ಮಲೆನಾಡು ಟುಡೆ ಸುದ್ದಿ / ಭದ್ರಾವತಿ /ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯಲ್ಲಿ ಎಜಿಎಂ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗೋವಿಂದರಾಜು (52) ಅವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಭದ್ರಾವತಿ ವಿಐಎಸ್ಎಲ್ ಎಜಿಎಂ ಗೋವಿಂದರಾಜು
ಸೇಲಂ ಮೂಲದ ಗೋವಿಂದರಾಜು ಅವರು ಕಳೆದ 10ರಿಂದ 12 ವರ್ಷಗಳಿಂದ ವಿಐಎಸ್ಎಲ್ ಕಾರ್ಖಾನೆಯಲ್ಲಿ ಎಜಿಎಂ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಿನ್ನೆ ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಪತ್ನಿಯನ್ನು ರೈಲಿಗೆ ಕಳುಹಿಸಿದ್ದ ಗೋವಿಂದರಾಜು ಅವರು ಬಳಿಕ ರಾತ್ರಿ ಮನೆಗೆ ವಾಪಸ್ಸಾಗಿದ್ದರು. ಇಂದು ಬೆಳಿಗ್ಗೆ ಸುಮಾರು 8 ಗಂಟೆಗೆ ತಮ್ಮ ಸ್ನೇಹಿತರಿಗೆ ಸಂದೇಶವನ್ನೂ ಕಳುಹಿಸಿದ್ದರು.

ಬಳಿಕ ಅವರು ಕಾರ್ಖಾನೆಗೆ ತೆರಳಿ ಕೆಲವು ಕಡತಗಳಿಗೆ ಸಹಿ ಹಾಕಬೇಕಿತ್ತು. ಆದರೆ ಕಾರ್ಖಾನೆಗೆ ಬಾರದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗೋವಿಂದರಾಜು ಅವರಿಗೆ ಹಲವು ಬಾರಿ ಕರೆ ಮಾಡಿದ್ದರು. ಅವರು ಕರೆ ಸ್ವೀಕರಿಸದ ಕಾರಣ ಸಹದ್ಯೋಗಿಗಳು ಅನುಮಾನಗೊಂಡಿದ್ದರು. ಇದೇ ವೇಳೆ ವಿದ್ಯುತ್ ಮೀಟರ್ ರೀಡರ್ ಕೂಡ ಮನೆಗೆ ಬಂದು ಬಾಗಿಲು ತಟ್ಟಿದ್ದರೂ ಯಾವುದೇ ಪ್ರತಿಕ್ರಿಯೆ ದೊರೆತಿರಲಿಲ್ಲ.
ನಂತರ ಕಾರ್ಖಾನೆಯ ಅಧಿಕಾರಿಗಳು ಮನೆಗೆ ಆಗಮಿಸಿ ಬಾಗಿಲು ತೆರೆದು ನೋಡಿದಾಗ ಗೋವಿಂದರಾಜು ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ನ್ಯೂಟೌನ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
