ಭದ್ರಾವತಿಯಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಸಂಪನ್ನ!ರಾಜಕೀಯ ವಿವಾದಕ್ಕೆ ಕಾರಣವಾದ ಶುಭಾಶಯ ಫ್ಲೆಕ್ಸ್​ ಹರಿದ ವಿಚಾರ!

ಹಂಚಿಕೊಳ್ಳಿ
WhatsApp Facebook X Telegram
Bhadravathi Hindu Mahasabha Ganapati Visarjan 2026 Thousands Join Procession
Bhadravathi Hindu Mahasabha Ganapati Visarjan 2026 Thousands Join Procession

ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ಭದ್ರಾವತಿಯ ಹೊಸಮನೆ ಹಿಂದೂ ಮಹಾಸಭಾ–ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ 54ನೇ ವರ್ಷದ ವಿನಾಯಕ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ನಿನ್ನೆ ವಿಶೇಷವಾಗಿ ಹಾಗೂ ವಿಜ್ರಂಭಣೆಯಿಂದ ಸಂಪನ್ನಗೊಂಡಿದೆ. ಪೊಲೀಸರ ಬಿಗಿಬಂದೋಬಸ್ತ್​ನ ನಡುವೆ ಮೆರವಣಿಗೆ ವಿವಿಧ ಕಲಾತಂಡಗಳ ಪ್ರದರ್ಶನ, ಭಕ್ತರಿಂದ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳೊಂದಿಗೆ ಸಡಗರದಿಂದ ಸಾಗಿತು. ಈ ಮಧ್ಯೆ ಫ್ಲೆಕ್ಸ್​ ಹರಿದ ವಿಚಾರವೂ ರಾಜಕೀಯ ವಿವಾದಕ್ಕೆ ಕಾರಣವಾಯ್ತು.

ಫ್ಲೆಕ್ಸ್ ಹರಿದ ವಿಚಾರ

ಸಹಜವಾಗಿಯೇ ಹಿಂದೂ ಮಹಾಸಭಾ ಗಣಪತಿಗೆ ಪಕ್ಷಾತೀತವಾಗಿ ಫ್ಲೆಕ್ಸ್​ಗಳು ಬೀಳುತ್ತವೆ. ದೊಡ್ಡ ವ್ಯಕ್ತಿಗಳು ಜನ ಸಮುದಾಯಕ್ಕೆ ಕಾಣುವಂತೆ ಬೃಹತ್ ಪ್ಲೆಕ್ಸ್​ಗಳನ್ನ ಹಾಕಿಸುತ್ತಾರೆ. ರಾಜಕೀಯ ನಾಯಕರ ಫ್ಲೆಕ್ಸ್​ಗಳ ಅಬ್ಬರ, ಈ ವಿಚಾರದಲ್ಲಿ ತುಸು ಜೋರೇ ಇರುತ್ತದೆ. ಇದೇ ರೀತಿಯಲ್ಲಿ ಭದ್ರಾವತಿಯಲ್ಲಿ ಜೋರಾಗಿ ಪ್ಲೆಕ್ಸ್​ಗಳನ್ನ ಹಾಕಲಾಗಿತ್ತು. ನಗರದ ಪ್ರಮುಖ ಸರ್ಕಲ್​ ಸೇರಿದಂತೆ ರಾಜಬೀದಿ ಉತ್ಸವ ಸಾಗಿರುವ ಹಾದಿಯುದ್ದಕ್ಕೂ ದೊಡ್ಡ ದೊಡ್ಡ ಫ್ಲೆಕ್ಸ್​ಗಳನ್ನ ಮೆರವಣಿಗಗೂ ಮೂರು ದಿನ ಮೊದಲೇ ಹಾಕಲಾಗಿತ್ತು. ಆದರೆ ಮೆರವಣಿಗೆಗೆ ಒಂದು ದಿನ ಇರುವಾಗಲೇ ಜೆಡಿಎಸ್​ ಹಾಗೂ ಬಿಜೆಪಿ ನಾಯಕರ ಶುಭಾಶಯ ಪ್ಲೆಕ್ಸ್​ಗಳನ್ನ ಗಳನ್ನ ಹರಿದು ಹಾಕಲಾಗಿದೆ ಎಂಬುದೇ ಆರೋಪ!

ಹೌದು, ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಗೆ ಶುಭಾಶಯ ಕೋರಿ ಭದ್ರಾವತಿ ನಗರದ ವಿವಿಧೆಡೆ ಅಳವಡಿಸಲಾಗಿದ್ದ ಕೆಲವು ಫ್ಲೆಕ್ಸ್‌ಗಳನ್ನು ಅಪರಿಚಿತರು ಹರಿದು ಹಾಕಿದ ಘಟನೆ ಬಗ್ಗೆ ಸೋಶಿಯಲ್ ಮೀಡಿಯಾ ಸೇರಿದಂತೆ, ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶ ಕೇಳಿಬರುತ್ತಿದೆ. ವಿಶೇಷವಾಗಿ ಫ್ಲೆಕ್ಸ್​ಗಳ ಪೈಕಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ ಹಾಗೂ ಬಿಜೆಪಿ ಮುಖಂಡ ಮಂಗೋಟೆ ರುದ್ರೇಶ್ ಅವರ ಶುಭಾಶಯ ಫಲಕಗಳನ್ನು ಹರಿದು ಹಾಕಲಾಗಿದೆ ಎಂದು ತಿಳಿದುಬಂದಿದೆ. ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ, ಮಹಾತ್ಮ ಗಾಂಧಿ ರಸ್ತೆ ಹಾಗೂ ಚನ್ನಗಿರಿ ರಸ್ತೆಗಳಲ್ಲಿ ಅಳವಡಿಸಲಾಗಿದ್ದ ಫ್ಲೆಕ್ಸ್‌ಗಳನ್ನು ಹರಿದು ಹಾಕಲಾಗಿದೆ ಎಂದು ಸ್ಥಳೀಯ ವರದಿ ಹೇಳುತ್ತಿದೆ.

ಇನ್ನೂ ಫ್ಲೆಕ್ಸ್ ಹರಿದ ವಿಚಾರವನ್ನ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಖಂಡಿಸಿದ್ದಾರೆ. ಈ ನಡುವೆ ಪೊಲೀಸರು ಮಧ್ಯಪ್ರವೇಶಿಸಿ ಎರಡೂ ಪಕ್ಷಗಳ ಮುಖಂಡರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದರಿಂದ ವಿಷಯ ತಾತ್ಕಾಲಿಕವಾಗಿ ತಣ್ಣಗಾಗಿದೆ. ಇನ್ನೂ ಗಣಪತಿ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಭದ್ರತಾ ವ್ಯವಸ್ಥೆ ಕೈಗೊಂಡಿತ್ತು.

ಮೆರವಣಿಗೆ ಸಾಗುವ ಪ್ರಮುಖ ರಸ್ತೆಗಳಲ್ಲಿ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸಾರ್ವಜನಿಕರ ಸುರಕ್ಷತೆ ಮತ್ತು ಮೆರವಣಿಗೆಯ ಮೇಲಿನ ನಿಗಾ ವ್ಯವಸ್ಥೆಯ ಭಾಗವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಡ್ರೋನ್‌ಗಳನ್ನೂ ಬಳಸಿಕೊಂಡು ಮೆರವಣಿಗೆಯ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿತ್ತು. ನಗರದ ಪ್ರಮುಖ ವೃತ್ತಗಳು, ಜನಸಂದಣಿ ಹೆಚ್ಚಾಗುವ ಪ್ರದೇಶಗಳು ಹಾಗೂ ಮೆರವಣಿಗೆ ಸಾಗುವ ಮಾರ್ಗದಲ್ಲಿ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು.

ಗಣಪತಿ ಮೂರ್ತಿಯ ರಾಜಬೀದಿ ಉತ್ಸವ ಮೆರವಣಿಗೆಯು ಹೊಸಮನೆ ಮುಖ್ಯರಸ್ತೆಯಿಂದ ಆರಂಭವಾಗಿ ಶಿವಾಜಿ ವೃತ್ತವನ್ನು ತಲುಪಿತು. ಅಲ್ಲಿಂದ ಹಿಂದಿರುಗಿದ ಮೆರವಣಿಗೆ ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ ಹಾಗೂ ಅಂಬೇಡ್ಕರ್ ವೃತ್ತದ ಮೂಲಕ ಹುತ್ತಾ ಕಾಲೋನಿಯ ಶ್ರೀ ತಿರುಮಲ ದೇವಸ್ಥಾನದವರೆಗೆ ಸಾಗಿತು. ನಂತರ ಮೆರವಣಿಗೆಯು ಅಲ್ಲಿಂದ ಹಿಂದಿರುಗಿ ನಗರಸಭೆ ಮುಂಭಾಗದ ಮೂಲಕ ಮಹಾತ್ಮ ಗಾಂಧಿ ವೃತ್ತವನ್ನು ತಲುಪಿ, ನಗರಸಭೆ ಮುಂಭಾಗಕ್ಕೆ ಹಿಂದಿರುಗಿ ಭದ್ರಾ ನದಿಯಲ್ಲಿ ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor