ಶಿಕಾರಿಪುರ ಮಲೆನಾಡು ಟುಡೆ ಸುದ್ದಿ : ಕರ್ತವ್ಯ ನಿರತರಾಗಿದ್ದ ಅರಣ್ಯ ಇಲಾಖೆಯ ಪ್ಲಾಂಟೇಶನ್ ವಾಚರ್ ಒಬ್ಬರ ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ತಾಲೂಕಿನ ತರಲಘಟ್ಟ ಗ್ರಾಮ ಪಂಚಾಯಿತಿ ಅರಣ್ಯ ವ್ಯಾಪ್ತಿಯ ಶಿಡಿಗಿನಾಳು ಗ್ರಾಮದಲ್ಲಿ ಸಂಭವಿಸಿದೆ.ಅರಣ್ಯ ಇಲಾಖೆ ಸಿಬ್ಬಂದಿ ಕೆ.ಎನ್. ರಾಮು ಗಾಯಗೊಂಡವರಾಗಿದ್ದು, ಪ್ರಸ್ತುತ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ
ಬುಧವಾರ ರಾತ್ರಿ ರಾಮು ಅವರು ಶಿಡಿಗಿನಾಳು ಗ್ರಾಮದ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ದಿಢೀರನೆ ಪ್ರತ್ಯಕ್ಷವಾದ ಕರಡಿಯೊಂದು ಅವರ ಮೇಲೆ ದಾಳಿ ಮಾಡಿದೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡು ರಾಮು ಚೀರಾಡಿದ್ದಾರೆ. ಚೀರಿದ ಶಬ್ದ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿ ತಕ್ಷಣ ಅವರನ್ನು ರಕ್ಷಿಸಿ ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.
ವಿಷಯ ತಿಳಿದ ತಕ್ಷಣವೇ ಸಾಗರ ವಿಭಾಗದ ಡಿಎಫ್ಒ (DFO) ಮಹಮ್ಮದ್ ಫಯಾಜುದ್ದಿನ್, ಶಿಕಾರಿಪುರ ವಲಯದ ಎಸಿಎಫ್ (ACF) ರವೀಂದ್ರ ನಾಯ್ಕ ಹಾಗೂ ವಲಯ ಅರಣ್ಯಾಧಿಕಾರಿ (RFO) ಪರಶುರಾಮ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ರಾಮು ಅವರ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದರು.
