ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ : ಜಿಲ್ಲೆಯೊಳಗೆ ಅಲ್ಲಲ್ಲಿ ಹಾವುಗಳು ಕಾಣಿಸಿಕೊಳ್ಳುವುದು ಸಾಮಾನ್ಯ! ಆದರೆ ಈ ಸೀಸನ್ನಲ್ಲಿ ಹೆಬ್ಬಾವುಗಳು ಹೆಚ್ಚಾಗಿ ಕಾಣಿಸಿಕೊಳ್ತಿದೆ. ಇದಕ್ಕೆ ಹೊಸ ಉದಾಹರಣೆಯೊಂದು ಕಲ್ಲುಗಂಗೂರಿನಲ್ಲಿ ಕಾಣಸಿಕ್ಕಿದೆ.
ಸ್ನೇಕ್ ಕಿರಣ್ ಈ ಕುರಿತಾಗಿ ಮಲೆನಾಡುಟುಡೆಗೆ ಮಾಹಿತಿ ನೀಡಿದ್ದು, ಹೆಬ್ಬಾವೊಂದನ್ನು ರಕ್ಷಣೆ ಮಾಡಿದ ವಿಡಿಯೋವನ್ನ ಸಹ ಹಂಚಿಕೊಂಡಿದ್ದಾರೆ. ವಿಶೇಷ ಅಂದರೆ ಮೊನ್ನೆತಾನೇ ತೀರ್ಥಹಳ್ಳಿಯ ಪ್ಲಾಸ್ಟಿಕ್ ಕಾರ್ಖಾನೆಯ ಬಳಿ ಕಾಣಿಸಿಕೊಂಡಿದ್ದ ಹೆಬ್ಬಾವೊಂದನ್ನ ಸ್ನೇಕ್ ಕಿರಣ್ ರಕ್ಷಿಸಿದ್ದರು. ಇದೀಗ ಅಂದರೆ ಸೆಪ್ಟಂಬರ್ 19 ರಂದು ಕಲ್ಲು ಗಂಗೂರಿನ ಕ್ರಷರ್ ಒಂದರಲ್ಲಿ ಹೆಬ್ಬಾವೊಂದನ್ನ ರೆಸ್ಕ್ಯೂ ಮಾಡಿದ್ದಾರೆ.
ಇಲ್ಲಿನ ಕ್ರಷರ್ ಒಂದರಲ್ಲಿನ ಜಗುಲಿ ಕಟ್ಟೆಯ ಮೇಲೆ ಹೆಬ್ಬಾವೊಂದು ಶಿಸ್ತಾಗಿ ಕುಳಿತಿತ್ತು. ಇದನ್ನ ಕಂಡ ಕಾರ್ಮಿಕರಿಗೆ ಭಯವಾಗಿದೆ. ಅಲ್ಲದೆ ಅದೇ ಕಾಂಪೌಂಡ್ ಆವರಣದಲ್ಲಿ ನಾಯಿಮರಿಗಳಿದ್ದವು. ಎಲ್ಲಿ ಹೆಬ್ಬಾವು ಅವುಗಳನ್ನ ನುಂಗಿ ಹಾಕುತ್ತೋ ಅನ್ನುವ ಭಯದಲ್ಲಿ, ಕಾರ್ಮಿಕರು ಈ ವಿಚಾರವನ್ನು ಕ್ರಷರ್ ಮಾಲೀಕರಿಗೆ ತಿಳಿಸಿದ್ದಾರೆ. ಮಾಲೀಕ ಸ್ನೇಕ್ ಕಿರಣ್ರಿಗೆ ಫೋನ್ ಮಾಡಿ, ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.
ಇನ್ನೂ ಸ್ನೇಕ್ ಕಿರಣ್ ಸ್ಥಳಕ್ಕೆ ಬಂದಾಗಲೂ, ಹೆಬ್ಬಾವು ಮಾತ್ರ ಕಾಂಪೌಂಡ್ ಕಟ್ಟೆಯಿಂದ ಒಂದಿಂಚೂ ಆಚೀಚೆ ಅಲ್ಲಾಡದೇ ಕುಳಿತಿತ್ತು. ಇದನ್ನ ಗಮನಿಸಿದ ಸ್ನೇಕ್ ಕಿರಣ್, ತಕ್ಷಣವೇ ಅದನ್ನ ಹಿಡಿದು ರೆಸ್ಕ್ಯೂ ಮಾಡಿದ್ದಾರೆ. ಹಾವಿಗೆ ಏಟಾಗಿರುವ ಸಾಧ್ಯತೆಯ ಬಗ್ಗೆಯು ಸ್ಥಳದಲ್ಲಿಯೇ ಪರೀಕ್ಷಿಸಿದ ಸ್ನೇಕ್ ಕಿರಣ್, ಹಾವು ಸುಮಾರು ಆರಡಿ ಇದೆ. ಸುರಕ್ಷಿತವಾಗಿದೆ ಎಂದು ಅರಣ್ಯ ಇಲಾಖೆಗೆ ವಿವರ ಕೊಟ್ಟರು. ತದನಂತರ ಅರಣ್ಯ ಸಿಬ್ಬಂದಿ ಸಮ್ಮುಖದಲ್ಲಿ ಹೆಬ್ಬಾವನ್ನ ಕಾಡಿಗೆ ಬಿಟ್ಟಿದ್ದಾರೆ.
