ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ವಂದೇ ಮಾತರಂ ಅನ್ನು ಪೂರ್ಣ ಪ್ರಮಾಣದಲ್ಲಿ ಹಾಡಲಿಲ್ಲ ಎಂಬ ಕಾರಣಕ್ಕಾಗಿ ಶಾಸಕ ಎಸ್ ಎನ್ ಚನ್ನಬಸಪ್ಪ ಸಭಾ ತ್ಯಾಗ ಮಾಡಿದ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ, ಈ ಕುರಿತು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪ್ರತಿಕ್ರಿಯಿಸಿದ್ದು, ಪ್ರಚಾರ ಸಿಗುತ್ತದೆ ಎಂದರೆ ಕೆಲವರು ಗಣ ಬಂದಂತೆ ಆಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಂದು ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ರಾಷ್ಟ್ರ ಧ್ವಜ ಹಾಗೂ ವಂದೇ ಮಾತರಂ ನಂತಹ ಗೀತೆಗಳು ಜನರನ್ನು ಒಟ್ಟುಗೂಡಿಸುವ ಸಲುವಾಗಿ ಇರುವುದು. ಇಂತಹ ವಿಚಾರಗಳಲ್ಲಿ ಭಿನ್ನತೆ ಕಂಡು ಹಿಡಿಯುವವರಿಂದ ದೇಶ ಕಟ್ಟೋಕೆ ಆಗಲ್ಲ, ದೇಶವನ್ನು ಒಡೆಯಬಹುದು. ವಿರೋಧ ಮಾಡಬೇಕು ಎನ್ನುವ ಉದ್ದೇಶವಿದ್ದರೆ ಏನು ಬೇಕಾದರೂ ಮಾಡಲು ಸಾಧ್ಯ. ಪ್ರಚಾರ ಸಿಗುತ್ತದೆ ಎಂದರೆ ಕೆಲವರು ಗಣ ಬಂದಂತೆ ಆಡುತ್ತಾರೆ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಮಾಡಿರೋದನ್ನು ನಾನು ಪೂರ್ಣವಾಗಿ ಸಮರ್ಥಿಸಿಕೊಳ್ಳುತ್ತೇನೆ ಎಂದು ಹೇಳಿದರು.
, ಯಾವುದೇ ಹಾಡಿನಿಂದ ನಿಮ್ಮ ಹಸುವನ್ನು ತಡೆಯೋಕೆ ಆಗಲಿ ಅಥವಾ ನಮ್ಮ ಹಸುವನ್ನು ತಡೆಯೋಕೆ ಆಗಲಿ ಸಾಧ್ಯವಿಲ್ಲ. ಹಾಡು ಹಾಗೂ ಭಾವಜಾಲಗಳು ಜನರನ್ನು ಒಗ್ಗೂಡಿಸುವಂತಿರಬೇಕು. ಎಲ್ಲಾ ಹೃದಯಗಳನ್ನು, ಎಲ್ಲಾ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸವಾಗಬೇಕೇ ಹೊರತು ಪ್ರಚಾರಕ್ಕಾಗಿ ರಾಜಕೀಯ ಮಾಡಬಾರದು. ಹಾಡಿನಿಂದ ಯಾರ ಹಸಿವನ್ನು ತಡೆಯಲು ಸಾಧ್ಯವಿಲ್ಲವಾದ್ದರಿಂದ, ಉದ್ಯೋಗ, ಮನೆ, ನಿವೇಶನ ಸೇರಿದಂತೆ ಜನರ ಮೂಲಭೂತ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಲು ಒತ್ತು ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ, ಕೇಂದ್ರದ ಕಾನೂನಿನಲ್ಲಿ ರಾಜ್ಯದಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ವಿಚಾರದ ಕುರಿತು ಉತ್ತರಿಸಿದ ಕಿಮ್ಮನೆ ರತ್ನಾಕರ್, ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮವನ್ನು ತಾವು ಸಂಪೂರ್ಣವಾಗಿ ಸಮರ್ಥಿಸಿಕೊಳ್ಳುವುದಾಗಿ ಸ್ಪಷ್ಟಪಡಿಸಿದರು.
