ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ರಾಷ್ಟ್ರೀಯ ನಿರುದ್ಯೋಗಿಗಳ ದಿನವನ್ನಾಗಿ ಆಚರಿಸಿದ ಯೂತ್ ಕಾಂಗ್ರೆಸ್ ಹಾಗೂ ಎನ್‌ಎಸ್‌ಯುಐ ಕಾರ್ಯಕರ್ತರು, ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಬಳಿ ಕಪ್ಪು ವಸ್ತ್ರ ಧರಿಸಿ ಬೃಹತ್ ಧರಣಿ ನಡೆಸಿದರು. ಇದೇ ವೇಳೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ರವಾನಿಸಿ, ಸೆಪ್ಟೆಂಬರ್ 17 ಅನ್ನು ಅಧಿಕೃತವಾಗಿ ರಾಷ್ಟ್ರೀಯ ನಿರುದ್ಯೋಗ ದಿನ ಎಂದು ಘೋಷಿಸಬೇಕೆಂದು ಆಗ್ರಹಿಸಲಾಯಿತು.
ಧರಣಿ ಉದ್ದೇಶಿಸಿ ಮಾತನಾಡಿದ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಸಿ. ಯೋಗೇಶ್, 2014ರಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ, ಹುದ್ದೆಗಳನ್ನು ಸೃಷ್ಟಿಸುವ ಬದಲು ನಿರುದ್ಯೋಗಿಗಳನ್ನು ಸೃಷ್ಟಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 9.64 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡುತ್ತಿಲ್ಲ. ಕಾಯಂ ಹುದ್ದೆಗಳನ್ನು ಹೊರಗುತ್ತಿಗೆಯಾಗಿ ಪರಿವರ್ತಿಸಿ ಯುವಜನತೆಗೆ ವಂಚಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ನೋಟು ಅಮಾನ್ಯೀಕರಣದ ಸಂಕಷ್ಟ, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಹಾಗೂ ಯುವಕರು ಕೆಲಸ ಕೇಳಿದಾಗ ಬ್ರೀಥ್ ಇನ್, ಬ್ರೀಥ್ ಔಟ್ ಎನ್ನುತ್ತಾ ಯೋಗ ಮಾಡಲು ಮತ್ತು ಪಕೋಡಾ ಮಾರಾಟ ಮಾಡಲು ನೀಡಿದ ಹೇಳಿಕೆಗಳನ್ನು ಯೋಗೇಶ್ ಕಟುವಾಗಿ ವ್ಯಂಗ್ಯವಾಡಿದರು. ರೈಲ್ವೆ, ವಿಮಾನ ನಿಲ್ದಾಣಗಳು ಅಪ್ತ ಕಾರ್ಪೊರೇಟ್ ಕಂಪನಿಗಳ ಪಾಲಾಗುತ್ತಿದ್ದು, ಸೇನೆಯಲ್ಲೂ ಕಾಯಂ ಯೋಧರ ಬದಲು ಅಗ್ನಿವೀರ ಯೋಜನೆಯಡಿ ಗುತ್ತಿಗೆ ನೌಕರರನ್ನಾಗಿ ಮಾಡಲಾಗುತ್ತಿದೆ ಎಂದು ದೂರಿದರು.
ಪೋಷಕರು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಓದಿಸಿದರೂ ಪದವೀಧರರು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರ ಧರ್ಮ, ಜಾತಿಯ ಹೆಸರಿನಲ್ಲಿ ಜನರನ್ನು ವಿಭಜಿಸುವುದನ್ನು ಬಿಟ್ಟು, ಖಾಲಿ ಹುದ್ದೆಗಳ ಭರ್ತಿ, ಸಮಗ್ರ ರಾಷ್ಟ್ರೀಯ ಉದ್ಯೋಗ ನೀತಿ ಜಾರಿ, ರೈತರ ಸಮಸ್ಯೆ ಹಾಗೂ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಬೇಕು. ‘ಬೇಟಿ ಬಚಾವೋ, ಬೇಟಿ ಪಡಾವೋ’ ಎನ್ನುವ ಸರ್ಕಾರ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಮನೆ, ಮಕ್ಕಳ ಭವಿಷ್ಯ ಹಾಗೂ ದೇಶದಲ್ಲಿ ನಿಜವಾದ ಆರ್ಥಿಕ ಸುಧಾರಣೆಯಾಗಿ ಉದ್ಯೋಗ ದೊರೆತಿದ್ದರೆ ಮಾತ್ರ ಪ್ರಧಾನಿ ಹುಟ್ಟುಹಬ್ಬ ಸಂಭ್ರಮಿಸಿ ಎಂದು ಜನರಿಗೆ ಕರೆ ನೀಡಿದರು. ಭಾಷಣದ ಕೊನೆಯಲ್ಲಿ ಹ್ಯಾಪಿ ಬರ್ತ್ ಡೇ ಟು ಯೂ… ವೇರ್ ಈಸ್ ಮೈ ಜಾಬ್? ವೇರ್ ಈಸ್ ಮೈ ಎಜುಕೇಶನ್? ವೇರ್ ಈಸ್ ಮೈ ಸೇಫ್ಟಿ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ ಅವರು, ನಿರುದ್ಯೋಗ ತಡೆಯದಿದ್ದಲ್ಲಿ ಕೇಂದ್ರ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ, ಶಿವಮೊಗ್ಗ ನಗರ ಅಧ್ಯಕ್ಷ ಚರಣ್ ಜಿ. ಶೆಟ್ಟಿ, ಗ್ರಾಮಾಂತರ ಅಧ್ಯಕ್ಷ ಪ್ರವೀಣ್ ಕುಮಾರ್ ಎಸ್. ಹಾಗೂ ಕಾಂಗ್ರೆಸ್ ಮುಖಂಡರಾದ ಮಧು, ದೇವೇಂದ್ರಪ್ಪ, ಶಿವುಕುಮಾರ್, ಕಲೀಂ ಪಾಷ, ಎನ್. ರಮೇಶ್, ಬಾಲಾಜಿ ಸೇರಿದಂತೆ ಹಲವರು ಭಾಗವಹಿಸಿದ್ದರು
