ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶರಾವತಿ ಭಾಗದಲ್ಲಿ ಪ್ರಭಾವಿ ರಾಜಕಾರಣಿಯ 25 ಎಕರೆ ಜಾಗವಿದೆ, ಅದನ್ನು ಉಳಿಸಿಕೊಳ್ಳಲು ಶರಾವತಿ ಪಂಪ್ಡ್ ಸ್ಟೋರೇಜ್ ವಿಚಾರವಾಗಿ ಹೋರಾಟ ನಡೆಸಲಾಗುತ್ತಿದೆ ಎಂಬ ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ ಎಂಬ ಹೇಳಿಕೆಗೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಚಿವರು ರಸ್ತೆಯಲ್ಲಿ ಹೋಗುವ ದಾಸ ಮಾತನಾಡಿದ ಹಾಗೆ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದ್ಯಾರೋ ಪ್ರಭಾವಿ ರಾಜಕಾರಣಿ ಜಾಗ ಅತಿಕ್ರಮಣ ಮಾಡುವವರೆಗೂ ಇವರೇನು ಮಾಡುತ್ತಿದ್ದರು? ಆತ ಯಾರೇ ಇರಲಿ, ಆತನನ್ನು ಜೈಲಿಗೆ ಹಾಕಿ ಆ ಜಾಗವನ್ನು ಸರ್ಕಾರ ವಶಪಡಿಸಿಕೊಳ್ಳಲಿ. ಅದನ್ನು ಬಿಟ್ಟು ಈ ರೀತಿ ಹೇಳಿಕೆ ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಆಗ್ರಹಿಸಿದರು.
ಈ ಹಿಂದೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಟೆಂಡರ್ ಕರೆಯುವ ಮೊದಲು ಖಾಸಗಿ ಕಂಪನಿಯೊಂದಕ್ಕೆ ಈಗಾಗಲೇ 380 ಕೋಟಿ ರೂಪಾಯಿ ಪಾವತಿಸಲಾಗಿದೆ. ಅದರ ಬಗ್ಗೆ ಮೊದಲು ನಮಗೆ ಉತ್ತರ ಕೊಡಿ. ಈ ಕುರಿತಾಗಿ ನಾವು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
