
ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ತಾಲೂಕಿನ ಇಚವಾಡಿ ಗ್ರಾಮದ ಭತ್ತದ ಗದ್ದೆಯ ಬದುವಿನಲ್ಲಿ ವಿದ್ಯುತ್ ಶಾಕ್ಗೆ ಕಾಡಾನೆ ಸಾವು ಮೃತಪಟ್ಟಿರುವ ಬಗ್ಗೆ ಮಲೆನಾಡು ಟುಡೆ ಇವತ್ತು ಬೆಳಗ್ಗೆ ವರದಿ ಮಾಡಿತ್ತು. ಇದೀಗ ಈ ಪ್ರಕರಣ ಸಂಬಂಧ ಅರಣ್ಯ ಇಲಾಖೆ ಪ್ರಕಟಣೆ ನೀಡಿದೆ.



ತನ್ನ ಪ್ರಕಟಣೆಯಲ್ಲಿ ಅರಣ್ಯ ಇಲಾಖೆ ಭತ್ತದ ಬೆಳೆಗೆ ಹಂದಿಗಳು ಬರಲಾರಂಭಿಸಿದ್ದರಿಂದ ಗದ್ದೆಯ ಬದುವಿನಲ್ಲಿ ತಂತಿ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಿರುವುದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದೆ.
ವಿದ್ಯುತ್ ಶಾಕ್ಗೆ ಕಾಡಾನೆ ಸಾವು , ಅರಣ್ಯ ಇಲಾಖೆ ಪ್ರಕಟಣೆಯ ವಿವರ
- ಶಿವಮೊಗ್ಗ ಅರಣ್ಯ ವಿಭಾಗದ ಶಂಕರ ವಲಯ ವ್ಯಾಪ್ತಿಯ ಇಚವಾಡಿ ಗ್ರಾಮದ ಸರ್ವೆ ನಂಬರ್ 16ರ ಭತ್ತದ ಗದ್ದೆಯ ಬದುವಿನಲ್ಲಿ ಗಂಡಾನೆಯೊಂದು ಮೃತಪಟ್ಟಿರುವುದು ಕಂಡುಬಂದಿದೆ. ವಿಷಯ ತಿಳಿದು ಸ್ಥಳ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮೃತಪಟ್ಟ ಆನೆಯ ಸುತ್ತಮುತ್ತ ತಂತಿ ಬೇಲಿ ಇರುವುದು ಕಂಡುಬಂದಿದೆ. ಅಲ್ಲದೆ, ಸಮೀಪದಲ್ಲಿಯೇ ವಿದ್ಯುತ್ ಕಂಬವೂ ಇರುವುದು ಗಮನಕ್ಕೆ ಬಂದಿದೆ.
- ಸ್ಥಳದಲ್ಲಿ ಕಂಡುಬಂದ ತಂತಿ ಬೇಲಿ ಹಾಗೂ ವಿದ್ಯುತ್ ಕಂಬದ ಆಧಾರದಲ್ಲಿ ಗಂಡಾನೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವುದಾಗಿ ಅರಣ್ಯ ಇಲಾಖೆ ಪ್ರಾಥಮಿಕವಾಗಿ ಗುರುತಿಸಿದೆ.
- ಘಟನೆಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡ ಅರಣ್ಯಾಧಿಕಾರಿಗಳು ಅಲಿಮಿಯಾ ಬಿನ್ ಫೀರ್ ಸಮೀಯಾರನ್ನು ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆತಂದು ವಿಚಾರಣೆ ನಡೆಸಿದಾಗ ಗದ್ದೆಯ ಬದುವಿನಲ್ಲಿ ವಿದ್ಯುತ್ ತಂತಿ ಅಳವಡಿಸಿರುವ ಕುರಿತು ಮಾಹಿತಿ ನೀಡಿದ್ದಾನೆ
- ಭತ್ತದ ಬೆಳೆಯು ತೆನೆ ಬಿಡುವ ಹಂತದಲ್ಲಿದ್ದು, ಇತ್ತೀಚಿನ ದಿನಗಳಲ್ಲಿ ಹಂದಿಗಳು ಗದ್ದೆಗೆ ಬರಲಾರಂಭಿಸಿದ್ದವು. ಈ ಹಿನ್ನೆಲೆಯಲ್ಲಿ ಹಿಂದಿನ ದಿನ ಗದ್ದೆಯ ಬದುವಿನ ಮೇಲೆ ತಂತಿ ಅಳವಡಿಸಿ ಅದಕ್ಕೆ ವಿದ್ಯುತ್ ಸಂಪರ್ಕ ನೀಡಿರುವುದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ
- ಹಂದಿಗಳಿಂದ ಭತ್ತದ ಬೆಳೆಗೆ ಉಂಟಾಗುವ ಹಾನಿಯನ್ನು ತಡೆಯುವ ಉದ್ದೇಶದಿಂದ ಗದ್ದೆಯ ಬದುವಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಲಾಗಿತ್ತು ಎಂಬುದು ಆರೋಪಿಯ ಹೇಳಿಕೆಯಿಂದ ತಿಳಿದುಬಂದಿದೆ. ಇದೇ ಪ್ರದೇಶದಲ್ಲಿ ಗಂಡಾನೆ ಮೃತಪಟ್ಟಿದ್ದು, ವಿದ್ಯುತ್ ಸ್ಪರ್ಶದಿಂದ ಸಾವು ಸಂಭವಿಸಿದೆ.
- ಪ್ರಕರಣಕ್ಕೆ ಸಂಬಂಧಿಸಿದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಕಲಂ 9ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಅರಣ್ಯ ಇಲಾಖೆ ಹೆಚ್ಚಿನ ವಿಚಾರಣೆ ನಡೆಸುತ್ತಿದೆ.
ಇದೇ ವೇಳೆ ಅಕ್ರಮ ವಿದ್ಯುತ್ ಬಳಕೆಗೆ ಸಂಬಂಧಿಸಿದಂತೆ ವಿದ್ಯುತ್ ಕಾಯ್ದೆಯಡಿ (Electricity Act) ಪ್ರಕರಣ ದಾಖಲಿಸಿಕೊಳ್ಳುವಂತೆ ಮೆಸ್ಕಾಂಗೆ ದೂರು ನೀಡಲಾಗಿದೆ. ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಕಾನೂನು ಕ್ರಮಕ್ಕಾಗಿ ವಿದ್ಯುತ್ ಇಲಾಖೆಗೆ ದೂರು ಸಲ್ಲಿಸಲಾಗುವುದು. ಮೃತಪಟ್ಟ ಗಂಡಾನೆಯ ಮರಣೋತ್ತರ ಪರೀಕ್ಷೆಯನ್ನು ನಿಯಮಿತ ಕಾರ್ಯವಿಧಾನದ (SOP) ಪ್ರಕಾರ ನಡೆಸಲಾಗುವುದು ಎಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.


