ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ರಾಜಕಾರಣದಲ್ಲಿ ಸಚಿವ ಮಧು ಬಂಗಾರಪ್ಪ ಹಾಗೂ ಮಾಜಿ ಶಾಸಕ ಹರತಾಳು ಹಾಲಪ್ಪ ನಡುವೆ ವಾಕ್ಸಮರ ಜೋರಾಗಿದೆ. ಹಾಲಪ್ಪ ನಮ್ಮ ಮನೆಯಲ್ಲಿ ನೆಲ ಒರೆಸಲು ಇದ್ದರು ಎಂಬ ಮಧು ಬಂಗಾರಪ್ಪ ಅವರ ಹೇಳಿಕೆಗೆ ಹಾಲಪ್ಪ ಪ್ರತಿಕ್ರಿಯಿಸಿದ್ದು, ನಾನು ಅವರ ಮನೆಯಲ್ಲಿ ಸಂಬಳದ ಆಳಾಗಿಇರಲಿಲ್ಲ, ಬದಲಾಗಿ ಸಾರ್ವಜನಿಕ ಸೇವಕನಾಗಿ ಇದ್ದೆ. ಇದು ಅವರ ಅವಿವೇಕದ, ತಿಳುವಳಿಕೆ ರಹಿತ ಮಾತು ಎಂದು ವಾಗ್ದಾಳಿ ನಡೆಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬಂಗಾರಪ್ಪನವರ ಬಳಿ ಯಾವತ್ತೂ ಸಂಬಳಕ್ಕೆ ಇರಲಿಲ್ಲ. 1987ರಲ್ಲಿ ಬಂಗಾರಪ್ಪನವರ ಬಳಿ ಕೆಂಪು ಬಣ್ಣದ ಕಾರಿತ್ತು, ನನ್ನ ಬಳಿಯೂ ಬಿಳಿ ಬಣ್ಣದ ಕಾರಿತ್ತು. ನಾನು ಅವರ ಮನೆಗೆ ಕಾರಿನಲ್ಲೇ ಹೋಗುತ್ತಿದ್ದೆ. ಇದು ಮಧು ಬಂಗಾರಪ್ಪ ಅವರಿಗೆ ಗೊತ್ತಿರಲಿಲ್ಲ, ಏಕೆಂದರೆ ಆ ಸಮಯದಲ್ಲಿ ಅವರು ಮನೆಯಲ್ಲಿ ಇರಲಿಲ್ಲ. ಅದಕ್ಕಾಗಿಯೇ ಅವರಿಗೆ ಮನೆಯಲ್ಲಿ ಕೆಲಸಗಾರರು ಯಾರು, ಅಡುಗೆಯವರು ಯಾರು ಎಂಬುದು ತಿಳಿದಿಲ್ಲ ಎಂದು ಹೇಳಿದರು.
ಹಾಗೆಯೇ ಮಧು ಬಂಗಾರಪ್ಪ ಅವಿವೇಕತನದಿಂದ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಯಡಿಯೂರಪ್ಪ ಅವರ ಮಕ್ಕಳಿಗೆ ಬೊಗಳಿ ಎನ್ನುತ್ತಾರೆ. ಬೊಗಳುವುದು ನಾಯಿ ಯಾರು ಬೊಗಳು ಎನ್ನುತ್ತಾರೋ ಅವರೇ ಅದು. ಮತ್ತೆ ಒದರುವುದು ಎನ್ನುತ್ತಾರೆ, ಒದರುವುದು ಕತ್ತೆ. ಶಿಕ್ಷಣ ಸಚಿವರ ಬಾಯಲ್ಲಿ ಬರುವ ಮಾತಾ ಇದು ಎಂದು ಪ್ರಶ್ನಿಸಿದರು.
ನಾವು ಬಂಗಾರಪ್ಪನವರನ್ನು ಎಲ್ಲಿ ಇಡಬೇಕೋ ಅಲ್ಲಿ ಇಟ್ಟಿದ್ದೇವೆ. ಮಧು ಬಂಗಾರಪ್ಪ ಅಪ್ಪನ ಹೆಸರಿನಲ್ಲಿ ಮಂತ್ರಿಯಾಗಿದ್ದಾರೆ. ಇವರು ಐದು ಬಾರಿ ಸೋತು, ಎರಡು ಬಾರಿ ಗೆದ್ದ ಪುಣ್ಯಾತ್ಮ. ಬಂಗಾರಪ್ಪನವರಿಗೆ ಅತಿ ಹೆಚ್ಚು ನೋವು ಕೊಟ್ಟಿದ್ದೇ ಮಧು ಬಂಗಾರಪ್ಪ. ಯಡಿಯೂರಪ್ಪ ಅವರ ಮಕ್ಕಳಿಗೆ ಪರಿವಾರದ ಸಂಸ್ಕಾರ ಇದೆ, ಆದರೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಸಂಸ್ಕಾರವಿಲ್ಲ. ಅಹಂಕಾರ, ದುರಹಂಕಾರದಿಂದ ಮಾತನಾಡುತ್ತಾರೆ. ಜಿಲ್ಲೆಯ ಅಭಿವೃದ್ಧಿ ಮಾಡುವ ಕಡೆ ಗಮನ ನೀಡುವುದನ್ನು ಬಿಟ್ಟು ಬೇರೆ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದರು.
ನನ್ನನ್ನು ಟೂರಿಂಗ್ ಟೆಂಟ್ ಎಂದು ಕರೆದಿದ್ದಾರೆ. ಆದರೆ, ಸೋನಿಯಾ ಗಾಂಧಿ ಬಳ್ಳಾರಿಗೆ ಏಕೆ ಬಂದು ನಿಂತರು, ಸಿದ್ದರಾಮಯ್ಯ ಏಕೆ ಬೇರೆ ಕಡೆ ನಿಂತರು ಎಂಬುದು ಇವರಿಗೆ ಗೊತ್ತಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ವರಿಷ್ಠರು ಎಲ್ಲಿ ಹೇಳುತ್ತಾರೋ ಅಲ್ಲಿ ನಿಲ್ಲುತ್ತೇವೆ. ಬಂಗಾರಪ್ಪನವರಿಂದ ನಮ್ಮನ್ನು ದೂರ ಮಾಡಿದ್ದೇ ಇವರು. ನಾವು ಬಡವರೇ, ಮೂರು ರೂಪಾಯಿ ಕೂಲಿ ಕೆಲಸ ಮಾಡಿಕೊಂಡು ಬಂದವರು. ಶಿವಮೊಗ್ಗದಲ್ಲೇ ಓದಿದ ಮಧು ಬಂಗಾರಪ್ಪ ಅವರಿಗೆ ಕನ್ನಡ ಬರುವುದಿಲ್ಲ, ಟುಸ್-ಪುಸ್ ಇಂಗ್ಲಿಷ್ ಕಲಿತುಕೊಂಡು ಬಂದು ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ನನ್ನ ಪ್ರಕರಣದಲ್ಲಿ ಮಧು ಬಂಗಾರಪ್ಪ ಅವರ ಮನೆಯಿಂದ 192 ಬಾರಿ ಕರೆ ಹೋಗಿದೆ. ಹಾಲಪ್ಪನ ಮಂತ್ರಿಗಿರಿ ಹೇಗೆ ತೆಗೆಯಬೇಕು ಎಂದು ಫೋನ್ ಹೋಗಿದೆ. ಬಂಗಾರಪ್ಪನವರ ಮೇಲೆ ಕೇಸ್ ಹಾಕಿಸಿದ್ದು ಯಾರು? ಇದೇ ಕಾಂಗ್ರೆಸ್‌ನವರು. ಸೊರಬದಲ್ಲಿ ರೈತನ ತೋಟವನ್ನು ಯಾವ ಕೋರ್ಟ್ ಆದೇಶದಿಂದ ತೆರವು ಮಾಡಿದ್ದಾರೆ ಕೇಳಿ. ನಾನು ದಡ್ಡನೇ, ಇವರು ಬುದ್ಧಿವಂತರು 15ನೇ ತಾರೀಖಿಗೆ ಮಕ್ಕಳ ದಿನಾಚರಣೆ ಮಾಡುವವರು. ನನ್ನ ವಿಚಾರವನ್ನು ಮಧು ಬಂಗಾರಪ್ಪ ತೆಗೆಯಲಿ, ನಾನು ಇನ್ನೂ ತೆಗೆದು ಇಡುತ್ತೇನೆ” ಎಂದು ಹಾಲಪ್ಪ ಸವಾಲು ಹಾಕಿದರು.
