ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ದಿನ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಮೂವರು ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಸಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಐಪಿಎಸ್ ಅವರ ಡೈರಕ್ಷನ್ನಲ್ಲಿ, ಸಿವಿಲ್ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್ಎಎಫ್) ತುಕಡಿ ಪೊಲೀಸ್ ರೂಟ್ ಮಾರ್ಚ್ ನಡೆಸಿದೆ.
ಪೊಲೀಸ್ ರೂಟ್ ಮಾರ್ಚ್
ಶಿವಮೊಗ್ಗ ನಗರದ ಎಸ್.ಎನ್. ಸರ್ಕಲ್ನಿಂದ ಆರಂಭವಾದ ರೂಟ್ ಮಾರ್ಚ್ ಗಾಂಧಿ ಬಜಾರ್, ತರಕಾರಿ ಮಾರುಕಟ್ಟೆ ರಸ್ತೆ, ಮಹಬೂಬ್ ಗಲ್ಲಿ, ಜಿ. ಕಾರ್ನರ್, ಕೆ.ಆರ್. ಪುರಂ ರಸ್ತೆ, ಸಿದ್ದಯ್ಯ ರಸ್ತೆ, ರವಿವರ್ಮ ಬೀದಿ ಹಾಗೂ ಸಿದ್ದಯ್ಯ ಸರ್ಕಲ್ ಮೂಲಕ ರೂಟ್ ಮಾರ್ಚ್ ಸಾಗಿಬಂದು, ಬಸವೇಶ್ವರ ದೇವಸ್ಥಾನ, ಗಾಂಧಿ ಬಜಾರ್, ನಾಗಪ್ಪನ ಕೇರಿ, ಅಶೋಕ ರಸ್ತೆ, ಲಷ್ಕರ್ ಮೊಹಲ್ಲಾ, ದೀಪಕ್ ಪೆಟ್ರೋಲ್ ಬಂಕ್ ಹಾಗೂ ಬಿ.ಹೆಚ್. ರಸ್ತೆ ಮಾರ್ಗವಾಗಿ ಸಾಗಿ, ಮತ್ತೆ ಎಸ್.ಎನ್. ಸರ್ಕಲ್ಗೆ ಬಂದು ಪಥಸಂಚಲನವನ್ನ ಮುಕ್ತಾಯಗೊಳಿಸಲಾಯಿತು.
ಇತ್ತ ಭದ್ರಾವತಿಯಲ್ಲಿ ಇವತ್ತು ಸೆಪ್ಟೆಂಬರ್ 22ರಂದು ನಡೆಯುವ ಎಚ್ಎಂಎಸ್ ಗಣೇಶೋತ್ಸವದ ಹಿನ್ನೆಲೆಯಲ್ಲಿ ನಿನ್ನೆ ರೂಟ್ ಮಾರ್ಚ್ ನಡೆಸಲಾಗಿದೆ. ಇಲ್ಲಿ ನಡೆದ ಪಥಸಂಚಲನದಲ್ಲಿಯು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ನಿರೀಕ್ಷಕರು, ಉಪನಿರೀಕ್ಷಕರು ಹಾಗೂ ನಾಗರಿಕ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ಇವರೊಂದಿಗೆ 5 ಕೆಎಎಸ್ಆರ್ಪಿ ತುಕಡಿಗಳು ಹಾಗೂ 5 ಡಿಎಆರ್ ತುಕಡಿಗಳು ರೂಟ್ ಮಾರ್ಚ್ನಲ್ಲಿ ಪಾಲ್ಗೊಂಡಿದ್ದವು. ಒಟ್ಟು 10 ತುಕಡಿಗಳು ಹಾಗೂ ನಾಗರಿಕ ಪೊಲೀಸ್ ಪಡೆ ರೂಟ್ ಮಾರ್ಚ್ನಲ್ಲಿ ಪಾಲ್ಗೊಂಡಿತ್ತು.
