ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ನಟ ಯಶ್ ಅಭಿನಯದ ಟಾಕ್ಸಿಕ್ (Yash Toxic) ಚಿತ್ರದ ಕುರಿತು ಯಾವುದೇ ರೀತಿಯ ಸುಳ್ಳು ಹಾಗೂ ಮಾನಹಾನಿಕರ ಸುದ್ದಿಗಳನ್ನು ಪ್ರಕಟಿಸಬಾರದು ಅಥವಾ ಪ್ರಸಾರ ಮಾಡಬಾರದು ಎಂದು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಧ್ಯಂತರ ಪ್ರತಿಬಂಧಕಾಜ್ಞೆ ಹೊರಡಿಸಿದೆ. ಚಿತ್ರದ ಕುರಿತು ಅಪಪ್ರಚಾರ ನಡೆಯದಂತೆ ನಿರ್ದೇಶನ ನೀಡುವಂತೆ ಕೋರಿ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಎಲ್ಎಲ್‌ಪಿ ದಾಖಲಿಸಿದ್ದ ದಾವೆಯ ವಿಚಾರಣೆ ನಡೆಸಿದ ಬೆಂಗಳೂರಿನ 36ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಈ ಮಧ್ಯಂತರ ಆದೇಶ ನೀಡಿದೆ.
ಟಾಕ್ಸಿಕ್ ಚಿತ್ರದ ಬಿಡುಗಡೆಗೂ ಮುನ್ನ ಹಾಗೂ ಬಿಡುಗಡೆಯ ನಂತರವೂ ಯಾವುದೇ ಮಾಧ್ಯಮದ ಮೂಲಕ ಚಿತ್ರದ ಕುರಿತು ಸುಳ್ಳು, ದುರುದ್ದೇಶಪೂರಿತ, ಮಾನಹಾನಿಕರ ಹಾಗೂ ಅವಹೇಳನಕಾರಿ ಸುದ್ದಿಗಳನ್ನು ಪ್ರಕಟಿಸಬಾರದು ಅಥವಾ ಪ್ರಸಾರ ಮಾಡಬಾರದು. ಇದೇ ರೀತಿಯ ವಿಷಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಬಾರದು ಹಾಗೂ ಹಂಚಿಕೊಳ್ಳಬಾರದು ಎಂದು ನ್ಯಾಯಾಲಯ ಆದೇಶಿಸಿದೆ. ಈ ಮಧ್ಯಂತರ ಪ್ರತಿಬಂಧಕಾಜ್ಞೆ ಸೆಪ್ಟೆಂಬರ್ 28ರವರೆಗೆ ಜಾರಿಯಲ್ಲಿರಲಿದೆ ಎಂದು ನ್ಯಾಯಾಲಯ ತಿಳಿಸಿದೆ.
ಇದೇ ವೇಳೆ ನ್ಯಾಯಾಲಯ ಮಂಜೂರು ಮಾಡಿರುವ ಉದ್ದೇಶವನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೆ ಈ ಆದೇಶವನ್ನು ದಾವೆದಾರರಾದ ಕೆವಿಎನ್ ಪ್ರೊಡಕ್ಷನ್ಸ್ ಬಳಸಬಾರದು ಎಂಬ ಷರತ್ತನ್ನೂ ವಿಧಿಸಲಾಗಿದೆ. ಒಂದು ವೇಳೆ ಈ ಷರತ್ತನ್ನು ಉಲ್ಲಂಘಿಸಿದರೆ ಮಧ್ಯಂತರ ಆದೇಶವು ಸ್ವಯಂಚಾಲಿತವಾಗಿ ತೆರವಾಗಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹೀಗಾಗಿ ಸೆಪ್ಟೆಂಬರ್ 28ರವರೆಗೆ ಟಾಕ್ಸಿಕ್ ಚಿತ್ರದ ಕುರಿತು ಯಾರಾದರೂ ಸುಳ್ಳು, ದುರುದ್ದೇಶಪೂರಿತ, ಮಾನಹಾನಿಕರ ಅಥವಾ ಅವಹೇಳನಕಾರಿ ವಿಷಯವನ್ನು ಪ್ರಕಟಿಸಿದರೆ, ಪ್ರಸಾರ ಮಾಡಿದರೆ, ಪೋಸ್ಟ್ ಮಾಡಿದರೆ ಅಥವಾ ಹಂಚಿಕೊಂಡರೆ ನ್ಯಾಯಾಲಯದ ಆದೇಶ ಉಲ್ಲಂಘನೆಯ ಆರೋಪದಡಿ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಲು ಚಿತ್ರ ನಿರ್ಮಾಣ ಸಂಸ್ಥೆಗೆ ಅವಕಾಶ ಇರಲಿದೆ.
