ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಬ್ಯಾಕೋಡು / ಇಲ್ಲಿನ ಯುವತಿ ವಾಣಿಶ್ರೀ(22) ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಎ.ಕೆ.ಅಭಿಷೇಕ್ ಸೋಮವಾರ, ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರ ಮುಂದೆ ಶರಣಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈತನ ವಿರುದ್ಧ ಖಾಸಗಿ ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿದೆ.
ಸಾಗರ ತಾಲೂಕಿನ ಆರೋಡಿ ಗ್ರಾಮದ ವಾಣಿಶ್ರೀ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಸೆಕ್ಟರ್-1ರ ಪಿಜಿಯಲ್ಲಿ ವಾಸವಿದ್ದರು, ಅಲ್ಲಿಯೇ ಜ್ಯುವೆಲರಿ ಶೋರೂಂವೊಂದರಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು. ಈಕೆಯ ಜೀವನದಲ್ಲಿ ಎಂಟ್ರಿಯಾಗಿದ್ದ, ಪಿಯುಸಿಯ ಸಹಪಾಠಿ ಶಿವಮೊಗ್ಗ ಮೂಲದ ಅಭಿಷೇಕ್, ಆಕೆಯನ್ನ ಹಿಂಸೆ ಮಾಡುತ್ತಿದ್ದ ನಂತೆ.
ವಾಣಿಶ್ರೀ ಅವರ ಖಾಸಗಿ ಫೋಟೊ ಹಾಗೂ ವಿಡಿಯೊಗಳನ್ನು ಇಟ್ಟುಕೊಂಡು ವಾಟ್ಸ್ ಆಪ್ ಮೂಲಕ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಸ್ವತಃ ವಾಣಿಶ್ರೀ ತಮ್ಮ ಡೆತ್ ನೋಟ್ನಲ್ಲಿ ಆರೋಪಿಸಿದ್ದರು. ಮೃತ ವಾಣಿಶ್ರೀಯ ಸಹೋದರಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಎಚ್ಎಸ್‌ಆರ್ ಲೇಔಟ್ ಪೊಲೀಸರು ತನಿಖೆ ನಡೆಸುತ್ತಿದ್ದರು. ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಅಭಿಷೇಕ್, ಸೋಮವಾರ ವಕೀಲರ ಮೂಲಕ ಠಾಣೆಗೆ ಬಂದು ಶರಣಾಗಿದ್ದಾನೆ.
