ್ಗೊಂಡಿದ್ದರು. ಈ ಪ್ರಾರ್ಥನೆಗೆ  ನಾನು ಕೂಡ ಸಾಕ್ಷಿಯಾಗಿದ್ದೆ. ಮದ್ಯಾಹ್ನ ಮೂರು ಗಂಟೆಗೆ ನಿರ್ಧಿಷ್ಠವಾಗಿ ಶಿಲುಬೆಹಾದಿ ಪ್ರಾರಂಭವಾದಾಗ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಬಿಸಿಲಿನ ಧಗೆ ಹೆಚ್ಚಿದ್ದರಿಂದ ನಾನು ನೆರಳನ್ನು ಆಶ್ರಯಿಸಿ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದೆ. 

ಶಿಲುಬೆಯ ಹಾದಿಯ ಒಂದನೇ ಸ್ಥಳದಿಂದ ಏಳನೇ ಸ್ಥಳದವರೆಗಿನ ಪ್ರಾರ್ಥನೆಯಲ್ಲಿ ಏನೂ ತೊಡಕು ಕಾಣಿಸಿಕೊಳ್ಳಲಿಲ್ಲ. ಭಕ್ತರು ಬಿಸಿಲಿನ ತಾಪಮಾನದಲ್ಲೂ ಮೊಣಕಾಲು ಊರಿ ಪ್ರಾರ್ಥಿಸುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು. ಫಾದರ್ ಸ್ಟ್ಯಾನಿ ಮುಖ್ಯ ಭೂಮಿಕೆಯಲ್ಲಿಯೇ ಕಾಣಿಸಿಕೊಂಡು ಶಿಲುಬೆ ಹಾದಿಯ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ಎಂಟನೇ ಸ್ಥಳದಲ್ಲಿ ಪ್ರಾರ್ಥನೆ ನಡೆಯುವಾಗ ಇದ್ದಕ್ಕಿದ್ದಂತೆ ಜೇನುನೊಣಗಳು ಮೌಂಟ್ ಕಾರ್ಮೆಲ್ ಮಾತೆಯ ಶಾಲೆಯ ಕಟ್ಟಡದಿಂದ ಸೈನಿಕ ದಳದಂತೆ ಪ್ರಾರ್ಥನೆಯಲ್ಲಿ ತೊಡಗಿದ್ದ ಭಕ್ತ ಸಮೂಹದ ಮೇಲೆ ಎರಗಿತು. ತಲೆಭಾಗಿ ಪ್ರಾರ್ಥಿಸುತ್ತಿದ್ದ ಭಕ್ತರಿಗೆ ಮೇಲೆ ಏನಾಗುತ್ತಿದೆಯೋ ಎಂಬ ಅರಿವೇ ಇರಲಿಲ್ಲ. ಅವರನ್ನು ಜೇನುನೊಣಗಳು ಕುಕ್ಕಿದಾಗಲೇ ಅಪಾಯದಲ್ಲಿರುವುದು ಗೊತ್ತಾಯಿತು. 

ಹೆಜ್ಜೇನುಗಳು ಯುದ್ದೋಪಾದಿಯಲ್ಲಿ ಬರುತ್ತಿದ್ದಂತೆ ಹಲವು ಮಂದಿ ಸೆಕ್ರೆಡ್ ಹಾರ್ಟ್ ಪ್ರಧಾನಾಲಯದ ಒಳಸೇರಿ ಬಾಗಿಲು ಹಾಕಿಕೊಂಡರು. ಅಷ್ಟರಲ್ಲಾಗಲೇ ನೂರಕ್ಕೂ ಅಧಿಕ ಮಂದಿಗೆ ಜೇನುನೊಣಗಳು ಕಡಿದಿದ್ದವು. ಸಣ್ಣ ಮಕ್ಕಳು ಕೂಡ ಜೇನುದಾಳಿಗೆ ಒಳಗಾದರು. ನಾನು ಮತ್ತು ಸ್ನೇಹಿತ ಜೋಸೆಫ್ ಟೆಲ್ಲಿಸ್ ಫಾದರ್ ಮನೆಯ ಆಶ್ರಯ ಪಡೆದೆವು. ಪಾಧರ್ ಮನೆಯ ಸುತ್ತಮುತ್ತಲೂ ಜೇನುನೊಣಗಳು ಜನರನ್ನು ಭಾದಿಸತೊಡಗಿದವು.

ತಕ್ಷಣ ಅಲ್ಲಿದಂಲೇ ಕೋಟೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹರೀಶ್ ಪಾಟೀಲ್ ಗೆ ಪೋನಾಯಿಸಿ, ನಡೆದ ಘಟನೆಯನ್ನು ವಿವರಿಸಿದೆ. ಫೈರ್ ನವರನ್ನಾದರೂ ಕಳಿಸಿಕೊಡಿ ಎಂದೆ..ಅವರು ಬರವಷ್ಟರಲ್ಲಾಗಲೇ ಭಕ್ತರೇ ಅಂಬುಲೆನ್ಸ್ ಗಳಿಗೆ ಫೋನ್ ಮಾಡಿದ್ದರು. ನಾಲ್ಕೈದು ಮಂದಿಗೆ ಜೇನು ನೊಣಗಳು ಅಕ್ರಮಣಕಾರಿಯಾಗಿ ಕಚ್ಚಿದ್ದವು. ಇಬ್ಬರು ಪ್ರಜ್ಞಾಹೀನರಾದರು. 

Bee Attack ಯುವಕರ ಗುಂಪು ಜೇನುನೊಣಗಳನ್ನು ಲೆಕ್ಕಿಸದೆ, ಕಡಿತಕ್ಕೊಳಗಾದರೂ, ಸುತ್ತಮುತ್ತಲಿನ ತೆಂಗಿನ ಗರಿಗಳನ್ನು ತಂದು ಬೆಂಕಿ ಹಾಕಿದರು. ಎರಡು ಮೂರು ಕಡೆ ಹೊಗೆ ಆವರಿಸಿದ್ದರಿಂದ  ತಕ್ಷಣಕ್ಕೆ ಜೇನುನೊಣಗಳು ಸ್ಥಳಾಂತರಗೊಂಡವು. ನಂತರ ಎರಡು ಅಂಬುಲೆನ್ಸ್ ಗಳು ಗಾಯಾಳುಗಳ ರಕ್ಷಣೆಗಾಗಿ ಬಂದವು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಎಸ್ಪಿ ನಿಖಿಲ್ ಬಿ. ರವರಿಗೆ ವಿಷಯ ಮುಟ್ಟಿಸುವ ಪ್ರಯತ್ನ ಮಾಡಿದೆ. ಅವರು  ಕಾರ್ಯದೊತ್ತಡದಲ್ಲಿದ್ದ ಕಾರಣ ತಕ್ಷಣಕ್ಕೆ ನನ್ ಫೋನ್ ಕರೆಯನ್ನು ರಿಸೀವ್ ಮಾಡಲಿಲ್ಲ.

ಕ್ರೈಸ್ತ ದೇವಾಲಯದ ಇತಿಹಾಸದಲ್ಲಿ ಅದರಲ್ಲೂ ಗುಡ್ ಪ್ರೈಡೆ ದಿನ ಈ ರೀತಿಯ ಕಹಿ ಘಟನೆಯೊಂದು ಚರ್ಚ್ ಆವರಣದಲ್ಲಿ ನಡೆಯುತ್ತದೆ ಎಂದು ಯಾರು ಭಾವಿಸಿರಲಿಲ್ಲ. ಶಿಲುಬೆಹಾದಿಯ ನ್ಯೂಸ್ ಕವರೇಜ್ ಗಾಗಿ ಬಂದಿದ್ದ ಮಾದ್ಯಮ ಮಂದಿಗೆ ಜೇನು ನೊಣಗಳ ದಾಳಿಯೇ ಸುದ್ದಿಯಾಗಿ ಸಿಕ್ಕಿತು. ಮಾಧ್ಯಮ ಮಿತ್ರರು ಘಟನೆಗೆ ವಿಷಾಧ ವ್ಯಕ್ತಪಡಿಸಿದರು. ಕೆಲವು ಕ್ರೈಸ್ತ ಭಾಂದವರು ಈ ಕ್ಷಣದಲ್ಲಿ ಎಲ್ಲರೂ ನೋವಿನಲ್ಲಿರುವಾಗ ಮಾದ್ಯಮದವರು ಕ್ಯಾಮರಾ ಹಿಡಿದು ನ್ಯೂಸ್ ಮಾಡುವುದು ಸರಿಯಲ್ಲ ಎಂದು ಹೇಳಿದರು.ಆಗ ನಾನೇ ಮಧ್ಯ ಪ್ರವೇಶಿಸಿ ಅವರನ್ನು ಸಮಾಧಾನ ಮಾಡಿ ಕಳುಹಿಸಿದೆ.

ಇಲ್ಲಿ ವಿಶೇಷವೆಂದರೆ, ಜೇನು ನೊಣಗಳು ದಾಳಿ ಮಾಡಿದಾಗ ಭಕ್ತ ಸಮೂಹ ಚರ್ಚ್ ಆವರಣವನ್ನೇ ತೊರೆದು ಹೋಗಬಹುದಿತ್ತು. ಆದರೆ ಜೇನಿನ ನೋವುಂಡರೂ, ಜೇನುಗೂಡಿನಂತಿದ್ದ ಚರ್ಚ್ ಪ್ರವೇಶಿಸಿದರು. ಗುಡ್ ಪ್ರೈಡ್ ದಿನಕ್ಕೆ ಯಾವುದೇ ಕಳಂಕ ಬರಬಾರದು ಎಂಬ ಕಾರಣಕ್ಕೆ ಚರ್ಚ್ ಒಳಗೆ ಆಶ್ರಯ ಪಡೆದರು. ನಂತರ ಫಾದರ್ ಸ್ಟ್ಯಾನಿ ಪ್ರಾರ್ಥನೆಯನ್ನು ಆರಂಭಿಸಿದರು.

Bee Attack ಈ ಸಂದರ್ಭದಲ್ಲಿ ಎಸ್ಪಿ ನಿಖಿಲ್ ಬಿ ರವರು ನನಗೆ ಕರೆಮಾಡಿದಾಗ ನಡೆದ ಘಟನೆಯನ್ನು ವಿವರಿಸಿದೆ. ಅವರು ಕೂಡ ಘಟನೆಗೆ ವಿಷಾದ ವ್ಯಕ್ತಪಡಿಸಿದರು. ಮುಂದಿನ ಹಂತದಲ್ಲಿ ನಮ್ಮ ಕಡೆಯಿಂದ ಏನಾದ್ರೂ, ಕೆಲಸವಾಗಬೇಕೆಂದರೆ ಹೇಳಿ ಖಂಡೀತ ಮಾಡುತ್ತೇವೆ ಎಂದು ಹೇಳಿದರು.ನಂತರ ಪ್ರಾರ್ಥನೆಯಲ್ಲಿ ನಾನು ಪಾಲ್ಗೊಂಡೆ. ಪ್ರಾರ್ಥನೆಯಲ್ಲಿ ಪಾಲ್ಗೊಂಡ ಹಲವರು ಇನ್ನು ಜೇನುನೊಣದ ಮುಳ್ಳನ್ನು ಹುಡುಕಿ ಹುಡುಕಿ ತೆಗೆಯುತ್ತಲೇ ಇದ್ದರು. ಕಹಿ ಘಟನೆ ಏನೇ ಆದರೂ, ಗುಡ್ ಪ್ರೈಡೆ ಎನ್ನುವ ಪದಕ್ಕೆ ಸಾರ್ಥಕತೆ ತಂದು ಕೊಟ್ಟ ಭಕ್ತರ ನಡೆ, ಎಲ್ಲರ ಗಮನ ಸೆಳೆದಿದ್ದಂತೂ ಸುಳ್ಳಲ್ಲ.

ಬರಹ 

ಜೇಸುದಾಸ್ ಪಿ,ಸಂಪಾದಕರು

ಮಲೆನಾಡು ಟುಡೆ ದಿನ ಪತ್ರಿಕೆ

Bee Attack During Good Friday Prayers

Bee Attack During Good Friday Prayers
Bee Attack During Good Friday Prayers