ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಬಗೆಯ ದೇಶಿ ಹಾಗೂ ವಿದೇಶಿ ಹಣ್ಣುಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾ ಹಾಪ್‌ಕಾಮ್ಸ್ ವತಿಯಿಂದ ನೂತನ ಹಣ್ಣು ಮತ್ತು ಜ್ಯೂಸ್ ಮಾರಾಟ ಮಳಿಗೆಯನ್ನು ಆರಂಭಿಸಲಾಗುತ್ತಿದೆ. ಹಾಪ್‌ಕಾಮ್ಸ್ ಪ್ರಧಾನ ಕಚೇರಿಯ ಕೆಳಭಾಗದಲ್ಲಿ ನವೆಂಬರ್ 6ರಂದು ಬೆಳಗ್ಗೆ 11 ಗಂಟೆಗೆ ಈ ಮಳಿಗೆಯ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಆರ್. ವಿಜಯಕುಮಾರ್ ತಿಳಿಸಿದ್ದಾರೆ.
- ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಆಯಾ ಸೀಸನ್ಗೆ ತಕ್ಕಂತೆ ಸಿಗುವ ಎಲ್ಲಾ ಬಗೆಯ ಹಣ್ಣುಗಳನ್ನು ಈ ಮಳಿಗೆಯಲ್ಲಿ ಮಾರಾಟಕ್ಕೆ ಇರಿಸಲು ಉದ್ದೇಶಿಸಲಾಗಿದೆ.
- ಮಾರುಕಟ್ಟೆಯಲ್ಲಿ ದೊರೆಯುವ ಲಿಚ್ಚಿ, ರಾಂಬುಟಾನ್, ಲಾಂಗನ್, ಆಸ್ಟ್ರೇಲಿಯನ್ ದ್ರಾಕ್ಷಿ, ಸ್ಟಾರ್‌ಫ್ರೂಟ್, ಡ್ರ್ಯಾಗನ್ ಫ್ರೂಟ್, ಚೆರ್ರಿ, ಮ್ಯಾಂಡರಿನ್, ಕಿವಿ, ಸೀಡ್‌ಲೆಸ್ ದ್ರಾಕ್ಷಿ, ನೇರಳೆ, ಬ್ಲೂಬೆರ್ರಿ ಹಾಗೂ ಸ್ಟ್ರಾಬೆರಿಯಂತಹ ಅನೇಕ ಬಗೆಯ ದೇಶಿ ಮತ್ತು ವಿದೇಶಿ ಹಣ್ಣುಗಳು ಇಲ್ಲಿ ಲಭ್ಯವಾಗಲಿವೆ.
- ಇದರೊಂದಿಗೆ ತಾಜಾ ಹಣ್ಣಿನ ಜ್ಯೂಸ್ ಕೂಡ ಮಾರಾಟ ಮಾಡಲಾಗುವುದು. ಗುಣಮಟ್ಟದ ಹಣ್ಣುಗಳನ್ನು ಗ್ರಾಹಕರಿಗೆ ಒಂದೇ ಕಡೆ ಒದಗಿಸುವುದು ಸಂಸ್ಥೆಯ ಪ್ರಮುಖ ಆಶಯವಾಗಿದೆ ಎಂದು ವಿವರಿಸಿದರು.
ಸಾವಯವ ಗೊಬ್ಬರದ ಪ್ರಾಜೆಕ್ಟ್
ಇನ್ನೂ ಇದೇ ವೇಳೆ ಹಾಪ್ ಕಾಮ್ಸ್ ಸಾವಯವ ಗೊಬ್ಬರದ ಬಗ್ಗೆ ಮಾತನಾಡಿದ ವಿಜಯರ್ ಕುಮಾರ್, ಇತ್ತೀಚೆಗೆ ಆಯೋಜಿಸಲಾಗಿದ್ದ ಕೃಷಿ ಮೇಳದಲ್ಲಿ ಪ್ರಗತಿಪರ ಕೃಷಿಕ ಕೆ. ನಾಗರಾಜ್ ಅವರ ತೋಟದಲ್ಲಿ ಸಾವಯವ ಪದ್ಧತಿಯ ಮೂಲಕ ಬೆಳೆಯಲಾಗಿದ್ದ ಸೀಬೆಹಣ್ಣನ್ನು ಪ್ರದರ್ಶಿಸಲಾಗಿತ್ತು. ಈ ಹಣ್ಣಿಗೆ ಸಾರ್ವಜನಿಕರಿಂದ ಉತ್ತಮ ಬೇಡಿಕೆ ವ್ಯಕ್ತವಾಗಿ ಸುಮಾರು 10 ಕ್ವಿಂಟಲ್ ಹಣ್ಣು ಮಾರಾಟವಾಗಿದೆ. ಇದು ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡಿದೆ. ಹಾಪ್‌ಕಾಮ್ಸ್‌ನ ಸಾವಯವ ಗೊಬ್ಬರವನ್ನು ಬಳಸಿಯೇ ಈ ಹಣ್ಣುಗಳನ್ನು ಬೆಳೆಯಲಾಗಿತ್ತು ಎಂದು ಮಾಹಿತಿ ನೀಡಿದರು.
ಹಾಪ್‌ಕಾಮ್ಸ್ ವತಿಯಿಂದ ರೈತ ಮಿತ್ರ ಹಾಗೂ ರೈತ ಸ್ನೇಹಿ ಎಂಬ ಹೆಸರಿನಲ್ಲಿ ಸಾವಯವ ಗೊಬ್ಬರವನ್ನು ಮಾರಾಟ ಮಾಡಲಾಗುತ್ತಿದ್ದು, ಇದಕ್ಕೆ ಉತ್ತಮ ಬೇಡಿಕೆ ಕಂಡುಬಂದಿದೆ. ಕಳೆದ 6 ರಿಂದ 7 ತಿಂಗಳ ಅವಧಿಯಲ್ಲಿ 40 ಕೆ.ಜಿ. ತೂಕದ ಸುಮಾರು 50 ರಿಂದ 60 ಸಾವಿರ ಚೀಲಗಳು ಮಾರಾಟವಾಗಿವೆ. ಮಳೆಯ ಕೊರತೆಯ ಕಾರಣದಿಂದ ಮಾರಾಟದ ಪ್ರಮಾಣದ ಮೇಲೆ ತುಸು ಪರಿಣಾಮ ಬೀರಿದ್ದರೂ, ರೈತರಿಂದ ಗೊಬ್ಬರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಮ್ಮೆ ಖರೀದಿಸಿದವರು ಮತ್ತೆ ಬಂದು ಪಡೆಯುತ್ತಿದ್ದಾರೆ ಎಂದು ಹೇಳಿದರು.
ಈ ಸಾವಯವ ಗೊಬ್ಬರವನ್ನು ಹೊಳಲ್ಕೆರೆ ಸಮೀಪದ ಘಟಕದಲ್ಲಿ ತಯಾರಿಸಲಾಗುತ್ತಿದೆ. 40 ಕೆ.ಜಿ. ಚೀಲಕ್ಕೆ 370 ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ. ಶಿವಮೊಗ್ಗ ಮತ್ತು ಭದ್ರಾವತಿ ಭಾಗದ ರೈತರಿಗೆ ಯಾವುದೇ ಸಾಗಣೆ ವೆಚ್ಚವಿಲ್ಲದೆ ಈ ಗೊಬ್ಬರವನ್ನು ವಿತರಿಸಲಾಗುತ್ತಿದೆ. ಸಂಸ್ಥೆಯು ಹೆಚ್ಚಿನ ಲಾಭ ಗಳಿಸುವುದಕ್ಕಿಂತ ರೈತರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಗೊಬ್ಬರವನ್ನು ಒದಗಿಸುವ ಕಡೆಗೆ ಹೆಚ್ಚಿನ ಆದ್ಯತೆ ನೀಡಿದೆ. ಚಿಕ್ಕಮಗಳೂರು, ಕೊಪ್ಪ ಸೇರಿದಂತೆ ಇತರ ಜಿಲ್ಲೆಗಳಿಂದಲೂ ಗೊಬ್ಬರಕ್ಕೆ ಬೇಡಿಕೆ ಬರುತ್ತಿದ್ದು, ಮಳೆ ಅನುಕೂಲಕರವಾದರೆ ಮಾರಾಟದ ಪ್ರಮಾಣ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ವಿಜಯಕುಮಾರ್ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್. ಅಕ್ಷಯ್, ನಿರ್ದೇಶಕರುಗಳಾದ ಶರತ್ ಮರಿಯಪ್ಪ, ನಾಗೇಶ್ ನಾಯ್ಕ, ಎಚ್.ಎನ್. ನಾಗರಾಜ್, ಕಾಂತರಾಜ್, ಮೋಹನ್ ಗೌಡ ಹಾಗೂ ಮಳಿಗೆಯ ನಿರ್ವಹಣೆಯ ಹೊಣೆಗಾರಿಕೆ ಹೊಂದಿರುವ ಕೃಷಿಕ ಕೆ. ನಾಗರಾಜ್ ಉಪಸ್ಥಿತರಿದ್ದರು.
