SHIKARIPURA

ಶಿವಮೊಗ್ಗದಲ್ಲಿ ಜಸ್ಟೀಸ್ ಫಾರ್ ಸಂಗೀತಾ ಹೋರಾಟ! ಬೀದಿಗಿಳಿದ ವಿದ್ಯಾರ್ಥಿಗಳು! ಕಾರಣವಿದೆ!

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Justice for Sangeetha / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯ ಪಿಜಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿ ಸಂಗೀತರ ಸಾವು ಆತ್ಮಹತ್ಯೆಯಲ್ಲ, ಅದೊಂದು ಕೊಲೆ, ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂಬ ಆಗ್ರಹ ಜೋರಾಗುತ್ತಿದೆ. ಈ ಸಂಬಂಧ ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆ ಶಿಕಾರಿಪುರ ತಾಲೂಕು ಘಟಕದ ನೇತೃತ್ವದಲ್ಲಿ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಬೃಹತ್ ಮೆರವಣಿಗೆ ನಡೆಸಿದರು.

ಸಂಗೀತ ಸಾವಿಗೆ ಕಾರಣರಾದ ಪಿಜಿ ಮಾಲೀಕರು ಹಾಗೂ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿರುವ ಪೊಲೀಸ್ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಪ್ರತಿಭಟನಾಕಾರರು, ನಂತರ ತಾಲೂಕು ಕಚೇರಿಯ ಎದುರು ಆಕ್ರೋಶ ವ್ಯಕ್ತಪಡಿಸಿದರು.

ದೇಶ ಹಾಗೂ ರಾಜ್ಯದಲ್ಲಿ ಅಪ್ರಾಪ್ತರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ರಾಜಕೀಯ ಪ್ರಭಾವಿಗಳ ಕೈವಾಡದಿಂದಾಗಿ ಪೊಲೀಸ್ ಇಲಾಖೆ ಶಾಮೀಲಾಗಿ ಇಂತಹ ಪ್ರಕರಣಗಳನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆಯುತ್ತಿವೆ. ಬಡ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತ ಬಾಲಕಿ ಸಂಗೀತಳನ್ನು ಪಿಜಿ ಮಾಲೀಕರೇ ಹತ್ಯೆ ಮಾಡಿರುವ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸಬೇಕು

ಯೋಗೀಶ್, ಎನ್‌ಎಸ್‌ಯುಐ ತಾಲೂಕು ಘಟಕದ ಅಧ್ಯಕ್ಷ

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಮ್ ಮಾತನಾಡಿ, ಸಂಗೀತರ ಕೊಲೆ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕಾನೂನು ರಕ್ಷಣೆ ಮಾಡಬೇಕಾದವರಿಂದಲೇ ಪ್ರಕರಣ ಮುಚ್ಚಿಹಾಕುವ ಯತ್ನ ನಡೆಯುತ್ತಿದೆ. ಈ ಪ್ರಕರಣವನ್ನು ಎಸ್‌ಐಟಿಗೆ ವಹಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ಬಳಿಕ ತಾಲೂಕು ದಂಡಾಧಿಕಾರಿ ಮೂಲಕ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ತಾಲೂಕು ಯುವ ಘಟಕದ ಅಧ್ಯಕ್ಷ ಮಂಜು ನಾಯ್ಕ, ಮುಖಂಡರಾದ ಚರಣ್ ಬನ್ನೂರ್ ಸೇರಿದಂತೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ