STATE NEWS

ಮೇ 1 ರಿಂದ ಬೆಂಗಳೂರು-ಶಿವಮೊಗ್ಗ ಇಂಡಿಗೋ ಸೇವೆ ಸ್ಥಗಿತ, ಖಾಸಗಿ ನಿರ್ವಹಣೆ ಬಗ್ಗೆ ಚರ್ಚೆ, ಬಿವೈಆರ್ ಹೇಳಿದ್ಧೇನು

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ | ಮಲೆನಾಡಿನ ಜನರ ಬಹುದಿನಗಳ ಕನಸಾಗಿದ್ದ ಶಿವಮೊಗ್ಗ ವಿಮಾನ ನಿಲ್ದಾಣವು ಈಗ ಸಾಲು ಸಾಲು ಸಮಸ್ಯೆಗಳನ್ನು ಎದುರಿಸುತ್ತಿದೆ. ಕಳೆದ 2023ರ ಆಗಸ್ಟ್ 31ರಂದು ಅದ್ಧೂರಿಯಾಗಿ ಆರಂಭಗೊಂಡಿದ್ದ ಇಂಡಿಗೋ ಏರ್‌ಲೈನ್ಸ್ ಸೇವೆ, ಸರಿಯಾಗಿ ಮೂರು ವರ್ಷಗಳ ಪೂರೈಸುವ ಮುನ್ನವೇ ಅಂದರೆ ಮೇ 1, 2026 ರಿಂದ ತನ್ನ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಲ್ಲಿಸುತ್ತಿದೆ.

ಲಾಭಾಂಶದ ಆಸೆಗೆ ಬರೋಬ್ಬರಿ 53 ಲಕ್ಷ ಕಳೆದುಕೊಂಡ ಶಿವಮೊಗ್ಗ ವ್ಯಕ್ತಿ, ನಡೆದಿದ್ದೇನು

ವಿಮಾನ ನಿಲ್ದಾಣವು ಆರಂಭವಾದ ದಿನದಿಂದಲೂ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿತ್ತು. ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ನಿಲ್ದಾಣದಿಂದ ಇದುವರೆಗೆ 2400ಕ್ಕೂ ಅಧಿಕ ವಿಮಾನಗಳು ಸಂಚರಿಸಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನರು ಇದರ ಲಾಭ ಪಡೆದಿದ್ದಾರೆ. ಆದರೆ, ಕಳೆದ ಕೆಲವು ಸಮಯದಿಂದ ನೈಟ್ ಲ್ಯಾಂಡಿಂಗ್ ವ್ಯವಸ್ಥೆಯ ಕೊರತೆ ಹಾಗೂ ಪದೇ ಪದೇ ವಿಮಾನಗಳು ರದ್ದಾಗುತ್ತಿರುವುದು ಪ್ರಯಾಣಿಕರಲ್ಲಿ ಭಾರಿ ಅಸಮಾಧಾನ ಮೂಡಿಸಿದೆ.

ಪ್ರಸ್ತುತ ಇಂಡಿಗೋ ವೆಬ್‌ಸೈಟ್‌ನಲ್ಲಿ ಮೇ 1ರ ನಂತರ ಬೆಂಗಳೂರು-ಶಿವಮೊಗ್ಗ ನಡುವೆ ಯಾವುದೇ ಟಿಕೆಟ್ ಬುಕ್ಕಿಂಗ್ ಲಭ್ಯವಿಲ್ಲ. ಏಪ್ರಿಲ್ 30 ರಂದು ಮಧ್ಯಾಹ್ನ 2:30ಕ್ಕೆ ಶಿವಮೊಗ್ಗದಿಂದ ಹೊರಡುವ 6E7732 ನಂಬರಿನ ವಿಮಾನವೇ ಕೊನೆಯದಾಗಲಿದೆ. ಈ ಬೆಳವಣಿಗೆಯು ಪ್ರವಾಸೋದ್ಯಮ ಮತ್ತು ಜಿಲ್ಲೆಯ ಕೈಗಾರಿಕೋದ್ಯಮಿಗಳಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಹಾಗೂ ಇಂಡಿಗೋ ನಡುವಿನ ಒಪ್ಪಂದವು 2025ರ ಆಗಸ್ಟ್‌ನಲ್ಲೇ ಕೊನೆಗೊಂಡಿದ್ದರೂ, ಅದರ ನವೀಕರಣ ಪ್ರಕ್ರಿಯೆ ವಿಳಂಬವಾಗಿದೆ. ಅಲ್ಲದೆ, ಪ್ರತಿ ಟಿಕೆಟ್‌ಗೆ ನೀಡಲಾಗುತ್ತಿದ್ದ 500 ರೂಪಾಯಿಗಳ ಸಹಾಯಧನ (VGF – Viability Gap Funding) ಯೋಜನೆಯು ಜುಲೈ 2025ಕ್ಕೆ ಮುಕ್ತಾಯವಾಗಿದ್ದು, ರಾಜ್ಯ ಸರ್ಕಾರ ಇದನ್ನು ಮುಂದುವರಿಸಲು ಆಸಕ್ತಿ ತೋರುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಬಿ.ವೈ. ರಾಘವೇಂದ್ರ ಅವರು,ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರಕ್ಕೆ ಅಥವಾ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾಕ್ಕೆ (AAI) ಹಸ್ತಾಂತರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಈ ಕುರಿತು ಐಎಎಸ್ ಅಧಿಕಾರಿ ವಿಶಾಲ್ ಅವರು ದೆಹಲಿಯಲ್ಲಿ ಮಾತುಕತೆ ನಡೆಸಿದ್ದಾರೆ. ವಿಮಾನ ನಿಲ್ದಾಣದ ಈವರೆಗಿನ ವೆಚ್ಚವನ್ನು ಕೇಂದ್ರ ಭರಿಸುವ ಬಗ್ಗೆ ಹಾಗೂ ಖಾಸಗಿ ನಿರ್ವಹಣೆಗೆ ವಹಿಸುವ ಬಗ್ಗೆ ಚರ್ಚೆಗಳು ನಡೆದಿವೆ, ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು, ಆಗಸ್ಟ್ ವೇಳೆಗೆ ನೈಟ್ ಲ್ಯಾಂಡಿಂಗ್ ಕಾಮಗಾರಿ ಪೂರ್ಣಗೊಳ್ಳಲಿದ್ದು, ವಿಮಾನ ಸೇವೆ ಮುಂದುವರಿಸಲು ಕೈಗಾರಿಕಾ ಸಚಿವರೊಂದಿಗೆ ಮಾತನಾಡಲಾಗಿದೆ ಎಂದು ಭರವಸೆ ನೀಡಿದ್ದಾರೆ. ಸದ್ಯಕ್ಕೆ ಸ್ಪೈಸ್ ಜೆಟ್ ಮತ್ತು ಸ್ಟಾರ್ ಏರ್ ಸಂಸ್ಥೆಗಳು ಹೈದರಾಬಾದ್, ಚೆನ್ನೈ ಹಾಗೂ ಗೋವಾಕ್ಕೆ ಸೇವೆ ನೀಡುತ್ತಿದ್ದರೂ, ಅವುಗಳ ಸಮಯ ಪಾಲನೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಪ್ರಯಾಣಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Airport Crisis IndiGo Suspends Bengaluru Flights

Airport Crisis IndiGo Suspends Bengaluru Flights
Airport Crisis IndiGo Suspends Bengaluru Flights

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.