ಸಾಗರ : ಥಾರ್​ ಕಾರ್​ ಗೆದ್ದಿದ್ದೀರಿ ಎಂದು ಜ್ಯೂಸ್​​​ ಅಂಗಡಿ ಮಾಲೀಕನಿಗೆ ಮೀಶೋದಿಂದ ಬಂತು ಗಿಫ್ಟ್​ ಕಾರ್ಡ್​​​,  ನಂಬಿದ ವ್ಯಕ್ತಿ ಕಳೆದುಕೊಂಡಿದ್ದು, 23 ಲಕ್ಷ

ಹಂಚಿಕೊಳ್ಳಿ
WhatsApp Facebook X Telegram
CEN police station ಶಿವಮೊಗ್ಗ
CEN police station ಶಿವಮೊಗ್ಗ

ಮಲೆನಾಡು ಟುಡೇ ಸುದ್ದಿ / ಸಾಗರ : ಸಾಗರದ ಜ್ಯೂಸ್ ಅಂಗಡಿ ಮಾಲೀಕರೊಬ್ಬರಿಗೆ ಮೀಶೋ ಕಂಪನಿಯ ಹೆಸರಿನಲ್ಲಿ ಮಹೀಂದ್ರಾ ಥಾರ್ ಕಾರು ಗೆದ್ದಿದ್ದೀರಿ ಎಂದು ಗಿಫ್ಟ್ ಕಾರ್ಡ್ ಕಳುಹಿಸಿ, ಕೋಟ್ಯಂತರ ರೂಪಾಯಿ ಬಹುಮಾನದ ಆಮಿಷ ಒಡ್ಡಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ. ಈ ಕುರಿತು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ

ಸಾಗರದ ಜ್ಯೂಸ್ ಅಂಗಡಿ ಮಾಲೀಕರು ತಮ್ಮ ಅಂಗಡಿಯಲ್ಲಿದ್ದಾಗ, ಸ್ಪೀಡ್ ಪೋಸ್ಟ್ ಮೂಲಕ ಅವರಿಗೆ ಒಂದು ಗಿಫ್ಟ್ ಕವರ್ ಬಂದಿದೆ. ಅದನ್ನು ತೆರೆದು ನೋಡಿದಾಗ, ಮೀಶೋ ಆನ್‌‌ಲೈನ್ ಶಾಪಿಂಗ್ ಸಂಸ್ಥೆಯು ತನ್ನ 10 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನೋಂದಾಯಿತ ಗ್ರಾಹಕರಿಗಾಗಿ ಲಕ್ಕಿ ಡ್ರಾ ಸ್ಪರ್ಧೆಯನ್ನು ಆಯೋಜಿಸಿದೆ. ಅದರಲ್ಲಿ ನೀವು ಆಯ್ಕೆಯಾಗಿದ್ದೀರಿ ಎಂದು ಬರೆಯಲಾಗಿತ್ತು. ಜೊತೆಗೆ ಕವರ್‌ನಲ್ಲಿದ್ದ ಕಾರ್ಡ್ ಅನ್ನು ಸ್ಕ್ರ್ಯಾಚ್ ಮಾಡಿ ಬಹುಮಾನ ಗೆದ್ದರೆ, ನಿಮ್ಮ ದಾಖಲೆಗಳ ನಕಲು ಪ್ರತಿಗಳನ್ನು ಸಲ್ಲಿಸಬೇಕೆಂದು ಕೋರಲಾಗಿತ್ತು.

ಇದನ್ನು ನಿಜವೆಂದು ನಂಬಿದ ಜ್ಯೂಸ್ ಅಂಗಡಿ ಮಾಲೀಕರು, ಆ ಕಾರ್ಡ್‌ನಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ವಂಚಕರು “ಕಾರ್ಡ್ ಸ್ಕ್ರ್ಯಾಚ್ ಮಾಡಿ ಅದರ ಫೋಟೋವನ್ನು ನಮಗೆ ವಾಟ್ಸಾಪ್ ಮಾಡಿ ಎಂದು ತಿಳಿಸಿದ್ದಾರೆ. ಅದರಂತೆ ಅವರು ಕಳುಹಿಸಿದಾಗ, ನೀವು ಮಹೀಂದ್ರಾ ಥಾರ್ ಕಾರನ್ನು ಗೆದ್ದಿದ್ದೀರಿ. ನಮಗೆ ನಿಮ್ಮ ಪಾನ್ ಕಾರ್ಡ್ ಹಾಗೂ ಒಂದು ಭಾವಚಿತ್ರವನ್ನು ಕಳುಹಿಸಿ ಎಂದು ನಂಬಿಸಿದ್ದಾರೆ.

ಆನಂತರ ವಂಚಕರೇ ಕರೆ ಮಾಡಿ, ನಿಮಗೆ ಕಾರು ಬೇಕೋ ಅಥವಾ ಕಾರಿನ ಮೌಲ್ಯವಾದ 24,85,980 ಹಣ ಬೇಕೋ? ಎಂದು ಕೇಳಿದ್ದಾರೆ. ಅದಕ್ಕೆ ದೂರುದಾರರು, ನನ್ನ ಬಳಿ ಈಗಾಗಲೇ ಕಾರಿದೆ, ಆದ್ದರಿಂದ ಹಣವನ್ನೇ ನೀಡಿ” ಎಂದು ಕೋರಿದ್ದಾರೆ.

ಬಳಿಕ ಕಾರಿನ ಮೌಲ್ಯದ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲು ವಿವಿಧ ತೆರಿಗೆ ಹಾಗೂ ಸೇವಾ ಶುಲ್ಕಗಳನ್ನು ಪಾವತಿಸಬೇಕೆಂದು ವಂಚಕರು ನಂಬಿಸಿದ್ದಾರೆ. ಅವರ ಮಾತು ನಂಬಿದ ದೂರುದಾರರು ಹಂತ-ಹಂತವಾಗಿ ಒಟ್ಟು 23,40,179 ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿ ಮೋಸ ಹೋಗಿದ್ದಾರೆ. ಕೊನೆಗೆ ತಾವು ವಂಚನೆಗೊಳಗಾಗಿರುವುದನ್ನು ಅರಿತ ವ್ಯಕ್ತಿ, ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor