ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡಿಕೆ ವ್ಯಾಪಾರಿಯ ಕಾರು ಅಡ್ಡಗಟ್ಟಿ ₹58 ಲಕ್ಷ ದರೋಡೆ! ಭದ್ರಾವತಿಯಲ್ಲಿ ಆರೋಪಿಗಳ ಬಂಧನ, ₹30 ಲಕ್ಷ ವಶ

ಹಂಚಿಕೊಳ್ಳಿ
WhatsApp Facebook X Telegram
ಅಪರಾಧ ಸುದ್ದಿಗಳಿಗೆ ಸಂಬಂಧಿಸಿದ ಸಾಂದರ್ಭಿಕ ಚಿತ್ರ
crime news image malenadutoday

ಸುದ್ದಿಯ ಸ್ಥಳ: Bhadravati, Shivamogga, Karnataka

ಮಲೆನಾಡು ಟುಡೆ ಸುದ್ದಿ / ಕಡೂರು / ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡಿಕೆ ವ್ಯಾಪಾರಿಯ ಫಾರ್ಚುನರ್ ಕಾರನ್ನು ಅಡ್ಡಗಟ್ಟಿ ₹58 ಲಕ್ಷ ದರೋಡೆ ಮಾಡಿದ್ದ ಪ್ರಕರಣವನ್ನ ಕಡೂರು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಭದ್ರಾವತಿಯಲ್ಲಿ ಅಡಗಿಕೊಂಡಿದ್ದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿರುವ ಪೊಲೀಸರು, ಅವರಿಂದ ₹30 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.

ಏನಿದು ಪ್ರಕರಣ

ನವೆಂಬರ್ 7ರ ಮಧ್ಯರಾತ್ರಿ ಬೀರೂರು ಮೂಲದ ಅಡಿಕೆ ವ್ಯಾಪಾರಿ ತೌಫಿಕ್ ಎಂಬವರು ಫಾರ್ಚುನರ್ ಕಾರಿನಲ್ಲಿ ಬೆಂಗಳೂರಿನಿಂದ ವಾಪಸ್ ಬರುತ್ತಿದ್ದರು. ಈ ನಡುವೆ ಕಡೂರು ಪಟ್ಟಣದ ಹೊರವಲಯದಲ್ಲಿ ಇವರನ್ನ ಅಡ್ಡಗಟ್ಟಿ ದರೋಡೆ ಮಾಡಲಾಗಿತ್ತು. ಕಾರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ₹58 ಲಕ್ಷ ನಗದು ದೋಚಿ ಪರಾರಿಯಾಗಿದ್ದರು. ಘಟನೆ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಾಜಿ ಉದ್ಯೋಗಿಯಿಂದಲೇ ದರೋಡೆಗೆ ಸಂಚು!

ಪೊಲೀಸ್ ತನಿಖೆಯಲ್ಲಿ ದರೋಡೆಗೆ ತೌಫಿಕ್ ಅವರ ಬಳಿಯೇ ಕೆಲಸ ಮಾಡುತ್ತಿದ್ದ ಇರ್ಫಾನ್ ಸ್ಕೆಚ್​ ಹಾಕಿರಬಹುದು ಎಂಬ ಅನುಮಾನ ಪೊಲೀಸರಿಗೆ ಬಂದಿತ್ತು ತೌಫಿಕ್ ಅವರ ವ್ಯವಹಾರದ ಬಗ್ಗೆ ತಿಳಿದಿದ್ದ ಆತ ದುಡ್ಡಿನೊಂದಿಗೆ ಇದೇ ದಾರಿಯಲ್ಲಿ ಬರುವುದರ ಮಾಹಿತಿ ಹೊಂದಿದ್ದ ಎನ್ನಲಾಗಿದೆ. ಈ ವಿಷಯ ತಿಳಿಯುತ್ತಲೇ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ವೇಳೆ ಆರೋಪಿಗಳು ಭದ್ರಾವತಿಯಲ್ಲಿ ಅಡಗಿರುವುದು ಗೊತ್ತಾಗಿದೆ. ಬಳಿಕ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ₹30 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ದರೋಡೆಯಾಗಿದ್ದ ₹58 ಲಕ್ಷದಲ್ಲಿ ಉಳಿದ ಹಣದ ಪತ್ತೆ ಹಾಗೂ ಕೃತ್ಯದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಬಂಧಿಸುವ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ದಯಾಮ ಅವರ ನಿರ್ದೇಶನದಂತೆ ಹೆಚ್ಚುವರಿ ಎಸ್ಪಿ ಜಯರಾಮ್ ಹಾಗೂ ಡಿವೈಎಸ್ಪಿ ಪರುಶರಾಮಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.ಕಡೂರು–ಬೀರೂರು ವೃತ್ತ ನಿರೀಕ್ಷಕ ಮಧು, ಪಿಎಸ್‌ಐಗಳಾದ ಸಜಿತ್ ಕುಮಾರ್ ಮತ್ತು ಧನಂಜಯ್ ಹಾಗೂ ಸಿಬ್ಬಂದಿಗಳಾದ ಮಧು, ಹರೀಶ್, ದೇವರಾಜ್, ಬೀರೇಶ್, ಸಿದ್ದನಾಯ್, ರಿಯಾಜ್, ಸ್ವಾಮಿ, ರಾಜಪ್ಪ, ಕೃಷ್ಣಮುರ್ತಿ ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor