ಮರಳಿ ಬಿಜೆಪಿಗೆ ಈಶ್ವರಪ್ಪ? ವಿಜಯೇಂದ್ರ-ಕಾಂತೇಶ್​ ಮಾತುಕತೆ!? ಯಡಿಯೂರಪ್ಪ ಜೊತೆ ದ್ವೇಷವಿಲ್ಲ! ವೈರಲ್​ ಇಂಟರ್​ ವ್ಯೂನಲ್ಲಿ ಮಾಜಿ ಡಿಸಿಎಂರ ಮನದಾಳದ ಮಾತುಗಳು ಸ್ಫೋಟ

ಹಂಚಿಕೊಳ್ಳಿ
WhatsApp Facebook X Telegram
Ks eshwarappa
Ks eshwarappa

ಮಲೆನಾಡು ಟುಡೆ ಸುದ್ದಿ / ಪತ್ರಕರ್ತೆ ಸೌಖ್ಯ ಗಾಂಕರ್ ಅವರ ರಿವ್ಯೂ (Review by Soukhya Gaonkar) ಯೂಟ್ಯೂಬ್ ಚಾನೆಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ತಮ್ಮ ರಾಜಕೀಯ ಭವಿಷ್ಯ ಹಾಗೂ ಬಿ.ಎಸ್. ಯಡಿಯೂರಪ್ಪನವರೊಂದಿಗಿನ ಬಾಂಧವ್ಯ, ಬಿಜೆಪಿಗೆ ಮರಳುವ ಸಾಧ್ಯತೆ ಹಾಗೂ ಹಿಂದುತ್ವ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸ್ಫೋಟಕವಾಗಿ ತೆರೆದುಕೊಂಡಿದ್ದಾರೆ.

ಶಿವಮೊಗ್ಗ ರಾಜಕಾರಣ ಮತ್ತು ಬಿ.ಎಸ್. ಯಡಿಯೂರಪ್ಪನವರೊಂದಿಗಿನ ಸಂಬಂಧದ ಕುರಿತು ಮಾತನಾಡಿದ ಈಶ್ವರಪ್ಪ, ನನಗೂ ಯಡಿಯೂರಪ್ಪನವರಿಗೂ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ನಮ್ಮಿಬ್ಬರ ನಡುವೆ ಅಹಂ ಕೂಡ ಇಲ್ಲ. ನಾನು ನಂಬಿಕೊಂಡಿದ್ದ ಸಿದ್ಧಾಂತಕ್ಕೆ ಪೆಟ್ಟಾದಾಗ, ಕುಟುಂಬ ರಾಜಕಾರಣ ಮತ್ತು ಜಾತಿ ವಿಚಾರಗಳು ಮುನ್ನೆಲೆಗೆ ಬಂದಾಗ ಮಾತ್ರ ನಾನು ಅದರ ವಿರುದ್ಧ ಧ್ವನಿ ಎತ್ತಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಬೆಳೆಯುವಲ್ಲಿ ಯಡಿಯೂರಪ್ಪನವರ ಪಾತ್ರ ದೊಡ್ಡದಿದೆ. ಇತ್ತೀಚೆಗಷ್ಟೇ ಅವರ ಮೊಮ್ಮಗನ ಮದುವೆಗೆ ಆಹ್ವಾನಿಸಿದ್ದರು, ನಾನು ಹೋಗಿಬಂದಿದ್ದೇನೆ. ನಾವಿಬ್ಬರೂ ದ್ವೇಷಿಗಳಲ್ಲ ಎಂದಿದ್ದಾರೆ.

ಇನ್ನೂ ಮತ್ತೆ ಬಿಜೆಪಿಗೆ ಸೇರ್ಪಡೆಯಾಗುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ನನ್ನ ಪುತ್ರ ಕಾಂತೇಶ್ ಜೊತೆ ಈಗಾಗಲೇ ಮಾತನಾಡಿದ್ದಾರೆ. ಹಳೆಯದನ್ನು ಮರೆತು ಬನ್ನಿ ಒಳ್ಳೆಯದಾಗುತ್ತದೆ ಎಂದು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಸದ್ಯ ಪಕ್ಷದಲ್ಲಿ ಮೂಲೆಗುಂಪಾಗಿರುವ ಹಿರಿಯರನ್ನು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸಿ, ಪಕ್ಷವನ್ನು ಸರಿಪಡಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಇತ್ತೀಚೆಗೆ ಸಮಾಜವಾದಿ ಪಾರ್ಟಿಯ ಅಖಿಲೇಶ್ ಯಾದವ್ ಹಾಗೂ ಜನಸೇನಾ ಪಕ್ಷದ ಪವನ್ ಕಲ್ಯಾಣ್ ಅವರು ತಮ್ಮ ಪಕ್ಷಕ್ಕೆ ಸೇರುವಂತೆ ಆಫರ್ ನೀಡಿದ್ದರು. ಆದರೆ, ನಾನು ಬದುಕಿರುವವರೆಗೂ ಹಿಂದುತ್ವ ಮತ್ತು ಬಿಜೆಪಿಯಲ್ಲೇ ಇರುತ್ತೇನೆ, ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿದ್ದೇನೆ ಎಂದು ತಿಳಿಸಿದ್ದಾರೆ.

ತಮ್ಮ ಮೇಲಿರುವ ಮುಸ್ಲಿಂ ವಿರೋಧಿ ಹಣೆಪಟ್ಟಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಿವಮೊಗ್ಗದಲ್ಲಿ ನಾನು ಮುಸಲ್ಮಾನರ ಮನೆಗೆ ಹೋಗಿ ವೋಟ್ ಕೇಳಿಲ್ಲದಿದ್ದರೂ ಅವರು ನನಗೆ ಮತ ಹಾಕಿದ್ದಾರೆ. ಅವರ ಕಷ್ಟಗಳಿಗೆ ನಾನು ಸ್ಪಂದಿಸಿದ್ದೇನೆ. ನಾನು ಮುಸಲ್ಮಾನರ ದ್ವೇಷಿಯಲ್ಲ ಯಾರು ಮತಾಂಧರಿದ್ದಾರೋ, ಯಾರು ಗೋಹತ್ಯೆ ಮಾಡುತ್ತಾರೋ, ದೇಶದ್ರೋಹಿ ಕೃತ್ಯಗಳಿಗೆ ಬೆಂಬಲ ನೀಡುತ್ತಾರೋ ಅಂತವರ ವಿರೋಧಿ ಅಷ್ಟೇ. ಪಾಕಿಸ್ತಾನ ಬೆಂಬಲಿತ ಉಗ್ರರು ಕಾಶ್ಮೀರದ ಲಾಲ್ ಚೌಕದಲ್ಲಿ ತ್ರಿವರ್ಣ ಧ್ವಜ ಹಾರಿಸಿದರೆ ಬಹುಮಾನ ನೀಡುತ್ತೇವೆ ಎಂದು ಸವಾಲು ಹಾಕಿದ್ದಾಗ, ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕರ್ನಾಟಕದಿಂದ ವಿಶೇಷ ರೈಲಿನಲ್ಲಿ ತೆರಳಿ ಲಾಲ್ ಚೌಕದಲ್ಲಿ ಧ್ವಜ ಹಾರಿಸಿ ಬಂದೆವು ಎಂದು ಹಳೆಯ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.

ರಾಜ್ಯ ರಾಜಕಾರಣದ ಬಗ್ಗೆ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಕೇವಲ ವ್ಯಕ್ತಿಗಳ ಮೇಲೆ ನಿಂತಿರುವ ಪಕ್ಷ. ಸಿದ್ದರಾಮಯ್ಯನವರ ಕುರ್ಚಿಗೆ ಕುತ್ತು ಬರಲು ಸ್ಟಿಂಗ್ ಆಪರೇಷನ್’ ಕುತಂತ್ರವೇ ಕಾರಣವಾಗಿತ್ತು. ಕಾಂಗ್ರೆಸ್‌ನಲ್ಲೇ ಇರುವ ಅಧಿಕಾರಕಾಂಕ್ಷಿಗಳು ಈ ಕೆಲಸ ಮಾಡಿದ್ದರು. ಈಗ ಡಿಕೆ ಶಿವಕುಮಾರ್ ಕೂಡ ಇದೇ ವಿಚಾರವಾಗಿ ತಮ್ಮ ಸಚಿವರಿಗೆ ಹುಷಾರಾಗಿರಿ ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ಇದು ಕಾಂಗ್ರೆಸ್‌ನ ದೌರ್ಬಲ್ಯವನ್ನು ತೋರಿಸುತ್ತದೆ ಎಂದರು. ಮುಂದಿನ ಚುನಾವಣೆಯಲ್ಲಿ ತಾವು ಅಥವಾ ಪುತ್ರ ಕಾಂತೇಶ್ ಇಬ್ಬರಲ್ಲಿ ಒಬ್ಬರು ಮಾತ್ರ ಸ್ಪರ್ಧೆ ಮಾಡುತ್ತೇವೆ. ಪ್ರಧಾನಿ ಮೋದಿಯವರ ಒಂದು ಕುಟುಂಬಕ್ಕೆ ಒಂದು ಟಿಕೆಟ್ ನಿಯಮವನ್ನು ಪಾಲಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.ಇದಷ್ಟೆ ಅಲ್ಲದೆ ಇನ್ನಷ್ಟು ವಿಚಾರಗಳನ್ನ ಈಶ್ವರಪ್ಪನವರು ಹಂಚಿಕೊಂಡಿದ್ದು ಯೂಟ್ಯೂಬ್​ ಲಿಂಕ್​ನಲ್ಲಿ ಪೂರ್ತಿ ಸಂದರ್ಶನ ಗಮನಿಸಬಹುದು!

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor