ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (DCC Bank) ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ನಿಷ್ಠಾವಂತ ನಿರ್ದೇಶಕರಿಗೆ ಅವಕಾಶ ಕಲ್ಪಿಸಬೇಕೆಂದು ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ. ಎಸ್. ಶಿವಕುಮಾರ್ ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಸಿ. ಯೋಗೇಶ್ ಅವರಿಗೆ ಪತ್ರ ಬರೆದಿದ್ದಾರೆ.
ನವೆಂಬರ್ 06 ರಂದು ಶಿವಮೊಗ್ಗದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪತ್ರ ಬರೆದಿರುವ ಎಂ. ಎಸ್. ಶಿವಕುಮಾರ್ ಅವರು, ಉಪಾಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಹಲವು ವರ್ಷಗಳಿಂದ ನಿಷ್ಠೆಯಿಂದ ದುಡಿದಿರುವ, ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿರುವ ಹಾಗೂ ಪಕ್ಷದ ಕಷ್ಟಕಾಲದಲ್ಲಿಯೂ ಜೊತೆಯಾಗಿ ನಿಂತಿರುವ ನಿಷ್ಠಾವಂತ ನಿರ್ದೇಶಕರಿಗೆ ಸೂಕ್ತ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಸ್ತುತ ನಮ್ಮ ಬೆಂಬಲಿತ ನಿರ್ದೇಶಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಈ ಸಂದರ್ಭದಲ್ಲಿ ಪಕ್ಷದ ನಿಷ್ಠೆ, ಪಕ್ಷ ಸಂಘಟನೆಗೆ ನೀಡಿರುವ ಕೊಡುಗೆ ಹಾಗೂ ಬದ್ಧತೆಯನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ.
ಸಹಕಾರ ಕ್ಷೇತ್ರದ ಧುರೀಣರು, ಹಿರಿಯ ಕಾಂಗ್ರೆಸ್ ನಾಯಕರೂ ಹಾಗೂ ಪ್ರಸ್ತುತ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಆರ್. ಎಮ್. ಮಂಜುನಾಥ್ ಗೌಡ ಅವರು ಮತ್ತು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರೂ, ಡಿಸಿಸಿ ಬ್ಯಾಂಕಿನ ನಿರ್ದೇಶಕರೂ ಆಗಿರುವ ಬೇಳೂರು ಗೋಪಾಲಕೃಷ್ಣ ಅವರು ಪಕ್ಷದ ಸಂಘಟನೆ ಹಾಗೂ ಸಹಕಾರ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಪಕ್ಷದ ಸಂಘಟನೆ ಬಲಗೊಳ್ಳಲು ಹಲವು ವರ್ಷಗಳಿಂದ ನಿಷ್ಠೆಯಿಂದ ದುಡಿದಿರುವ ನಾಯಕರಿಗೆ ಹಾಗೂ ನಿರ್ದೇಶಕರಿಗೆ ಸೂಕ್ತ ಜವಾಬ್ದಾರಿ ಮತ್ತು ಸ್ಥಾನಮಾನ ನೀಡುವುದು ಅತ್ಯಂತ ಅಗತ್ಯವಾಗಿದೆ. ಆದ್ದರಿಂದ ಈ ಚುನಾವಣೆಯಲ್ಲಿ ಪಕ್ಷದ ನಿಷ್ಠಾವಂತ ನಿರ್ದೇಶಕರಿಗೆ ಆದ್ಯತೆ ನೀಡಿ, ಅವರಿಗೆ ಸೂಕ್ತ ಅವಕಾಶ ದೊರೆಯುವಂತೆ ತಾವು ವಿಶೇಷ ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ವಿವರಿಸಿದ್ದಾರೆ.
