ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಸಂಬಂಧಿಸಿದಂತೆ ಇದುವರೆಗೂ ಬಹಳಷ್ಟು ಹೊಸ ಹೊಸ ಅಭಿವೃದ್ಧಿ ಪ್ಲಾನ್ಗಳು ಬಂದಿವೆ. ಈ ಮಧ್ಯೆ ಇದೀಗ ಈ ಪಟ್ಟಿಗೆ ಮತ್ತೊಂದು ಪ್ಲಾನ್ ಸೇರಿಕೊಳ್ಳುತ್ತಿದೆ. ಸರ್ವಕಾಲಿಕ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮಳೆಗಾಲಕ್ಕೆ ಮಾತ್ರ ಸೀಮಿತವಾಗಿರುವ ಜೋಗ ಜಲಪಾತದ ವೈಭವವನ್ನು ಇ ವರ್ಷದ 365 ದಿನಗಳೂ ಪ್ರವಾಸಿಗರು ಕಣ್ತುಂಬಿಕೊಳ್ಳುವಂತೆ ಮಾಡಲು ಪ್ರವಾಸೋದ್ಯಮ ಇಲಾಖೆ ಪ್ಲಾನ್ ಸಿದ್ಧಪಡಿಸ್ತಿದೆಯಂತೆ.
ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರು ಇತ್ತೀಚೆಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜೋಗ ಜಲಪಾತ ಅಭಿವೃದ್ಧಿ ಯೋಜನೆಗಳನ್ನು ಇನ್ನಷ್ಟು ಚರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ವೇಳೆ ಪ್ಲಾನ್ ಪ್ರಸ್ತಾವಗೊಂಡಿದೆ. ಜೋಗ ಜಲಪಾತ ಅಭಿವೃದ್ಧಿಗೆ ಸಂಬಂಧಿಸಿದ ತಾಂತ್ರಿಕ ಅಧ್ಯಯನಗಳನ್ನು ಶೀಘ್ರ ಪೂರ್ಣಗೊಳಿಸುವುದರ ಜೊತೆಗೆ ಅಗತ್ಯ ಕಾನೂನುಬದ್ಧ ಅನುಮೋದನೆಗಳ ಪ್ರಕ್ರಿಯೆಯನ್ನು ವೇಗಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಜೋಗ ಜಲಪಾತದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ಹಾಗೂ ವರ್ಷಪೂರ್ತಿ ನಿಗದಿತ ಅವಧಿಗಳಲ್ಲಿ ಜಲಪಾತದಲ್ಲಿ ನೀರಿನ ಹರಿವು ಇರುವಂತೆ ಮಾಡುವ ಪ್ರಸ್ತಾವನೆ ಕುರಿತು ಸಚಿವರು ಪರಿಶೀಲನೆ ನಡೆಸಿದರು. ಜೋಗ ಜಲಪಾತದ ಮೇಲ್ಭಾಗಕ್ಕೆ ನೀರನ್ನು ಪಂಪ್ ಮಾಡುವ ಉದ್ದೇಶಿತ ವ್ಯವಸ್ಥೆಯ ಕುರಿತು ಸಮಗ್ರ ಕಾರ್ಯಸಾಧ್ಯತಾ ಅಧ್ಯಯನ ನಡೆಸುವಂತೆ ಕೆ.ಜೆ. ಜಾರ್ಜ್ ಅವರು ಸೂಚಿಸಿದರು. ಸದ್ಯಕ್ಕೆ ಇದಿನ್ನೂ ಅಧ್ಯಯನದ ಹಂತದಲ್ಲಿಯೇ ಇದೆ. ಮುಂದಿನ ಚಿತ್ರಣ ಮುಂದಷ್ಟೆ ಗೊತ್ತಾಗಬೇಕಿದೆ
