ಸುದ್ದಿಯ ಸ್ಥಳ: Bhadravati, Shivamogga, Karnataka · Narasimharajapura, Chikkamagaluru, Karnataka
ಮಲೆನಾಡು ಟುಡೆ ಸುದ್ದಿ |ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಡೆದ ಮೂರು ಪ್ರತ್ಯೇಕ ಘಟನೆಗಳು ಗಮನ ಸೆಳೆದಿವೆ. ರಿಪ್ಪನ್‌ಪೇಟೆ ಸಮೀಪದ ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ ಕಳ್ಳರು ಮಕ್ಕಳಿಗಾಗಿ ಸಂಗ್ರಹಿಸಿಟ್ಟಿದ್ದ ಮೊಟ್ಟೆಗಳನ್ನು ಬೇಯಿಸಿ ತಿಂದು ಪರಾರಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯದಲ್ಲೇ 41 ವರ್ಷದ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮತ್ತೊಂದೆಡೆ, ಭದ್ರಾವತಿ ತಾಲೂಕಿನ ದೋಣಭಘಟ್ಟ–ಡೈರಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಡಿಕ್ಕಿಯಾಗಿ 48 ವರ್ಷದ ಬೈಕ್ ಸವಾರ ಮೃತಪಟ್ಟಿದ್ದಾರೆ.
ಶಿವಮೊಗ್ಗ ಮಾರ್ನಿಂಗ್ ನ್ಯೂಸ್ | ಅಂಗನವಾಡಿಯ ಹಿಂಬಾಗಿಲು ಮುರಿದು ಮೊಟ್ಟೆ ಬೇಯಿಸಿ ತಿಂದ ಕಳ್ಳರು!
ರಿಪ್ಪನ್‌ಪೇಟೆ ಸಮೀಪದ ದಡಫೆಸಲ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕಳ್ಳತನ ನಡೆದಿದ್ದು, ಮಕ್ಕಳಿಗೆ ನೀಡಲು ಇರಿಸಿದ್ದ ಮೊಟ್ಟೆಗಳನ್ನು ಕಳ್ಳರು ಅಲ್ಲಿಯೇ ಬೇಯಿಸಿಕೊಂಡು ತಿಂದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ದೀಪಾವಳಿ ಬಲಿಪಾಡ್ಯಮಿ ಪ್ರಯುಕ್ತ ಮಂಗಳವಾರ ಅಂಗನವಾಡಿಗೆ ರಜೆ ನೀಡಲಾಗಿತ್ತು. ರಜೆಯ ನಂತರ ಬುಧವಾರ ಬೆಳಿಗ್ಗೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಕೇಂದ್ರಕ್ಕೆ ಬಂದಾಗ ಹಿಂಬಾಗಿಲು ತೆರೆದಿರುವುದು ಕಂಡುಬಂದಿದೆ. ಅನುಮಾನಗೊಂಡು ಒಳಗೆ ಹೋಗಿ ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಅಂಗನವಾಡಿಯ ಹಿಂಬಾಗಿಲನ್ನು ಮುರಿದು ಒಳಪ್ರವೇಶಿಸಿದ್ದ ಕಳ್ಳರು, ಕೇಂದ್ರದಲ್ಲಿದ್ದ ಡಬ್ಬಗಳಲ್ಲಿನ ಆಹಾರ ಪದಾರ್ಥಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಅಲ್ಲದೆ, ಮಕ್ಕಳಿಗೆ ವಿತರಿಸಲು ಸಂಗ್ರಹಿಸಿಟ್ಟಿದ್ದ ಮೊಟ್ಟೆಗಳನ್ನು ಅಲ್ಲಿನ ಗ್ಯಾಸ್ ಒಲೆ ಬಳಸಿಕೊಂಡು ಬೇಯಿಸಿ ತಿಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಎನ್‌ಆರ್‌ಪುರ ಬಸ್ ನಿಲ್ದಾಣದ ಶೌಚಾಲಯದಲ್ಲೇ ಹೆಣ್ಣು ಮಗುವಿಗೆ ಜನ್ಮ
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ ಮಹಿಳೆಯೊಬ್ಬರಿಗೆ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯದಲ್ಲೇ ಹೆರಿಗೆಯಾಗಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಮಹಿಳೆಯೊಬ್ಬರು ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ಅವರು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ವಿಚಾರಣೆ ಮುಂದುವರಿಸಿದ್ದಾರೆ
ಭದ್ರಾವತಿಯಲ್ಲಿ ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿ; 48 ವರ್ಷದ ಸವಾರ ಸಾವು
ಭದ್ರಾವತಿ ತಾಲೂಕಿನ ಬಿಳಕಿ ತಾಂಡಾ ಸಮೀಪದ ದೋಣಭಘಟ್ಟ–ಡೈರಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ದೋಣಭಘಟ್ಟ ಗ್ರಾಮದ ಮಹಬೂಬ್ ಸಾಬ್ (48) ಮೃತಪಟ್ಟಿದ್ದಾರೆ. ಅಡಿಕೆ ಚೇಣಿ ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಮಹಬೂಬ್ ಸಾಬ್ರ ಬೈಕ್‌ಗೆ ಡೈರಿ ಕಡೆಯಿಂದ ದೋಣಭಘಟ್ಟದತ್ತ ಬರುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಪರಿಣಾಮ ಮಹಬೂಬ್ ಸಾಬ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ಆಗಿದೆ.
