ಮಲೆನಾಡು ಟುಡೆ ಸುದ್ದಿ / ಸಾಗರ / ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ (Senior RSS Leader), ಸೇವಾಸಾಗರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದ ತಾಲೂಕಿನ ಹಂಸಗಾರು ಮೂಲದ ಆ.ಪು. ನಾರಾಯಣಪ್ಪ (82) ಅವರು ಮಂಗಳವಾರ ನಿಧನರಾದರು. ಅವರಿಗೆ ಪತ್ನಿ ಹಾಗೂ ಮಗಳು ಇದ್ದಾರೆ. ಸಾಗರ ಪಟ್ಟಣದ ವಿನೋಬನಗರ ನಿವಾಸಿಯಾಗಿದ್ದ ನಾರಾಯಣಪ್ಪ ಅವರು 60ಕ್ಕೂ ಹೆಚ್ಚು ವರ್ಷಗಳಿಂದ ಸಂಘ ಪರಿವಾರದೊಂದಿಗೆ ನಿಕಟ ಸಂಬಂಧ ಹೊಂದಿದ್ದು, ವಿವಿಧ ಸಂಘಟನಾ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮೂಲತಃ ಸಾಗರ ತಾಲೂಕಿನ ಹಂಸಗಾರು ಗ್ರಾಮದವರಾದ ಅವರು ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮ ಟ್ರಸ್ಟ್ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಸುತ್ತಿದ್ದ ಪ್ರೌಢಶಾಲೆಗಳಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ 6 ವರ್ಷಗಳಿಂದ ಸಾಗರದ ಪ್ರಮುಖ ಶಿಕ್ಷಣ ಸಂಸ್ಥೆಯಾಗಿರುವ ಸೇವಾಸಾಗರ ಟ್ರಸ್ಟ್ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಶಿಕ್ಷಣ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯಲ್ಲಿ ಬೆಳೆದಿದ್ದ ಅವರು ಸರಳತೆ, ಶಿಸ್ತು ಹಾಗೂ ಸೇವಾಭಾವದಿಂದ ಗುರುತಿಸಿಕೊಂಡಿದ್ದರು.
ರಾಮಚಂದ್ರಾಪುರ ಮಠದ ವಿವಿಧ ಸೇವಾ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ನಾರಾಯಣಪ್ಪ ಅವರು ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಜವಾಬ್ದಾರಿಯಲ್ಲಿಯೂ ಸೇವೆ ಸಲ್ಲಿಸಿದ್ದರು. ಸಾಗರದಲ್ಲಿ ಹಿಂದೂಪರ ಸಂಘಟನೆಗಳು ಹಾಗೂ ಸಂಘ ಪರಿವಾರದ ವತಿಯಿಂದ ನಡೆಯುತ್ತಿದ್ದ ಪ್ರತಿಭಟನೆಗಳು ಮತ್ತು ಕಾರ್ಯಕ್ರಮಗಳಲ್ಲಿ ಅವರು ವಯೋಸಹಜ ಸಮಸ್ಯೆಗಳ ನಡುವೆಯೂ ಪಾಲ್ಗೊಳ್ಳುತ್ತಿದ್ದರು. ಊರುಗೋಲಿನ ಸಹಾಯದಿಂದ ನಡೆದುಕೊಂಡು ಬಂದು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಅವರು, ಇಳಿ ವಯಸ್ಸಿನಲ್ಲಿಯೂ ವಿವಿಧ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು.
ಹಿಂದೂಪರ ಸಂಘಟನೆಗಳು ನಡೆಸುತ್ತಿದ್ದ ಹೋರಾಟ ಹಾಗೂ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನಾರಾಯಣಪ್ಪ ಅವರು ತಮ್ಮ ಭಾಷಣಗಳ ಮೂಲಕ ಹಲವು ವಿಷಯಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಅವರ ನಿಧನಕ್ಕೆ ಸಾಗರದ ವಿವಿಧ ಹಿಂದೂಪರ ಸಂಘಟನೆಗಳು ಸಂತಾಪ ಸೂಚಿಸಿವೆ. ಪಟ್ಟಣದ ಸೇವಾಸಾಗರ ಶಾಲೆಯಲ್ಲಿ ನಾರಾಯಣಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅನೇಕ ಗಣ್ಯರು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ಸಂಜೆ ಪಟ್ಟಣದ ವಿನೋಬನಗರದಲ್ಲಿರುವ ಅವರ ಮನೆಯ ಆವರಣದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಬಳಿಕ ರಾತ್ರಿ ಹಂಸಗಾರು ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ನಾರಾಯಣಪ್ಪ ಅವರ ನಿಧನಕ್ಕೆ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಎಚ್. ಹಾಲಪ್ಪ, ತಾಲೂಕು ಬಿಜೆಪಿ ಪ್ರಮುಖರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ. ವಿಶ್ವ ಹಿಂದೂ ಪರಿಷತ್, ಬಜರಂಗದಳದ ಪ್ರಮುಖರು, ರಾಜ್ಯೋತ್ಸವ ಬಳಗದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳು ಸಂತಾಪ ವ್ಯಕ್ತಪಡಿಸಿವೆ. ಸಂಸದ ಬಿ.ವೈ. ರಾಘವೇಂದ್ರ ಅವರು ಸಂತಾಪ ಸಂದೇಶದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡರಾಗಿದ್ದ ನಾರಾಯಣಪ್ಪ ಅವರು ಸೇವಾಸಾಗರ ಟ್ರಸ್ಟ್ನ ಅಧ್ಯಕ್ಷರಾಗಿ ಹಾಗೂ ಶ್ರೀರಾಮ ಮಂದಿರ ಹೋರಾಟದ ಹಿರಿಯ ನಾಯಕರಲ್ಲಿ ಒಬ್ಬರಾಗಿ ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಿದ್ದರು ಎಂದು ಸ್ಮರಿಸಿದ್ದಾರೆ.
ನಾರಾಯಣಪ್ಪ ಅವರು ತಮ್ಮ ಸಾರ್ವಜನಿಕ ಜೀವನವನ್ನು ರಾಷ್ಟ್ರಭಕ್ತಿ, ಭಾರತೀಯ ಸಂಸ್ಕೃತಿ, ಸಾಮಾಜಿಕ ಸೇವೆ ಹಾಗೂ ಮೌಲ್ಯಾಧಾರಿತ ಶಿಕ್ಷಣದ ಧ್ಯೇಯಗಳಿಗೆ ಸಮರ್ಪಿಸಿಕೊಂಡಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾಗಿ ಸಂಘಟನಾ ಶಿಸ್ತು, ನಿಷ್ಠೆ ಮತ್ತು ಸೇವಾ ಮನೋಭಾವದ ಮೂಲಕ ಸಮಾಜದಲ್ಲಿ ರಾಷ್ಟ್ರೀಯ ಹಾಗೂ ಸಾಂಸ್ಕೃತಿಕ ಪ್ರಜ್ಞೆ ಬೆಳೆಸಲು ಕೊಡುಗೆ ನೀಡಿದ್ದರು ಎಂದು ರಾಘವೇಂದ್ರ ತಿಳಿಸಿದ್ದಾರೆ.ಸೇವಾಸಾಗರ ಟ್ರಸ್ಟ್ನ ಅಧ್ಯಕ್ಷರಾಗಿ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿರುವ ಸಂಸದರು, ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಾಗದೆ ಉತ್ತಮ ವ್ಯಕ್ತಿತ್ವ ಹಾಗೂ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಮಾಧ್ಯಮವಾಗಬೇಕು ಎಂಬ ಮೌಲ್ಯಾಧಾರಿತ ಚಿಂತನೆಯೊಂದಿಗೆ ಸಂಸ್ಥೆಯ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಿದ್ದರು ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ, ಸಂಸ್ಕಾರ, ನೈತಿಕತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಭಾವನೆ ಬೆಳೆಸುವ ಕುರಿತು ಅವರು ವಿಶೇಷ ಆಸಕ್ತಿ ಹೊಂದಿದ್ದರು. ಅವರ ಅಗಲಿಕೆಯಿಂದ ಸಂಘಟನೆ, ಶಿಕ್ಷಣ, ಸಂಸ್ಕೃತಿ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಹಿರಿಯ ಮಾರ್ಗದರ್ಶಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಬಿ.ವೈ. ರಾಘವೇಂದ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
“ಸೇವೆ, ಸಂಸ್ಕಾರ ಮತ್ತು ರಾಷ್ಟ್ರಭಕ್ತಿ” ಎಂಬ ಮೌಲ್ಯಗಳನ್ನು ತಮ್ಮ ಬದುಕಿನ ಮೂಲಕ ಪ್ರತಿಬಿಂಬಿಸಿದ ಅವರ ಜೀವನ ಹಾಗೂ ಸೇವಾ ಕೊಡುಗೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಕುಟುಂಬದ ಸದಸ್ಯರು, ಬಂಧು-ಬಳಗ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಸಂಸದರು ಸಂತಾಪ ಸೂಚಿಸಿದ್ದಾರೆ.
