BHADRAVATI

ಸುವರ್ಣ ರಾಮಮಂದಿರವನ್ನು ನೋಡ್ಬೇಕಾ ? ಹಾಗಾದ್ರೆ ಭದ್ರಾವತಿಯ ಈ ಪ್ರದೇಶಕ್ಕೆ ಭೇಟಿ ನೀಡಿ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Ayodhya Ram Mandir ಶಿವಮೊಗ್ಗ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ಪ್ರಾಣಪ್ರತಿಷ್ಠಾಪನೆಯಾದ ನಂತರ ಎಲ್ಲರಲ್ಲೂ ಅಯೋಧ್ಯೆಗೆ ಭೇಟಿ ನೀಡುವ ಆಸೆಯಂತೂ ಸಹಜವಾಗಿಯೇ ಇರುತ್ತದೆ. ಆದರೆ ವಯೋಸಹಜ ಕಾಯಿಲೆ, ಆರ್ಥಿಕ ಸಮಸ್ಯೆ ಅಥವಾ ಇತರ ಕಾರಣಗಳಿಂದ ಅಯೋಧ್ಯೆಗೆ ಹೋಗಲು ಸಾಧ್ಯವಾಗದ ಭಕ್ತರಿಗಾಗಿ ಭದ್ರಾವತಿಯ ಹಳೇನಗರದಲ್ಲಿರುವ ವಾಸವಿ ಮಹಲ್‌ನಲ್ಲಿ ಕೃತಕ ರಾಮಮಂದಿರದ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ. 

ಶಿವಮೊಗ್ಗಕ್ಕೆ ಸಚಿವ ರಾಮಲಿಂಗಾ ರೆಡ್ಡಿ : ಯಾವಾಗ, ಕಾರಣವೇನು 

ಈ ಕೃತಕ ರಾಮಮಂದಿರವು ಸಂಪೂರ್ಣವಾಗಿ ಬಂಗಾರದ ಬಣ್ಣದಲ್ಲಿ ಕಂಗೊಳಿಸುತ್ತಿದ್ದು, ಕಂಬಗಳು, ಗೋಪುರಗಳು ಮತ್ತು ಮೆಟ್ಟಿಲುಗಳ ವಿನ್ಯಾಸವನ್ನು ಸೂಕ್ತವಾಗಿ ಮಾಡಲಾಗಿದೆ. ಮಂದಿರವನ್ನು ಕೆಂಪು ಮತ್ತು ಹಳದಿ ಬಣ್ಣದ ಹೂವುಗಳು, ಮಣಿಗಳು, ಚಮಕಿಗಳು ಹಾಗೂ ಸಣ್ಣ ಗಂಟೆಗಳಿಂದ ಅಲಂಕರಿಸಲಾಗಿದೆ. ಮಂದಿರದ ಒಳಭಾಗದಲ್ಲಿ ಶ್ರೀರಾಮ, ಸೀತಾಮಾತೆ, ಲಕ್ಷ್ಮಣ ಮತ್ತು ಹನುಮಂತನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಮಂದಿರದ ಕೆಳಭಾಗದಲ್ಲಿ ರಾಮಾಯಣದ ವಿವಿಧ ದೃಶ್ಯಗಳನ್ನು ವಿವರಿಸುವ ಭಾವಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ. ಮೇಲ್ಭಾಗದಲ್ಲಿ ಕೇಸರಿ ಧ್ವಜಗಳನ್ನು ಅಳವಡಿಸಲಾಗಿದೆ.

ಈ ಕೃತಕ ರಾಮಮಂದಿರದ ನಿರ್ಮಾಣದ ರೂವಾರಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿ.ಸಿ. ವಿನಯ್ ರಾಮ್ ಆಗಿದ್ದಾರೆ. ಅಯೋಧ್ಯೆಗೆ ಹೋಗಲು ಸಾಧ್ಯವಾಗದ 90 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ದರ್ಶನ ಭಾಗ್ಯ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇದೊಂದು ಸುವರ್ಣ ಮಂದಿರದ ಮಾದರಿಯಲ್ಲಿದೆ. 2022 ರಿಂದ ರಾಜ್ಯ ಮತ್ತು ರಾಷ್ಟ್ರದಾದ್ಯಂತ 108 ಕಡೆ ಈ ಪ್ರದರ್ಶನವನ್ನು ಮಾಡಿಕೊಂಡು ಬರಲಾಗುತ್ತಿದೆ. ಶ್ರೀರಾಮ ಸೂರ್ಯವಂಶದವನು, ಸೂರ್ಯನ ಬೆಳಕು ಹೇಗೆ ಯಾವುದೇ ಜಾತಿ, ಧರ್ಮ, ಪಕ್ಷದ ಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಸಿಗುತ್ತದೆಯೋ, ಹಾಗೆ ರಾಮನ ಆದರ್ಶಗಳು ಸರ್ವರಿಗೂ ತಲುಪಬೇಕು ಎಂಬುದು ಮುಖ್ಯ ಉದ್ದೇಶವಾಗಿದೆ ಎಂದು ವಿನಯ್ ರಾಮ್ ವಿವರಿಸಿದ್ದಾರೆ. 

ಭದ್ರಾವತಿ ನಗರಸಭೆ ಸದಸ್ಯ ಮಂಜುನಾಥ್ ಅವರು ಮಾತನಾಡಿ, ಆರ್ಯ ವೈಶ್ಯ ಸಮಾಜದ ವತಿಯಿಂದ ವಾಸವಿ ಮಹಲ್‌ನಲ್ಲಿ ಈ ರಾಮಮಂದಿರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ವಯಸ್ಸಾದವರಿಗೆ ಹಾಗೂ ದೂರದ ಊರಿಗೆ ಹೋಗಲಾಗದವರಿಗೆ ಇದೊಂದು ಅವಕಾಶವಾಗಿದೆ. ಮುಂದಿನ 9 ದಿನಗಳ ಕಾಲ ಈ ಪ್ರದರ್ಶನ ಇಲ್ಲಿಯೇ ಇರಲಿದ್ದು, ಭದ್ರಾವತಿಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವೀಕ್ಷಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಪ್ರದರ್ಶನವು ಹಳೇನಗರದ ಶ್ರೀ ಕನ್ಯಕಾ ಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ನಡೆಯುತ್ತಿದೆ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.