ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ | ಶಿವಮೊಗ್ಗ | ಉಡಾನ್ ಯೋಜನೆಯ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ನವೆಂಬರ್ 21ರಿಂದ ವಿಮಾನ ಹಾರಾಟ ಸ್ಥಗಿತಗೊಳ್ಳಲಿದೆ. ವಿಮಾನ ಸೇವೆ ಪುನರಾರಂಭವಾಗಲು ಕನಿಷ್ಠ 3 ತಿಂಗಳು ಬೇಕಾಗಬಹುದು ಎಂದು ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ನಂಜಯ್ಯನಮಠ ತಿಳಿಸಿದ್ದಾರೆ. ಈ ಮೂಲಕ ಏರ್ಪೋರ್ಟ್ಗೆ ಕೊನೆ ಮೊಳೆ ಬೀಳುವುದನ್ನ ಖಚಿತ ಪಡಿಸಿದ್ದಾರೆ.
ಗುರುವಾರ ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2026ಕ್ಕೆ ಉಡಾನ್ ಯೋಜನೆಯ ಅವಧಿ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 21ರಿಂದ ವಿಮಾನ ಹಾರಾಟ ಸ್ಥಗಿತಗೊಳ್ಳಲಿದೆ. ಯೋಜನೆಯನ್ನು ಮುಂದುವರಿಸುವಂತೆ ರಾಜ್ಯದ ಅಧಿಕಾರಿಗಳು ದೆಹಲಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ತಾವೂ ದೆಹಲಿಗೆ ತೆರಳಿ ಯೋಜನೆಯ ಮುಂದುವರಿಕೆಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಸೇವೆಯನ್ನು ಮತ್ತೆ ಆರಂಭಿಸಲು ಕನಿಷ್ಠ 3 ತಿಂಗಳ ಕಾಲಾವಕಾಶ ಬೇಕಾಗಬಹುದು. ವಿಮಾನ ನಿಲ್ದಾಣದಲ್ಲಿ ಪುನಃ ವಿಮಾನ ಹಾರಾಟ ಆರಂಭಿಸಲು ಅಗತ್ಯವಿರುವ ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಉಡಾನ್ ಯೋಜನೆಯ ಮುಂದುವರಿಕೆಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ವಿವರಿಸಿದರು.
ಶಿವಮೊಗ್ಗದಿಂದ 13 ಮಾರ್ಗಗಳಿಗೆ ವಿಮಾನ ಸೇವೆ ಆರಂಭಿಸಲು ಮನವಿ
ಶಿವಮೊಗ್ಗ ವಿಮಾನ ನಿಲ್ದಾಣದಿಂದ ದೇಶದ ವಿವಿಧ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕೆಎಸ್‌ಐಐಡಿಸಿ ವತಿಯಿಂದ 13 ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ಮನವಿ ಸಲ್ಲಿಸಲಾಗಿದೆ. ಶಿವಮೊಗ್ಗದಿಂದ ಬೆಂಗಳೂರು, ಹೈದರಾಬಾದ್, ಗೋವಾ, ತಿರುಪತಿ, ಮುಂಬೈ, ಪುಣೆ, ಮೈಸೂರು, ಸೂರತ್, ಕೊಲ್ಲಾಪುರ, ಕೊಚ್ಚಿ, ಮಂಗಳೂರು, ಅಹಮದಾಬಾದ್ ಹಾಗೂ ಚೆನ್ನೈ ನಗರಗಳಿಗೆ ವಿಮಾನ ಸೇವೆ ಒದಗಿಸುವಂತೆ ಕೋರಲಾಗಿದೆ ಎಂದು ನಂಜಯ್ಯನಮಠ ತಿಳಿಸಿದರು.
ಸಂಸದ ಬಿ.ವೈ. ರಾಘವೇಂದ್ರ ಅವರೊಂದಿಗೆ ಚರ್ಚೆ
ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಸೇವೆ ಮುಂದುವರಿಸುವ ವಿಚಾರವಾಗಿ ಸಂಸದ ರಾಘವೇಂದ್ರ ಅವರನ್ನು ಸಂಪರ್ಕಿಸಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ವಿಮಾನ ಸೇವೆ ಪುನರಾರಂಭಕ್ಕೆ ಸಂಬಂಧಿಸಿದ ಪ್ರಯತ್ನಗಳನ್ನು ಸಂಸದರಿಗೂ ಬಿಡಲಾಗಿದೆ. ಉಡಾನ್ ಯೋಜನೆಯನ್ನು ಮುಂದುವರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ವಿಮಾನ ಹಾರಾಟ ಸ್ಥಗಿತಗೊಂಡರೂ 80 ನೌಕರರ ಸೇವೆ ಮುಂದುವರಿಕೆ
ವಿಮಾನ ನಿಲ್ದಾಣದಲ್ಲಿ ಮುಂದಿನ 3 ತಿಂಗಳ ಕಾಲ ವಿಮಾನ ಹಾರಾಟ ಸ್ಥಗಿತಗೊಂಡರೂ ಅಲ್ಲಿ ಕಾರ್ಯನಿರ್ವಹಿಸುತ್ತಿರುವ 80 ಮಂದಿ ನೌಕರರನ್ನು ಮುಂದುವರಿಸಲಾಗುತ್ತದೆ. ಈ ಸಿಬ್ಬಂದಿಯ ವೇತನಕ್ಕಾಗಿ ಪ್ರತಿ ತಿಂಗಳು ₹95 ಲಕ್ಷ ವೆಚ್ಚವಾಗುತ್ತಿದೆ. ವಿಮಾನ ಸೇವೆ ಸ್ಥಗಿತಗೊಂಡ ಅವಧಿಯಲ್ಲಿಯೂ ನೌಕರರನ್ನು ಕೆಲಸದಲ್ಲಿ ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಉಡಾನ್ ಯೋಜನೆಯಡಿ ಕೇಂದ್ರ ಸರ್ಕಾರ ಶೇ.80ರಷ್ಟು ಹಾಗೂ ರಾಜ್ಯ ಸರ್ಕಾರ ಶೇ.20ರಷ್ಟು ಅನುದಾನ ನೀಡುತ್ತದೆ. ವಿಮಾನ ನಿಲ್ದಾಣದ ನಿರ್ವಹಣೆ ಮತ್ತು ಆರ್ಥಿಕ ವೆಚ್ಚಗಳನ್ನು ರಾಜ್ಯ ಸರ್ಕಾರದ ಆರ್ಥಿಕ ನೀತಿಗಳಿಗೆ ಅನುಗುಣವಾಗಿ ನಿರ್ವಹಿಸಬೇಕಾಗುತ್ತದೆ. ಮುಂದಿನ 3 ತಿಂಗಳ ನಂತರ ವಿಮಾನ ಸೇವೆ ಪುನರಾರಂಭವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ನೈಟ್ ಲ್ಯಾಂಡಿಂಗ್ ಕಾಮಗಾರಿ ಶೇ.95ರಷ್ಟು ಪೂರ್ಣ
- ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ವಿಮಾನ ಇಳಿಯಲು ಅನುಕೂಲವಾಗುವ ನೈಟ್ ಲ್ಯಾಂಡಿಂಗ್ ವ್ಯವಸ್ಥೆಯ ಕಾಮಗಾರಿ ಶೇ.95ರಷ್ಟು ಪೂರ್ಣಗೊಂಡಿದೆ.
- ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಬಳಿಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
- ಡಿಜಿಸಿಎ ಅಧಿಕಾರಿಗಳು ತಮ್ಮದೇ ವಿಮಾನದ ಮೂಲಕ ಪರೀಕ್ಷಾರ್ಥ ಹಾರಾಟ ನಡೆಸಿ ವರದಿ ಸಲ್ಲಿಸಲಿದ್ದಾರೆ. ಪರೀಕ್ಷೆಯ ನಂತರ ಅಗತ್ಯ ಪ್ರಮಾಣಪತ್ರ ದೊರೆತರೆ ರಾತ್ರಿ ವೇಳೆ ವಿಮಾನ ಇಳಿಯಲು ಅನುಮತಿ ಸಿಗಲಿದೆ ಎಂದು ನಂಜಯ್ಯನಮಠ ವಿವರಿಸಿದರು.
